More

    ಲಂಚಾವತಾರ ಬೆಂಗಳೂರು ತಲುಪುತ್ತಿದೆ

    ಮದ್ದೂರು: ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬುಧವಾರ ದಿಢೀರ್ ಭೇಟಿ ಆಗಮಿಸಿ ರೈತರು ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಸಚಿವರು, ತಾಲೂಕು ಕಚೇರಿಯ ಟಪಾಲು ಶಾಖೆ, ಪಿಂಚಣಿ ಶಾಖೆ, ಭೂ ದಾಖಲೆ ಹಾಗೂ ಪಡಿತರ ಶಾಖೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಕ್ರಿಯಾತ್ಮಕವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ನಂತರ ಉಪ ನೋಂದಣಿ ಕಚೇರಿಗೆ ತೆರಳಿದ ಸಚಿವ ಕೃಷ್ಣ ಭೈರೇಗೌಡ ಅವರು, ಮದ್ದೂರು ಉಪ ನೋಂದಣಿ ಕಚೇರಿಯಲ್ಲಿ ನಡೆಯುತ್ತಿರುವ ಲಂಚಾವತಾರ ಬೆಂಗಳೂರು ತಲುಪುತ್ತಿದೆ. ನಿತ್ಯ ಜನರು ನನ್ನ ಬಳಿ ಬಂದು ಇಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ಹಣ ವಸೂಲಿಗಿಳಿದಿರುವುದು ನನ್ನ ಗಮನಕ್ಕೆ ಬಂದಿದೆ. ಇನಾಮು ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವುದು ಹಾಗೂ ದಾಖಲೆಗಳು ಸರಿಯಿದ್ದರೂ ಲಂಚಕ್ಕೆ ಬೇಡಿಕೆಯಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ನಿನ್ನೆ ಮಾಡಿದ್ದ ಕಲೆಕ್ಷನ್ ಹಣವನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಲು ಹೋಗಿದ್ದೀರಾ? ಎಂದು ಪ್ರಶ್ನಿಸುವ ಮೂಲಕ ಹಿರಿಯ ಉಪನೋಂದಣಿಕಾರಿ ದಿನೇಶ್ ಅವರಿಗೆ ಜನರೇ ಎದುರಲ್ಲೇ ಬೆವರಿಳಿಸಿದರು.

    ದೇವರ ಮೇಲೆ ಪ್ರಮಾಣ: ಈ ವೇಳೆ ರೈತನೊಬ್ಬ ಮಧ್ಯೆ ಪ್ರವೇಶಿಸಿ ನನ್ನ ದಾಖಲೆಗಳು ಸರಿಯಿದ್ದರೂ ನನ್ನ ಆಸ್ತಿ ನೋಂದಣಿ ಮಾಡಿಕೊಡುತ್ತಿಲ್ಲ. ಉಪ ನೋಂದಣಿ ಅಧಿಕಾರಿ ದಿನೇಶ್ ಅವರು 15 ಸಾವಿರ ರೂ. ಹಣ ಪಡೆದುಕೊಂಡಿದ್ದಾರೆ. ಇನ್ನೊಮ್ಮೆ ಹಣ ಕೇಳಿದರು. ನಾನು ಹಣ ನೀಡದಿದ್ದಾಗ ಇನ್ನು 6 ತಿಂಗಳು ಅಲೆಸುತ್ತೇನೆ ಎಂದು ನನಗೆ ಧಮ್ಕಿ ಹಾಕಿದ್ದಾರೆ ಎಂದು ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ತಮ್ಮ ಅಸಹಾಯಕತೆಯನ್ನು ಸಚಿವರ ಬಳಿ ತೋಡಿಕೊಂಡರು.ಈ ವೇಳೆ ಸಚಿವರು, ದಿನೇಶ್ ಅವರು ನಿಮ್ಮನ್ನೇ (ರೈತನನ್ನ) ನೋಡುತ್ತಿದ್ದಾರೆ. 6 ತಿಂಗಳಾಗುವ ಕೆಲಸ ವರ್ಷ ಆಗುತ್ತದೆ ಎಂದು ದಿನೇಶ್ ಅವರ ಕಾರ್ಯ ವೈಖರಿ ಬಗ್ಗೆ ಸಿಡಿಮಿಡಿಗೊಂಡರು. ಆಗ ದಿನೇಶ್ ಅವರು ಮಧ್ಯೆಪ್ರವೇಶಿಸಿ ಸರ್, ನಾನೇನು ಮಾಡಿಲ್ಲ ಎಂದರು. ಆಗ ಸಿಟ್ಟಾದ ಸಚಿವರು ಹೌದಪ್ಪ ಜನರು ನನಗೆ ಸುಳ್ಳು ಹೇಳುತ್ತಿದ್ದಾರೆ. ಇಲ್ಲಿ ಬಂದಿರುವ ರೈತರು ಸಹ ಸುಳ್ಳು ಹೇಳುತ್ತಿದ್ದಾರೆ. ನಿನ್ನೊಬ್ಬನೇ ಸತ್ಯ ಹರಿಶ್ಚಂದ್ರ ಎನ್ನುವ ಮೂಲಕ ಹಿರಿಯ ನೋದಂಣಿ ಅಧಿಕಾರಿ ದಿನೇಶ್ ಅವರ ಕಾರ್ಯವೈಖರಿಗೆ ಕಿಡಿಕಾರಿದರು.

    ಇ-ತಂತ್ರಾಶದಲ್ಲಿ ಸಾಧನೆಯಿಲ್ಲ: ಸರ್ಕಾರಿ ರಸ್ತೆಗಳ ಒತ್ತುವರಿ ತೆರವು ಮಾಡಿ ರೈತರಿಗೆ ಅನುಕೂಲವಾಗುವಂತೆ ಬಂಡಿ ದಾರಿಗಳನ್ನು ನಿರ್ಮಿಸದೆ ಏಕೆ ರೈತರನ್ನುಅಲೆದಾಡುಸುತ್ತಿದ್ದೀರಿ ? ಇ-ತಂತ್ರಾಶದಲ್ಲಿ ಮಂಡ್ಯ ಜಿಲ್ಲೆ ಏನೇನು ಸಾಧನೆ ಮಾಡಿಲ್ಲ, ಈಗಾದರೆ ಸಾರ್ವಜಕರಿಗೆ ಮತ್ತು ರೈತರಿಗೆ ಹೇಗೆ ಸೇವೆ ನೀಡುತ್ತೀರಿ ? ನೀವು ಯುವಕರಿದ್ದೀರಿ ಜಿಲ್ಲಾಡಳಿತನ್ನು ಚುರುಕುಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದರು.

    ಸ್ವಂತ ವಾಹನದಲ್ಲಿ ಬಂದ ಸಚಿವರು: ಕ್ಯಾಬಿನೆಟ್ ದರ್ಜೆ ಸಚಿವ ಕೃಷ್ಣ ಭೈರೇಗೌಡ ಅವರು ಎಸ್ಕಾರ್ಟ್ ಪಡೆದುಕೊಳ್ಳದೆ ಸರ್ಕಾರದ ಸಚಿವರ ಕಾರವನ್ನು ಬಳಸದೆ ಗನ್ ಮತ್ತು ಪಿಎಸ್ ಅವರನ್ನು ಕರೆದುಕೊಂಡು ಬಾರದೆ ತಾವೇ ತಮ್ಮ ಸ್ವಂತ ವಾಹವನ್ನು ಚಲಾಯಿಸಿಕೊಂಡು ತಾಲೂಕು ಕಚೇರಿಗೆ ಬಂದಿದ್ದು ಸಾರ್ವಜನಿಕರ ಪ್ರಶಂಸೆ ಪಾತ್ರವಾಯಿತು. ಈ ವೇಳೆ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸಚಿವರಿಗೆ ಎಳನೀರು ನೀಡಿದರು. ನಂತರ ಶಾಸಕ ಕೆ.ಎಂ.ಉದಯ್ ಅವರು ಸಚಿವರನ್ನು ಅಭಿನಂದಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಉಪ ವಿಭಾಗಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts