More

    ಗಂಗೊಳ್ಳಿ – ಕೋಡಿ ಅಳಿವೆಯಲ್ಲಿ ಮರಳು ದಿಬ್ಬ, ಬೋಟ್ ಸಂಚಾರಕ್ಕೆ ತೊಂದರೆ

    ಗಂಗೊಳ್ಳಿ: ಕೋಡಿ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿ ಮೀನುಗಾರರಿಗೆ ತೊಂದರೆಯಾಗುತ್ತಿದ್ದು, ಕಳೆದ ವರ್ಷ ಮೂರು ಮೀನುಗಾರಿಕಾ ಬೋಟುಗಳು ಈ ಪ್ರದೇಶದಲ್ಲಿ ಅವಘಡಕ್ಕೀಡಾಗಿದೆ. ಇನ್ನೂ ಹೂಳೆತ್ತುವ ಕಾರ್ಯ ಆರಂಭಿಸದಿರುವುದರಿಂದ ಮೀನುಗಾರರು ಆತಂಕದಲ್ಲೇ ದಿನ ಕಳೆಯುವಂತಾಗಿದೆ.

    ಕೋಡಿ-ಗಂಗೊಳ್ಳಿ ನಡುವಿನ ಪಂಚಗಂಗಾವಳಿ ಹೊಳೆಯಲ್ಲಿರುವ ಮರಳು ನೇರವಾಗಿ ಗಂಗೊಳ್ಳಿ ಅಳಿವೆ ಬಾಗಿಲು ಸೇರಿ ಅಲ್ಲಲ್ಲಿ ಮರಳು ದಿಬ್ಬ ಶೇಖರಣೆಯಾಗುತ್ತಿವೆ. ಇದರಿಂದ ನದಿ ಪಾತ್ರ ಬದಲಾಗುವ ಆತಂಕ ಎದುರಾಗಿದೆ. ಅಳಿವೆ ಪ್ರದೇಶದ ಹಲವೆಡೆ ಮರಳು ಶೇಖರಣೆಗೊಂಡಿರುವುದರಿಂದ ಅನಾಹುತಗಳಿಗೆ ಕಾರಣವಾಗುತ್ತಿದೆ. ಗಂಗೊಳ್ಳಿ ಬಂದರು ಹಾಗೂ ಕೋಡಿಯಿಂದ ಮೀನುಗಾರಿಕೆಗೆ ತೆರಳುವ ದೋಣಿ ಹಾಗೂ ಬೋಟುಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಗಂಗೊಳ್ಳಿ ಬ್ರೇಕ್ ವಾಟರ್ ಕಾಮಗಾರಿ ಸಂದರ್ಭ ತೆಗೆಯಲಾದ ಮಣ್ಣು ಇನ್ನೂ ತೆರವುಗೊಳಿಸಿಲ್ಲ. ಅಲ್ಲದೇ ಹೂಳೆತ್ತದೆ ಹಲವು ವರ್ಷ ಕಳೆದಿದೆ.

    ಗಂಗೊಳ್ಳಿ ಹಾಗೂ ಕೋಡಿ ಅಳಿವೆ ಪ್ರದೇಶದಲ್ಲಿ ಅನುಷ್ಠಾನಗೊಂಡ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವ ಬಗ್ಗೆ ಅನುದಾನ ಮೀಸಲಿರಿಸಲಾಗಿದೆ. ಆದರೆ ಈವರೆಗೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಕಳೆದ ಅನೇಕ ವರ್ಷಗಳಿಂದ ಹೂಳೆತ್ತುವಂತೆ ಮೀನುಗಾರರು ವಿವಿಧ ಸರ್ಕಾರಗಳನ್ನು ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಶೀಘ್ರ ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ ಹೂಳೆತ್ತಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಕೋಡಿ ಹಾಗೂ ಗಂಗೊಳ್ಳಿ ಭಾಗದ ಮೀನುಗಾರರು ಒತ್ತಾಯಿಸಿದ್ದಾರೆ.

    ಗಂಗೊಳ್ಳಿ-ಕೋಡಿ ಅಳಿವೆ ಪ್ರದೇಶದಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯಲು ನಾವು ಅನೇಕ ಬಾರಿ ಸಂಬಂಧಪಟ್ಟ ಸಂಸದರು, ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಹೂಳೆತ್ತಲು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರೂ, ಇಲಾಖೆಯ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.
    -ಎಚ್.ಮಂಜು ಬಿಲ್ಲವ, ಅಧ್ಯಕ್ಷರು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ ಗಂಗೊಳ್ಳಿ

    ಗಂಗೊಳ್ಳಿ ಬಂದರಿನ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವ ಬಗ್ಗೆ ಸರ್ವೇ ನಡೆಸಲಾಗಿದ್ದು, ವರದಿ ಬಂದ ಬಳಿಕ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸದ್ಯ ಹೂಳೆತ್ತಲು ಯಾವುದೇ ಪ್ರಸ್ತಾವನೆ ಇಲಾಖೆ ಮುಂದಿಲ್ಲ.
    -ಗಣೇಶ ಕೆ., ಜಂಟಿ ನಿರ್ದೇಶಕರು (ಪ್ರಭಾರ), ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts