More

    ಮೀಸಲು ಧ್ವನಿಯಲ್ಲಿ ಒಡಕು: ಪಂಚಮಸಾಲಿ ಹೋರಾಟದಲ್ಲಿ ರಾಜಕೀಯ; ವಿಭಜನೆಯ ಕಾರ್ಮೋಡ..

    ಬೆಂಗಳೂರು: ಸಮುದಾಯವನ್ನು ಹಿಂದುಳಿದ ಪ್ರವರ್ಗ 2ಎಗೆ ಸೇರಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಪಂಚಮಸಾಲಿ ಸಮುದಾಯ ಆರಂಭಿಸಿರುವ ಐತಿಹಾಸಿಕ ಹೋರಾಟದಲ್ಲೀಗ ರಾಜಕೀಯ ಬಣ್ಣದೊಂದಿಗೆ ಬಿರುಕು ಕಾಣಿಸಿಕೊಂಡಿದೆ. ಹೋರಾಟದ ನೇತೃತ್ವ ವಹಿಸಿರುವ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯಾನಂದ ಕಾಶಪ್ಪನವರ್ ವಿರುದ್ಧವೇ ಆಕ್ರೋಶ ವ್ಯಕ್ತವಾಗಿದೆ.

    ಭಾನುವಾರ ಪಾದಯಾತ್ರೆಯ ನಂತರ ದಿಢೀರ್ ಧರಣಿಗೆ ಮುಂದಾಗಿದ್ದರಿಂದ ಬಿಜೆಪಿ ಸಚಿವರು, ಶಾಸಕರು ಸೋಮವಾರ ಸುದ್ದಿಗೋಷ್ಠಿ ನಡೆಸಿ ಶ್ರೀಗಳ ಜತೆಗೆ ಯತ್ನಾಳ್ ಹಾಗೂ ಕಾಶಪ್ಪನವರ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಮುಂದೆ ಸಮುದಾಯಕ್ಕೆ ಯಾವುದೇ ತೊಂದರೆಯಾದರೂ ಅದಕ್ಕೆ ಸ್ವಾಮೀಜಿಯೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವರಾದ ಸಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ ಹಾಗೂ ಶಾಸಕರು ಸುದ್ದಿಗೋಷ್ಠಿ ನಡೆಸಿದರು.

    ಪಂಚಮಸಾಲಿ ಸಮುದಾಯದ ಹಿತದೃಷ್ಟಿಯಿಂದ ನಡೆದ ಪಾದಯಾತ್ರೆ, ಬೃಹತ್ ಸಮಾವೇಶವನ್ನು ಕೆಲವು ಸ್ವಾರ್ಥಸಾಧಕರು ದುರ್ಬಳಕೆ ಮಾಡಿಕೊಂಡರು. ಈ ಹೋರಾಟವೀಗ ರಾಜಕೀಯ ತಿರುವು ಪಡೆದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಮಾವೇಶ ಪೂರ್ವ ತುಮಕೂರಿನಲ್ಲಿ ನಡೆದ ಸಮುದಾಯದ ಜನಪ್ರತಿನಿಧಿಗಳು, ಮುಖಂಡರ ಸಮಕ್ಷಮ ಸಭೆಯಲ್ಲಿ ಕೈಗೊಂಡ ತೀರ್ವನಕ್ಕೆ ವಿರುದ್ಧವಾಗಿ ಸ್ವಾಮೀಜಿ ನಡೆದುಕೊಂಡಿ ರುವುದು ಬೇಸರ ತಂದಿದೆ ಎಂದು ಸಚಿವರಿಬ್ಬರು ಹೇಳಿದರು. ಮನವೊಲಿಸುವ ಉದ್ದೇಶದಿಂದ ಸಮಾವೇಶಕ್ಕೆ ಹೋಗಿದ್ದೆವು. ಸ್ವಾಮೀಜಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇದ್ದಕ್ಕಿದ್ದಂತೆ ಸ್ವಾತಂತ್ರ್ಯ ಉದ್ಯಾನವರೆಗೆ ಪಾದಯಾತ್ರೆ, ಧರಣಿ, ಉಪವಾಸದ ನಿರ್ಧಾರ ಕೈಗೊಂಡಿರುವುದು ದುರದೃಷ್ಟಕರ ಎಂದರು.

    ಸಮಸ್ತ ಲಿಂಗಾಯತ ಸೇರ್ಪಡೆ: ಪಂಚಮಸಾಲಿಗಳ ಜತೆಗೆ ಸಮಸ್ತ ಲಿಂಗಾಯತ ಪಂಗಡಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಸಿಎಂ ಬದ್ಧವಾಗಿದ್ದಾರೆ. ಆದರೆ ಅನಗತ್ಯ ರಾಜಕೀ ಯದ ಅಗತ್ಯವಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

    ಹಿಡಿತದಿಂದ ಹೊರಬರಲಿ: ಯತ್ನಾಳ್ ಮತ್ತು ಕಾಶಪ್ಪನವರ್ ಹಿಡಿತದಿಂದ ಸ್ವಾಮೀಜಿ ಹೊರಬಂದು ಸ್ವಂತ ನಿರ್ಧಾರ ಕೈಗೊಳ್ಳಬೇಕು. ಹೋರಾಟ ಕೈಬಿಟ್ಟು ಸರ್ಕಾರದ ಜತೆಗೆ ಮಾತುಕತೆಗೆ ಬರಲಿ. ಸಮುದಾಯದ ಇಚ್ಛೆಯಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ಆಗುಹೋಗುಗಳಿಗೆ ಜಯಮೃತ್ಯುಂಜಯ ಸ್ವಾಮೀಜಿ, ಯತ್ನಾಳ್ ಮತ್ತು ಕಾಶಪ್ಪನವರ್ ಹೊಣೆಗಾರರಾಗುತ್ತಾರೆ ಎಂದು ಸಚಿವರು ಎಚ್ಚರಿಸಿದರು.

    ಕಾಶಪ್ಪನವರ್ ಕೊಡುಗೆ ಏನು?: ಪ್ರವರ್ಗ 2ಎಗೆ ಸೇರಿಸಬೇಕೆಂಬ ಸಮುದಾಯದ ಬೇಡಿಕೆ ಹೊಸದೇನಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಶಾಸಕರಾಗಿದ್ದ ಕಾಶಪ್ಪನವರ್ ಅವರು ಸಮುದಾಯಕ್ಕೆ ನೀಡಿದ ಕೊಡುಗೆ ಏನು? ಅವರ ಅಪ್ಪ ಕೂಡ ಸಚಿವ, ಪಂಚಮಸಾಲಿ ಸಮುದಾಯದ ಅಧ್ಯಕ್ಷರಾಗಿ ಮಾಡಿದ್ದೇನು? ಎಂದು ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದರು. ಯತ್ನಾಳ್ ಕಾಂಗ್ರೆಸ್​ನ ಬಿ ಟೀಮ್ ಸದುದ್ದೇಶದ ಚಳವಳಿ, ಸಮಾವೇಶವನ್ನು ಸ್ವಾರ್ಥಕ್ಕೆ ಬಳಸಿಕೊಂಡ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್​ನ ಬಿ ಟೀಮ್ಂತೆ ವರ್ತಿಸುತ್ತಿದ್ದಾರೆ. ಸಮುದಾಯದ ಬಗ್ಗೆ ಅವರಿಗೆ ಕಿಂಚಿತ್ ಕಾಳಜಿಯಿಲ್ಲವೆಂದು ನಿರಾಣಿ ಹರಿಹಾಯ್ದರು.

    ಯತ್ನಾಳ್​ಗೆ ರಾಜೀನಾಮೆ ಸವಾಲು: ‘ಪಕ್ಷದ ಹಿರಿಯ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ, ವಾಗ್ದಾಳಿ ನಡೆಸುವುದೇ ಯತ್ನಾಳ್ ಚಾಳಿಯಾಗಿದೆ. ನೈತಿಕತೆಯಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬರಲಿ. ಪಕ್ಷದ ವರಿಷ್ಠರು, ಸಂಘ-ಪರಿವಾರ ಹಾಗೂ ಬಿಎಸ್​ವೈ ಆಶೀರ್ವಾದದಿಂದ ಯತ್ನಾಳ್ ಪಕ್ಷದ ಟಿಕೆಟ್ ಗಿಟ್ಟಿಸಿಕೊಂಡರು ಎಂಬುದನ್ನು ಮರೆಯಬಾರದು. ನನ್ನ ರಾಜೀನಾಮೆ ಕೇಳಲು ಯತ್ನಾಳ್ ಯಾರು?’ ಎಂದು ನಿರಾಣಿ ಆಕ್ರೋಶ ವ್ಯಕ್ತಪಡಿಸಿದರು. ಸಮುದಾಯದ ಸಮಾವೇಶದಲ್ಲಿ ಸಿಎಂ ಬಿಎಸ್​ವೈ, ಅವರ ಪುತ್ರ ವಿಜಯೇಂದ್ರ ವಿರುದ್ಧ ವ್ಯಕ್ತಿಗತ ಟೀಕೆ ಮಾಡಿರುವುದನ್ನು ಖಂಡಿಸಿದರು.

    ಹಾಳಾಗಬಾರದೆಂದು ಸಂಯಮ: ಸಮಾವೇಶದಲ್ಲಿಯೇ ಯತ್ನಾಳ್ ಭಾಷಣಕ್ಕೆ ಏಕೆ ವಿರೋಧ ಸೂಚಿಸಲಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಸಚಿವದ್ವಯರು, ‘ಸಮಾವೇಶ ಹಾಳಾಗಬಾರದೆಂಬ ಕಾರಣಕ್ಕೆ ಮೌನವಾಗಿ ಭಾಗವಹಿಸಿ ಬಂದಿದ್ದೇವೆ. ಹಾಗೆಂದು ಅದು ನಮ್ಮ ದೌರ್ಬಲ್ಯವಲ್ಲ’ ಎಂದರು.

    ಸ್ವಯಂಘೋಷಿತ ನಿರ್ಧಾರ: ಹಲವಾರು ಮೊಕದ್ದಮೆಗಳು, ಕ್ರಿಮಿನಲ್ ಹಿನ್ನೆಲೆಯುಳ್ಳ ಕಾಶಪ್ಪನವರ್ ಅವರನ್ನು ಸಮುದಾಯದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿರುವುದು ಸ್ವಾಮೀಜಿ ಸ್ವಯಂಘೋಷಿತ ನಿರ್ಧಾರವಾಗಿದ್ದು, ಕಳಂಕಿತ ವ್ಯಕ್ತಿಗೆ ಈ ಜವಾಬ್ದಾರಿ ನೀಡುವುದನ್ನು ಒಪು್ಪವುದಿಲ್ಲ, ಈ ರೀತಿಯಲ್ಲಿ ಘೋಷಣೆ ಮಾಡಲು ಸ್ವಾಮೀಜಿಗೂ ಹಕ್ಕಿಲ್ಲವೆಂದು ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು. ಪಂಚಮಸಾಲಿ ಸಮುದಾಯದ ಕೂಡಲಸಂಗಮ ಟ್ರಸ್ಟ್ ಅಥವಾ ಸಮುದಾಯದ ಮುಖಂಡರ ಜತೆಗೆ ರ್ಚಚಿಸದೆ ಸ್ವಾಮೀಜಿ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಸರಿಯಲ್ಲವೆಂದು ನಿರಾಣಿ ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಸಿದ್ದು ಸವದಿ, ಮಹೇಶ್ ಕುಮಠಳ್ಳಿ, ಕಳಕಪ್ಪ ಬಂಡಿ, ವಿರುಪಾಕ್ಷಪ್ಪ ಬಳ್ಳಾರಿ, ಹನುಮಂತ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಅರುಣ್​ಕುಮಾರ್, ಸಿಎಂ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ ಹಾಗೂ ಇತರರು ಉಪಸ್ಥಿತರಿದ್ದರು.

    ಯತ್ನಾಳ್ ವಿರುದ್ಧ ಜೆ.ಪಿ.ನಡ್ಡಾ ಗರಂ

    ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ರಾಜ್ಯ ಸರ್ಕಾರದ ವಿರುದ್ಧ ನಿತ್ಯವೂ ಆರೋಪಗಳ ಸುರಿಮಳೆಗೈಯ್ಯುತ್ತಿದ್ದ ವಿಜಯಪುರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ವರ್ತನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗರಂ ಆಗಿದ್ದಾರೆ. ಭಾನುವಾರ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಬೆನ್ನಲ್ಲೇ ಯತ್ನಾಳ್ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿತ್ತು. ಸೋಮವಾರ ತಮ್ಮನ್ನು ಭೇಟಿ ಮಾಡಿದ್ದ ವೇಳೆ ಯತ್ನಾಳ್ ಬಗ್ಗೆ ನಡ್ಡಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಶಿಸ್ತು ಮೀರಿ ವರ್ತಿಸುವುದನ್ನು ಯಾರೂ ಸಹಿಸುವುದಿಲ್ಲ ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ನಿಮಗೆ ಎಚ್ಚರಿಕೆ ನೀಡಲಾಗಿತ್ತು. ಹಾಗಿದ್ದರೂ, ಬಹಿರಂಗ ಹೇಳಿಕೆ ನೀಡುತ್ತಿದ್ದೀರಿ. ಏನೇ ಸಮಸ್ಯೆ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ರ್ಚಚಿಸಬೇಕು. ಪಕ್ಷದ ಶಾಸಕರಾಗಿದ್ದುಕೊಂಡು, ಶಿಸ್ತು ಪಾಲಿಸದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಬಹುದು ಎಂದು ತಿಳಿಸಿದ್ದಾರೆಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಹಾಜರಾಗಲು ಸೂಚನೆ: ಈ ಮಧ್ಯೆ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿ ಮುಂದೆ ಹಾಜರಾಗುವಂತೆಯೂ ನಡ್ಡಾ ಸೂಚನೆ ನೀಡಿದ್ದಾರೆ. ಉತ್ತರ ಪ್ರದೇಶ ಬಲರಾಂಪುರ ಕ್ಷೇತ್ರದ ಸಂಸದ ಸತ್ಯದೇವ ಸಿಂಗ್ ಮತ್ತು ಅಸ್ಸಾಂನ ಗುವಾಹತಿ ಕ್ಷೇತ್ರದ ಸಂಸದ ಬಿಜೋಯ್ ಚಕ್ರವರ್ತಿ ಶಿಸ್ತು ಸಮಿತಿಯ ಇಬ್ಬರು ಸದಸ್ಯರಾಗಿದ್ದಾರೆ. ದೆಹಲಿಯಲ್ಲಿರುವ ಯತ್ನಾಳ್ ಮಂಗಳವಾರ ಇತರ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ. ಯತ್ನಾಳ್ ರನ್ನು ಯಾವಾಗಲೋ ಪಕ್ಷದಿಂದ ಉಚ್ಛಾಟಿಸಬೇಕಿತ್ತು. ನೋಟಿಸ್ ಕೊಟ್ಟ ಮೇಲೂ ಅದಕ್ಕೆ ಬೆಲೆ ನೀಡದೆ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಪಕ್ಷಕ್ಕೆ ಅವರು ಮಾಡುತ್ತಿರುವ ಹಾನಿ ಅಷ್ಟಿಷ್ಟಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ ಎಂದರೂ ಸೇರಿಸಿಕೊಳ್ಳಲಾಯಿತು. ಈಗ ನೋಡಿ ಹೀಗಾಗಿದೆ ನಮ್ಮ ಸ್ಥಿತಿ ಎಂದು ಪಕ್ಷದ ಪ್ರಮುಖ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು.

    ಮೀಸಲಾತಿಗೆ ಒಕ್ಕಲಿಗ ಸಮುದಾಯವೂ ಪಟ್ಟು: ಒಕ್ಕಲಿಗ ಸಮುದಾಯವೂ ಮೀಸಲಾತಿ ಗಾಗಿ ದನಿ ಎತ್ತಿದೆ. ಸಮುದಾಯಕ್ಕಾಗಿ ಪ್ರಾಧಿಕಾರ ರಚಿಸಿ, ಕನಿಷ್ಠ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ಜತೆಗೆ ಸಮುದಾಯದ ಎಲ್ಲ 115 ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

    ಪತಂಜಲಿಯ ಕೊರೊನಿಲ್ ಮಾತ್ರೆಯಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ರಾ ಕೇಂದ್ರ ಆರೋಗ್ಯ ಸಚಿವ!; ಸ್ಪಷ್ಟನೆ ಕೋರಿದ ಐಎಂಎ

    ಈ ಆರತಿಗೆ ‘ಆರತಿಗೊಬ್ಬಳು, ಕೀರುತಿಗಿಬ್ಬರು!’; ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts