More

    ಕರ್ನಾಟಕ ಬಂದ್​ಗೆ ನೀರಸ ಪ್ರತಿಕ್ರಿಯೆ

    ಧಾರವಾಡ/ಹುಬ್ಬಳ್ಳಿ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಶನಿವಾರ ನೀಡಿದ್ದ ಕರ್ನಾಟಕ ಬಂದ್ ಕರೆಗೆ ಅವಳಿ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಜನಜೀವನದ ಮೇಲೆ ಬಂದ್ ಕರೆ ಯಾವುದೇ ಪರಿಣಾಮ ಬೀರಲಿಲ್ಲ. ನಗರದ ಮಾರುಕಟ್ಟೆ, ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ಬಸ್, ಆಟೋ, ಖಾಸಗಿ ವಾಹನಗಳ ಸಂಚಾರ ಬೆಳಗ್ಗೆಯಿಂದಲೇ ಸಾಮಾನ್ಯವಾಗಿತ್ತು. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

    ಬಂದ್​ಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆಗಳು ಮಾತ್ರ ಬೆಂಬಲ ನೀಡಿದ್ದವು. ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜುಬಿಲಿ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಸಂಚಾರಕ್ಕೆ ವ್ಯತ್ಯಯ ಆಗದಂತೆ ಕೆಲ ನಿಮಿಷಗಳ ಕಾಲ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಆದರೆ, ಪ್ರತಿಭಟನಾಕಾರರು ವಾಹನ ಸಂಚಾರ ತಡೆ ನಡೆಸಲು ಮುಂದಾಗಿದ್ದರು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಪೊಲೀಸರು 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

    ಜಯ ಕರ್ನಾಟಕ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

    ಬಂದ್ ಕರೆ ನಡುವೆಯೇ ಮರಾಠ ಸಮಾಜದ ವತಿಯಿಂದ ಶಿವಾಜಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಸರ್ಕಾರ ನಿಗಮ ಸ್ಥಾಪನೆ ಮಾಡಿದ್ದನ್ನು ಸ್ವಾಗತಿಸಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

    ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅರವಿಂದ ಬೆಲ್ಲದ ಅವರ ಭಾವಚಿತ್ರಗಳನ್ನು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ದಹಿಸಿದರು. ವಾಹನ ಸಂಚಾರ ತಡೆ ನಡೆಸಲು ಮುಂದಾದ 15ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

    ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ಸಂಗ್ರಾಮ ಸೇನೆ ಹಾಗೂ ಜಯ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಒತ್ತಾಯಪೂರಕವಾಗಿ ಅಲ್ಲಿಂದ ಕಳುಹಿಸಿದರು. ಬಂದ್ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದ್ದ ಪೊಲೀಸ್ ಆಯುಕ್ತ ಲಾಬುರಾಮ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಜಿಲ್ಲೆಯ ಕಲಘಟಗಿ, ಕುಂದಗೋಳ, ಅಳ್ನಾವರ, ನವಲಗುಂದ, ಅಣ್ಣಿಗೇರಿಯಲ್ಲೂ ಬಂದ್ ನೀರಸವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts