More

    ಉಸ್ತುವಾರಿ ಸಚಿವರ ನೇಮಿಸಿ – ಅಶೋಕ ಚಂದರಗಿ

    ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದರೂ ಮಹಾರಾಷ್ಟ್ರ ಸರ್ಕಾರ ಪದೇಪದೆ ಗಡಿ ವಿವಾದ ಕೆದಕುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು. ಅಲ್ಲದೆ, ಕೂಡಲೇ ರಾಜ್ಯ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಸಾಧ್ಯವಿರುವ ಎಲ್ಲ ಅಸ್ತ್ರಗಳನ್ನೂ ಕರ್ನಾಟಕದ ವಿರುದ್ಧ ಬಳಸುತ್ತಿದ್ದಾರೆ. 2004ರಿಂದ ಗಡಿ ವಿಚಾರ ಸುಪ್ರೀಂಕೋರ್ಟ್‌ನಲ್ಲಿದ್ದರೂ ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದ ಹೊರಗೆ ತನಗೆ ತೋಚಿದ ರೀತಿಯಲ್ಲಿ ಚಟುವಟಿಕೆ ನಡೆಸುತ್ತಿದೆ. ಇದು ನ್ಯಾಯಾಂಗ ನಿಂದನೆಯ ಸ್ಪಷ್ಟ ಚಿತ್ರಣವಾಗಿದೆ ಎಂದು ತಿಳಿಸಿದ್ದಾರೆ.

    ಸಭೆ ನಡೆಸಿ: ಮಹಾರಾಷ್ಟ್ರದವರ ಉದ್ಧಟತನ ಹಾಗೂ ಕ್ಯಾತೆ ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಸುಪ್ರೀಂನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಗಡಿ ಸಂರಕ್ಷಣಾ ಆಯೋಗ ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಬೇಕು. ಗಡಿವಿವಾದ ಪ್ರಕರಣ ಹಾಗೂ ಗಡಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗಾಗಿ ಗಡಿ ಉಸ್ತುವಾರಿ ಸಚಿವರು ಯಾರೂ ಇಲ್ಲ.

    ಹಿಂದಿನ ಸರ್ಕಾರ ನಮ್ಮ ಒತ್ತಾಯದ ಮೇರೆಗೆ ಅಂದಿನ ಸಚಿವ ಎಚ್.ಕೆ. ಪಾಟೀಲ ಅವರನ್ನೇ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿತ್ತು. 2018ರ ವರೆಗೂ ಅವರು ಗಡಿ ವಿವಾದದ ಉಸ್ತುವಾರಿ ವಹಿಸಿದ್ದರು. ತದನಂತರ ಈ ಹೊಣೆಗಾರಿಕೆಯನ್ನು ಸರ್ಕಾರ ಯಾರಿಗೂ ವಹಿಸಿಲ್ಲ ಎಂದು ಮನವರಿಕೆ ಮಾಡಿದ್ದಾರೆ.

    ಪ್ರಸ್ತುತ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಗಡಿ ವಿವಾದದ ಬಗ್ಗೆ ಬಹಳಷ್ಟು ತಿಳಿವಳಿಕೆ ಉಳ್ಳವರಾಗಿದ್ದಾರೆ. ಅಧ್ಯಯನಶೀಲರೂ ಆದ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮ ಕೈಕೊಂಡರೆ ಗಡಿ ಭಾಗದ ಸಮಸ್ಯೆಗಳನ್ನು ನಮಗೂ ಅವರ ಅವಗಾಹನೆಗೆ ತರಲು ಸಾಧ್ಯವಾಗುತ್ತದೆ. ಮಹಾರಾಷ್ಟ್ರ ಸರ್ಕಾರ ಈಗಾಗಲೇ ಇಬ್ಬರು ಸಚಿವರನ್ನು ಗಡಿ ಉಸ್ತುವರಿಯನ್ನಾಗಿ ನೇಮಿಸಿದೆ. ಗಡಿ ವಿಚಾರವಾಗಿ ಸದ್ಯದ ಪರಿಸ್ಥಿತಿಯ ಗಂಭೀರತೆ ಅರಿತು ಮಾನ್ಯ ಮುಖ್ಯಮಂತ್ರಿಗಳು ತ್ವರಿತ ಕ್ರಮ ಕೈಕೊಳ್ಳಬೇಕು ಎಂದು ಪತ್ರದ ಮೂಲಕ ಅಶೋ ಚಂದರಗಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts