More

    ಜ.8ರಂದು ಎಳ್ಳು ಕೊಚ್ಚಿಯಲ್ಲಿ ಗಡಿ ಉತ್ಸವ

    ನಾಪೋಕ್ಲು: ಕನ್ನಡ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾ ಘಟಕ, ಕರ್ನಾಟಕ ಗಡಿ ಪ್ರಾಧಿಕಾರ ಮತ್ತು ಕರಿಕೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಜ.8ರಂದು ಕರಿಕೆಯ ಎಳ್ಳು ಕೊಚ್ಚಿಯಲ್ಲಿ ಗಡಿ ಉತ್ಸವ ನಡೆಯಲಿದೆ.

    ಗಡಿ ಉತ್ಸವ ಆಯೋಜಿಸುವ ಕುರಿತು ಕರಿಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

    ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕನ್ನಡ ಧ್ವಜಾರೋಹಣ, ಜಾನಪದ ಕಲಾತಂಡಗಳ ಮೆರವಣಿಗೆ, ಗಡಿಭಾಗದ ಸಮಸ್ಯೆಗಳ ಕುರಿತು ವಿಚಾರಗೋಷ್ಠಿ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಒಂದು ದಿನದ ಗಡಿ ಉತ್ಸವ ನಡೆಯಬೇಕಿದೆ ಎಂದರು.
    ಗಡಿ ಉತ್ಸವಕ್ಕೆ ಶಾಸಕರು, ಅಧಿಕಾರಿಗಳನ್ನು ಆಹ್ವಾನಿಸಬೇಕು. ಅವರ ಸಮ್ಮುಖದಲ್ಲಿ ವಿಚಾರಗೋಷ್ಠಿ ನಡೆಸಿ ಗಡಿ ಭಾಗದ ಸಮಸ್ಯೆ ಗಳಿಗೆ ಸಂಬಂಧಪಟ್ಟ ನಿರ್ಣಯ ಮಂಡನೆ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

    ಸ್ಥಳೀಯ ಮುಖಂಡ ಬೇಕಲ್ ರಮಾನಾಥ ಮಾತನಾಡಿ, ಕರಿಕೆ ಗ್ರಾಮ ಕೊಡಗು ಹಾಗೂ ಕೇರಳದ ಗಡಿಭಾಗವಾಗಿದೆ. ಇಲ್ಲಿನ ಶೈಕ್ಷಣಿಕ, ಸಾರಿಗೆ, ರಸ್ತೆಗಳ ಅವ್ಯವಸ್ಥೆಗಳಿಗೆ ಮುಕ್ತಿ ದೊರೆಯಬೇಕಿದೆ ಎಂದರು.

    ಕನ್ನಡ ಸಾಹಿತ್ಯ ಪರಿಷತ್‌ನ ಮಡಿಕೇರಿ ತಾಲೂಕು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಗಡಿ ಉತ್ಸವ ನಡೆಸಲು ಕರಿಕೆ ಉತ್ತಮ ಸ್ಥಳ. ಈ ಭಾಗದ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಲುಪಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕರ್ನಾಟಕ-ಕೇರಳ ಗಡಿಯಲ್ಲಿರುವ ಕರಿಕೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುವ ಮೂಲಕ ಕನ್ನಡಕ್ಕೆ ಪ್ರಾಮುಖ್ಯತೆ ಸಿಗುವಂತಾಗಬೇಕು ಎಂದರು.

    ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಬೇಕು. ಅಲ್ಲದೆ, ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಒಂದಾಗಿ ಹೋರಾಟ ನಡೆಸಬೇಕು ಎಂದರು.

    ಕಸಾಪ ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಪತ್ರಾವೋ ಮಾತನಾಡಿ, ಕರಿಕೆ ಗಡಿ ಪ್ರದೇಶವಾಗಿದ್ದು, ಇಲ್ಲಿ ನಡೆಯುವ ಕಾರ್ಯಕ್ರಮ ಕನ್ನಡ ಅರೆ ಭಾಷೆ, ಮಲಯಾಳಂ, ಮರಾಠಿ, ತುಳು ಭಾಷೆಯ ಸಮ್ಮಿಲನ ಕಾರ್ಯಕ್ರಮ ಆಗಲಿದೆ ಎಂದರು.

    ಗಡಿ ಉತ್ಸವದ ಸ್ವಾಗತ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಕಲ್ಪನಾ ಜಗದೀಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇಕಲ್ ದೇವರಾಜ್, ಕಸಾಪ ಕೊಡಗು ಜಿಲ್ಲಾ ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್‌ಕುಮಾರ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಕೆ.ಸಿ.ಪಲ್ಲವಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಜಿ.ಜಯಶ್ರೀ, ಎಂ.ಎಚ್.ಆಯಿಷ ,ದೇವದತ್ತ, ಅಂಗನವಾಡಿ ಕಾರ್ಯಕರ್ತರಾದ ಮಾಲಿನಿ, ಯಶೋದಾ, ವಸಂತಿ, ಹರಿಣಾಕ್ಷಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts