More

    ಗಡಿ ಪ್ರವೇಶಿಸಿದವರು ಸ್ವಂತ ಜಿಲ್ಲೆಗೆ – ಜಗದೀಶ ಶೆಟ್ಟರ್

    ಬೆಳಗಾವಿ: ನೆರೆ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಆಗಮಿಸುವ ಜನರನ್ನು ತಪಾಸಣೆ ನಡೆಸಿದ ಬಳಿಕ, ಸಂಬಂಧಿಸಿದ ಜಿಲ್ಲೆಗಳಲ್ಲಿ ಅವರನ್ನು ಕ್ವಾರಂಟೈನ್ ಮಾಡುವ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ. ಹಾಗಾಗಿ ಇಲ್ಲಿಗೆ ಆಗಮಿಸುವ ಜನರನ್ನು ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳ ಮೂಲಕ ಕಳುಹಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿ ಸೋಮವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಪ್ರಕರಣಗಳು ವರದಿಯಾಗಿದ್ದರೂ ಸುದೈವದಿಂದ ಜೀವ ಹಾನಿ ಪ್ರಮಾಣ ಕಡಿಮೆ ಇದೆ. ಈವರೆಗೆ ವೆಂಟಿಲೇಟರ್ ಬಳಕೆ ಹಂತಕ್ಕೆ ಪರಿಸ್ಥಿತಿ ತಲುಪಿಲ್ಲ.

    ಕರೊನಾ ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಎರಡನೇ ವರದಿ ನೆಗೆಟಿವ್ ಬಂದ ಬಳಿಕ ಮನೆಗೆ ಕಳುಹಿಸಬೇಕು ಎಂದು ಸೂಚಿಸಿದರು. 45 ದಿನಗಳಿಗಿಂತ ಹೆಚ್ಚು ಕಾಲ ಕಂಟೇನ್ಮೆಂಟ್ ರೆನ್ ಆಗಿರುವ ಪ್ರದೇಶಗಳಲ್ಲಿ ತುಸು ವಿನಾಯಿತಿ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಅಲ್ಲದೆ, ದಾನಿಗಳಿಂದ ಅಗತ್ಯ ಸಾಮಗ್ರಿ ಸಂಗ್ರಹಿಸಿ, ಕಂಟೇನ್ಮೆಂಟ್ ರೆನ್‌ನಲ್ಲಿ ವಿತರಿಸುವ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಗಡಿಭಾಗದಲ್ಲಿ ಸಿಲುಕಿರುವ ಪ್ರಯಾಣಿಕರು ಮತ್ತು ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಶಾಸಕ ಅಭಯ ಪಾಟೀಲ
    ಮಾತನಾಡಿ, ಜಿಲ್ಲೆಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿ ಮಾತ್ರೆ ನೀಡುವ ಕುರಿತು ಪರಿಶೀಲಿಸಬೇಕು ಎಂದು ತಿಳಿಸಿದರು.

    ರೈಲ್ವೆ ಖಾತೆ ರಾಜ್ಯ ರಾಜ್ಯ ಸಚಿವ ಸುರೇಶ ಅಂಗಡಿ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು, ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.
    ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿರುವ 250 ವಲಸೆ ಕಾರ್ಮಿಕರ ಕ್ವಾರಂಟೈನ್‌ಗೆ ಆದ್ಯತೆ ನೀಡಲಾಗುವುದು.

    ಶೀಘ್ರ ಯಳ್ಳೂರ, ಪೀರನವಾಡಿ ಕಂಟೇನ್ಮೆಂಟ್ ಝೋನ್ ಆದೇಶ ಡಿನೋಟಿಫೈ ಮಾಡಲಾಗುವುದು. ಮೇ 15ರ ಬಳಿಕ ಬೆಳಗಾವಿ ನಗರದಲ್ಲಿ ಕಂಟೇನ್ಮೆಂಟ್ ಝೋನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅನಿಲ ಬೆನಕೆ, ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ್, ಜಿಲ್ಲಾ ಕರೊನಾ ನಿಯಂತ್ರಣ ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್ ಇತರರು ಉಪಸ್ಥಿತರಿದ್ದರು.

    ಗ್ರಾಹಕರಿಗೆ ವಿದ್ಯುತ್ ಬಿಲ್ ಹೊರೆಯಾಗದಿರಲಿ

    ಎರಡು ತಿಂಗಳ (2020ರ ಮಾರ್ಚ್, ಏಪ್ರಿಲ್) ವಿದ್ಯುತ್ ಬಿಲ್ ಒಂದೇ ಸಲ ನೀಡುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಸಚಿವ ಶೆಟ್ಟರ್ ನಿರ್ದೇಶನ ನೀಡಿದರು. ಸಭೆಯಲ್ಲೇ ಹೆಸ್ಕಾಂ ಹಿರಿಯ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ ಅವರು, ವಿದ್ಯುತ್ ಬಿಲ್ ಸಾರ್ವಜನಿಕರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕಂತುಗಳಲ್ಲಿ ಬಿಲ್ ಪಾವತಿಸಲು ಅನುಕೂಲ ಕಲ್ಪಿಸಬೇಕು ಎಂದು ಸೂಚಿಸಿದರು

    ರಂಜಾನ್ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಲಾಕ್‌ಡೌನ್ ಅವಧಿ ಮುಂದುವರಿಸುವಂತೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
    | ಡಾ.ಪ್ರಭಾಕರ ಕೋರೆ ರಾಜ್ಯಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts