More

    ಗಡಿ ಬಂದ್‌ಗೆ ಹೈರಾಣಾದ ನಿತ್ಯ ಪ್ರಯಾಣಿಕರು, ನೌಕರಿಗೆ ತಲುಪಲಾಗದೆ ಸಂಕಷ್ಟಕ್ಕೆ ಸಿಲುಕಿದ ಕಾಸರಗೋಡು ಕನ್ನಡಿಗರು

    ಮಂಜೇಶ್ವರ: ನೌಕರಿಗಾಗಿ ದಿನನಿತ್ಯ ಕೇರಳ-ಕರ್ನಾಟಕ ಗಡಿ ದಾಟುವವರಿಗೆ ನೀಡಲಾಗುತ್ತಿದ್ದ ಪಾಸನ್ನು ಕೇರಳ ಸರ್ಕಾರ ಏಕಾಏಕಿ ರದ್ದು ಮಾಡಿದ ಪರಿಣಾಮ, ಮಂಗಳವಾರ ಬೆಳಗ್ಗೆ ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರಲಾಗದೆ, ನೂರಾರು ಮಂದಿ ತಲಪಾಡಿಯಲ್ಲಿ ಸಮಸ್ಯೆ ಎದುರಿಸಿದರು.

    ಕಾಸರಗೋಡು, ಮಂಜೇಶ್ವರ, ಕುಂಬಳೆ ಮೊದಲಾದೆಡೆಗಳಲ್ಲಿ ವಾಸವಾಗಿರುವ ಸಾಕಷ್ಟು ಕನ್ನಡಿಗರು ನೌಕರಿಗಾಗಿ ಮಂಗಳೂರನ್ನು ಆಶ್ರಯಿಸಿದ್ದಾರೆ. ಅವರೆಲ್ಲ ದಿನನಿತ್ಯ ತಲಪಾಡಿ ಮೂಲಕ ರಸ್ತೆ ಮಾರ್ಗದಲ್ಲಿ ಮಂಗಳೂರಿಗೆ ಬಂದು ಹೋಗುವವರು. ಆದರೆ, ಮಂಗಳವಾರ ತಲಪಾಡಿಯಲ್ಲಿ ಕೇರಳ ಪೊಲೀಸರು ಇವರನ್ನು ತಡೆದು, ಹೊಸ ನಿಯಮ ಪ್ರಕಾರ, ಒಮ್ಮೆ ಕರ್ನಾಟಕಕ್ಕೆ ಹೋದರೆ 28 ದಿನ ಅಲ್ಲೇ ವಾಸಮಾಡಿ ಮತ್ತೆ ಕೇರಳಕ್ಕೆ ವಾಪಸ್ ಬರಬೇಕು ಎಂದರು.

    ಇದನ್ನು ಕೇಳಿ ಅಸಮಾಧಾನಗೊಂಡ 100ಕ್ಕೂ ಅಧಿಕ ಮಂದಿ ನಿತ್ಯ ಪ್ರಯಾಣಿಕರು, ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಕೆಲ ಕಾಲ ಬಿಗುವಿನ ವಾತಾವರಣವೂ ಸೃಷ್ಟಿಯಾಯಿತು. ದ.ಕ.ಜಿಲ್ಲಾಡಳಿತ ಜುಲೈ 11ರ ತನಕ ಪಾಸ್ ನೀಡಿದೆ. ಅಲ್ಲಿಯವರೆಗೆ ನಮ್ಮನ್ನು ತಡೆಯಬಾರದು ಎಂದು ಕೆಲವರು ವಾದ ಮಾಡಿದರು. ಆದರೆ ಪೊಲೀಸರು ಇದನ್ನು ಒಪ್ಪದ ಕಾರಣ, ಬಹುತೇಕರು ಮನೆಗೆ ವಾಪಸಾದರು.

    ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ, ಪ್ರಯಾಣಿಕರಿಗೆ ಬೆಂಬಲ ಸೂಚಿಸಿ ಬಿಜೆಪಿ ಹಾಗೂ ಯುಡಿಎಫ್ ಹಲವೆಡೆ ಪ್ರತಿಭಟನೆ ನಡೆಸಿದವು.

    ಒಳ ರಸ್ತೆಯಲ್ಲಿ ಸಂಚಾರ ನಿರಾಳ: ತಲಪಾಡಿ ಅಂತಾರಾಜ್ಯ ಗಡಿ ಸಮೀಪ ಒಳ ರಸ್ತೆ ಮೂಲಕ ತಲಪಾಡಿ ದೇವೀನಗರದಲ್ಲಿ ಕರ್ನಾಟಕ ಭಾಗದ ಹೆದ್ದಾರಿಗೆ ಸೇರುವ ಮಾರ್ಗದಲ್ಲಿ ಮಂಗಳವಾರವೂ ವಾಹನ ಸಂಚಾರ ನಿರಾತಂಕವಾಗಿತ್ತು. ಈ ರಸ್ತೆಯನ್ನು ಬಂದ್ ಮಾಡಿರಲಿಲ್ಲ.

    ನಿಯಮದಿಂದ ಕೇರಳೀಯರಿಗೇ ಸಮಸ್ಯೆ
    ಮಂಗಳೂರು: ಗಡಿ ದಾಟಿ ಕರ್ನಾಟಕಕ್ಕೆ ತೆರಳಿದರೆ 28 ದಿನ ಅಲ್ಲೇ ಇರಬೇಕು, ಕೇರಳಕ್ಕೆ ಬರುವಂತಿಲ್ಲ ಎಂಬ ಕೇರಳ ಸರ್ಕಾರದ ನೂತನ ನಿಯಮದಿಂದ ಅತಿ ಹೆಚ್ಚು ಕಷ್ಟ ಅನುಭವಿಸುವವರು ಗಡಿನಾಡು ಕಾಸರಗೋಡಿನ ಕನ್ನಡಿಗರು. ದ.ಕ ಜಿಲ್ಲೆಯಿಂದ ಕಾಸರಗೋಡಿಗೆ ಹೋಗುವವರಿಗಿಂತಲೂ ಕಾಸರಗೋಡಿನಿಂದ ಮಂಗಳೂರಿಗೆ ಬರುವವರ ಸಂಖ್ಯೆಯೇ ಹೆಚ್ಚು. ಲಭ್ಯ ಮಾಹಿತಿ ಪ್ರಕಾರ ಕಾಸರಗೋಡಿನವರಿಗೆ 2 ಸಾವಿರದಷ್ಟು ಪಾಸ್ ವಿತರಿಸಲಾಗಿದೆ. ಕಾಸರಗೋಡು ನಿವಾಸಿಗಳಿಗೆ ಈಗ ಮಂಗಳೂರಿನಲ್ಲಿ ಇರುವ ಉದ್ಯೋಗ ಬಿಡುವಂತೆಯೂ ಇಲ್ಲ. ಇಲ್ಲಿ ಬಂದರೆ 28 ದಿನ ನಿಲ್ಲುವುದೆಲ್ಲಿ ಎನ್ನುವ ಗೊಂದಲ.

    ಕೇರಳ ಸರ್ಕಾರ ಯಾಕೆ ಇಂತಹ ಕ್ರಮ ಕೈಗೊಂಡಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಕೇರಳದವರಿಗೇ ಇದರಿಂದ ಹೆಚ್ಚು ತೊಂದರೆಯಾಗುತ್ತಿದೆ ಎನ್ನುತ್ತಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲೇ ಮಾತುಕತೆ ನಡೆಸಬೇಕು. ಅದನ್ನು ಸರ್ಕಾರದ ಗಮನಕ್ಕೆ ತರುತ್ತೇನೆ.
    – ಕೋಟ ಶ್ರೀನಿವಾಸ ಪೂಜಾರಿ, ದ.ಕ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts