More

    ಅವನತಿಯತ್ತ ಜೆಡಿಎಸ್-ಬಿಜೆಪಿ ಮೈತ್ರಿ ರಾಜಕೀಯ

    ಹೊಳೆನರಸೀಪುರ: ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ರಾಜಕೀಯ ಅವನತಿಯತ್ತ ಸಾಗುತ್ತಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ವ್ಯಂಗ್ಯವಾಡಿದರು.

    ತಾಲೂಕಿನ ಹಳ್ಳಿ ಮೈಸೂರು ಗ್ರಾಮದ ಕನಕ ಭವನದಲ್ಲಿ ಹಳ್ಳಿ ಮೈಸೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಬೂತ್ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿ, ಜೆಡಿಎಸ್‌ನವರು ಯಾವ ಪಕ್ಷದೊಂದಿಗೆ ಸಮ್ಮಿಶ್ರ ಮಾಡಿಕೊಳ್ಳುತ್ತಾರೋ ಆ ಪಕ್ಷವನ್ನು ಹಾಳು ಮಾಡುತ್ತಾರೆ ಎಂದು ಟೀಕಿಸಿದರು.

    ಕಾಂಗ್ರೆಸ್ ಪಕ್ಷದ ಮತಗಳನ್ನು ಪಡೆದು ಆಯ್ಕೆಯಾದ ಸಂಸದರು ಹಳ್ಳಿ ಮೈಸೂರು ಹೋಬಳಿಯನ್ನು ಮರೆತರು. ಅಭಿವೃದ್ಧಿ ಮಾಡದೆ ಕಡೆಗಣಿಸಿದರು. ಕ್ಷೇತ್ರದಲ್ಲಿ ತಾರತಮ್ಯ ಮಾಡಿದರು ಎಂದು ಟೀಕಾ ಪ್ರಹಾರ ನಡೆಸಿದರು.

    ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಜನರ ಬೆಂಬಲದ ನಿರೀಕ್ಷೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಕ್ಷೇತ್ರದ ಜನತೆ ಕಾಂಗ್ರೆಸ್‌ಗೆ ಅತ್ಯಧಿಕ ಮತಗಳನ್ನು ನೀಡುವ ಮೂಲಕ ನನ್ನ ಗೆಲುವಿಗೆ ನಾಂದಿ ಹಾಡಬೇಕೆಂದು ಮನವಿ ಮಾಡಿದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ. ಜಿಲ್ಲೆಯ ಮತದಾರ ಬಂಧುಗಳಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅದೇ ರೀತಿ ನನ್ನ ತವರು ಕ್ಷೇತ್ರವಾದ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯಲ್ಲೂ ಹೆಚ್ಚಿನ ಬೆಂಬಲ ನೀಡಬೇಕೆಂದು ಕೋರಿದರು.

    ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು ಜನಮನ ತಲುಪಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲ ಅಸಮಾಧಾನಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

    ಶ್ರೇಯಸ್ ಎಂ.ಪಟೇಲ್ ಅವರು ಸರಳ ಸಜ್ಜನಿಕೆಯ ವಿದ್ಯಾವಂತ ಅಭ್ಯರ್ಥಿ. ಎಲ್ಲರ ವಿಶ್ವಾಸದಲ್ಲಿ ಒಗ್ಗಟ್ಟಿನಿಂದ ಮುನ್ನಡೆಯುವಂತಹ ಬುದ್ಧಿವಂತಿಕೆ ಇರುವಂತಹವರು. ಇಂತಹ ಮುಖಂಡನನ್ನು ಸಂಸತ್ ಸದಸ್ಯರಾಗಿ ಮಾಡಿದರೆ ನಮ್ಮ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಸಂಸತ್ ಸದಸ್ಯರಾಗಿ ಆಯ್ಕೆಯಾದ ನಂತರ ಹಳ್ಳಿ ಮೈಸೂರು ಹೋಬಳಿಯನ್ನು ತಾಲೂಕು ಕ್ಷೇತ್ರವಾಗಿ ಮಾಡಬೇಕೆಂದು ಮನವಿ ಮಾಡಿದರು.
    ಶ್ರವಣಬೆಳಗೊಳ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಅರಸೀಕೆರೆಯ ಜಿಪಂ ಮಾಜಿ ಸದಸ್ಯ ಪಟೇಲ್ ಶಿವಪ್ಪ , ಕಾಂಗ್ರೆಸ್ ಮುಖಂಡರಾದ ಶೇಷೇಗೌಡ, ಪುಟ್ಟೇಗೌಡ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ಕೆಪಿಸಿಸಿ ಸದಸ್ಯ ಮಂಜೇಗೌಡ, ಜಿಪಂ ಮಾಜಿ ಸದಸ್ಯ ಪ್ರಸನ್ನ, ಶವಣೂರು ಗ್ರಾಪಂ ಅಧ್ಯಕ್ಷ ಮಹಿಂದ್ರ, ಗ್ರಾಪಂ ಸದಸ್ಯ ಗಣೇಶ್, ಚಿಕ್ಕೇಗೌಡ, ಪ್ರಕಾಶ, ರಂಗೇಗೌಡ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts