More

    ಕೋಟೆ ನಾಡ ಜನರ ರಕ್ಷಣೆಗೆ ಉಚಿತ ಬೂಸ್ಟರ್ ಡೋಸ್

    ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ಮೊದಲ ಮತ್ತು ಎರಡನೇ ಡೋಸ್ ನೀಡಿಕೆಯಲ್ಲಿ ಶೇ.100ರಷ್ಟು ಗುರಿ ಸಾಧಿಸಿದ್ದು, ಸಂಭವನೀಯ 4ನೇ ಅಲೆಯ ತೀವ್ರತೆ ತಗ್ಗಿಸಲು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಬೂಸ್ಟರ್ ಲಸಿಕೆ (ಮುನ್ನೆಚ್ಚರಿಕಾ ಕೋವಿಡ್ ಲಸಿಕೆ) ನೀಡುವ ಕಾರ್ಯಕ್ರಮ ಬುಧವಾರದಿಂದ (ಜು.20) ಆರಂಭವಾಗಲಿದೆ.

    ಜು.15ರಿಂದ ಸೆ.30ರವರೆಗೆ ರಾಜ್ಯಾದ್ಯಂತ 18 ರಿಂದ 59 ವರ್ಷ ವಯಸ್ಸಿನ ಫಲಾನುಭವಿಗಳಿಗೆ ಕೋವಿಡ್ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರು 2ನೇ ಡೋಸ್ ಪಡೆದು 6 ತಿಂಗಳು ದಾಟಿದ ಸಾರ್ವಜನಿಕರಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳ ಲಸಿಕಾ ಕೇಂದ್ರಗಳಲ್ಲಿ ಉಚಿತ ಲಸಿಕೆ ಹಾಕಲು ನಿರ್ಧರಿಸಲಾಗಿದೆ.

    ಕೋವಿಡ್-19 ಲಸಿಕಾಕರಣವನ್ನು ಪ್ರಾರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಯಿತು. ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿಕೆ ಪ್ರಾರಂಭಿಸಲಾಯಿತು.

    6,72,467 ಮಂದಿಗೆ ಬೂಸ್ಟರ್ ಲಸಿಕೆ ಗುರಿ

    ಈಗಾಗಲೇ 18 ವರ್ಷ ಮೇಲ್ಪಟ್ಟ 12,82,002 ಫಲಾನುಭವಿಗಳು ಮೊದಲ ಲಸಿಕೆ ಪಡೆದು ಶೇ.102.56 ಹಾಗೂ 12,85,933 ಫಲಾನುಭವಿಗಳು 2ನೇ ಡೋಸ್ ಪಡೆದಿದ್ದು, ಶೇ.102.87 ಸಾಧನೆಯಾಗಿದೆ. ಜಿಲ್ಲೆಯಲ್ಲಿ 18ರಿಂದ 59 ವರ್ಷ ವಯಸ್ಸಿನ 10,01,437 ಫಲಾನುಭವಿಗಳು ಇದ್ದು, ಇದರಲ್ಲಿ ಜು.16ಕ್ಕೆ 2ನೇ ಡೋಸ್ ಪಡೆದು 6 ತಿಂಗಳು ಮುಗಿದಿರುವ ಒಟ್ಟು 6,72,467 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

    ಉಚಿತ ಬೂಸ್ಟರ್ ಲಸಿಕೆಗೆ ಇಂದು ಚಾಲನೆ

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಪ್ರಯುಕ್ತ ಬುಧವಾರ ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ 18 ರಿಂದ 59 ವರ್ಷದೊಳಗಿನವರಿಗೆ ಉಚಿತ ಬೂಸ್ಟರ್ ಲಸಿಕೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಲಸಿಕಾ ಕೇಂದ್ರಗಳು

    1 ಜಿಲ್ಲಾಸ್ಪತ್ರೆ, 5 ಸಾರ್ವಜನಿಕ ಆಸ್ಪತ್ರೆ, 11 ಸಮುದಾಯ ಆರೋಗ್ಯ ಕೇಂದ್ರಗಳು, 81 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5 ನಗರ ಆರೋಗ್ಯ ಕೇಂದ್ರಗಳು, 343 ಉಪಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್ ಬೂಸ್ಟರ್ ಲಸಿಕೆ ನೀಡಲಾಗುತ್ತದೆ.

    18 ವರ್ಷ ಮೇಲ್ಪಟ್ಟವರು 2ನೇ ಡೋಸ್ ಪಡೆದು 6 ತಿಂಗಳು ಪೂರೈಸಿರುವ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲು ಅರ್ಹರಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ, ಅಂಗನವಾಡಿಗಳಲ್ಲಿ ಉಚಿತವಾಗಿ ಕೋವಿಡ್ ಮುನ್ನೆಚ್ಚರಿಕೆ ಲಸಿಕೆ ನೀಡಲಾಗುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts