More

    ಬೋನು ಕೊಂಡೊಯ್ಯಲು ವಾಹನ ಕೊರತೆ, ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ, ಚಿರತೆ ಭೀತಿಯಲ್ಲಿ ಹುಲುಕುಡಿ ತಪ್ಪಲಿನ ಗ್ರಾಮಸ್ಥರು

    ಸಂತೋಷ್ ಆರೂಡಿ ದೊಡ್ಡಬಳ್ಳಾಪುರ
    ಹುಲುಕುಡಿ ಬೆಟ್ಟದ ತಪ್ಪಲಿನಲ್ಲಿ ಗ್ರಾಮಸ್ಥರನ್ನು ಕಾಡುತ್ತಿರುವ ಚಿರತೆ ಭೀತಿಗೆ ಅರಣ್ಯ ಇಲಾಖೆ ಬೋನು ಸಾಗಿಸಲು ವಾಹನವಿಲ್ಲವೆಂಬ ಕಾರಣ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಚಿರತೆ ಬಗ್ಗೆ ಇಲಾಖೆ ದೂರು ನೀಡಿದರೆ ಅಧಿಕಾರಿಗಳು ಬೋನು ಕೊಂಡೊಯ್ಯಲು ವಾಹನ ನೀವೇ ತರಬೇಕು ಎನ್ನುತ್ತಾರೆ ಎಂಬುದು ಗ್ರಾಮಸ್ಥರ ದೂರಾಗಿದೆ. ವನ್ಯ ಮೃಗಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಬಳಿ ಬೋನಿದ್ದರೂ ಪ್ರಾಣಿಗಳನ್ನು ಸಾಗಿಸಲು ವಾಹನದ ಕೊರತೆ ಇದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಚಿರತೆ ಭೀತಿಯೊಂದಿಗೆ ಬೋನು ಸಾಗಿಸುವ ಹೊಣೆಯನ್ನು ಗ್ರಾಮಸ್ಥರೇ ಹೊರಬೇಕಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ವಾಹನ ಕೊರತೆ ನೆಪದಲ್ಲಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಅನಾಹುತ ಸಂಭವಿಸಿದರೆ ಅರಣ್ಯ ಇಲಾಖೆಯೇ ನೇರ ಹೊಣೆ ಹೊರಬೇಕಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

    ಚಿರತೆ ಆತಂಕ: ಹುಲುಕುಡಿ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಮಾಡೇಶ್ವರ, ಗಲಿಬಿಲಿಕೋಟೆ, ಬೊಮ್ಮನಹಳ್ಳಿ, ಹಳೆಕೋಟೆ ಮತ್ತಿತರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿಂಗಳಿಂದ ಚಿರತೆ ಸಂಚಾರದ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹುಲುಕುಡಿ ಬೆಟ್ಟದ ಬಳಿ ಮೇವು ಅರಸಿ ತೆರಳುವ ದನ, ಕುರಿ, ಮೇಕೆಗಳ ಮೇಲೆ ಚಿರತೆ ದಾಳಿ ನಡೆಸುತ್ತಿದೆ. ಅಲ್ಲದೆ ರಾತ್ರಿಯ ವೇಳೆ ಗ್ರಾಮಗಳಿಗೂ ಲಗ್ಗೆ ಹಾಕುತ್ತವೆ ಎನ್ನಲಾಗಿದೆ. ಕೆಲವೇ ತಿಂಗಳ ಹಿಂದೆ ಮಾಡೇಶ್ವರ ಗ್ರಾಮದ ಬಳಿ 5 ಚಿರತೆಗಳನ್ನು ಸೆರೆಹಿಡಿಯಲಾಗಿತ್ತು. ಹುಲುಕುಡಿ, ಜಾಲಗೆರೆ ಬೆಟ್ಟಗಳ ತಪ್ಪಲ್ಲಿ ಅರಣ್ಯ ಪ್ರದೇಶವಿದ್ದು ಇತ್ತೀಚೆಗೆ ಈ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಚಿರತೆಗಳು ಗ್ರಾಮಗಳ ಕಡೆ ಹೆಜ್ಜೆಹಾಕುತ್ತಿವೆ ಎನ್ನಲಾಗಿದೆ.

    ಹುಲಿಕುಡಿ ತಪ್ಪಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಮಾಹಿತಿ ಬಂದಿದೆ. ಬೋನು ಸ್ಥಳಾಂತರಿಸಲು ವಾಹನವಿಲ್ಲದ ಕಾರಣ ವಿಳಂವಾಗಿದೆ. ಗ್ರಾಮಸ್ಥರಿಗೆ ವಾಹನ ತರಲು ಹೇಳಿದ್ದು, ಕೂಡಲೇ ಬೋನು ಅಳವಡಿಸಲಾಗುವುದು.
    ಶ್ರೀನಿವಾಸ್( ಸೀನಪ್ಪ) ಉಪ ವಲಯ ಅರಣ್ಯಾಧಿಕಾರಿ, ದೊಡ್ಡಬಳ್ಳಾಪುರ

    ಹುಲುಕುಡಿ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಗ್ರಾಮದ ಜನತೆ ಚಿರತೆ ಭೀತಿ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆಗೆ ದೂರು ನೀಡಿದರೆ ಬೋನು ಸಾಗಿಸುವ ವಾಹನ ಹೊಂದಿಸಿ ಎನ್ನುತ್ತಾರೆ. ಹಿರಿಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು.
    ಸತ್ಯನಾರಾಯಣ, ಮಾಡೇಶ್ವರ ಗ್ರಾಮಸ್ಥ

    ಚಿರತೆ ಹಾವಳಿ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಬೋನು ಅಳವಡಿಸಿ ಚಿರತೆ ಸೆರೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು.
    ದ್ಯಾಮಪ್ಪ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts