More

    ಕಿದ್ವಾಯಿ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

    • ಹತ್ತು ತಿಂಗಳಲ್ಲಿ 59 ಮಂದಿಗೆ ಚಿಕಿತ್ಸೆ ಯಶಸ್ವಿ

    ಪಂಕಜ ಕೆ.ಎಂ. ಬೆಂಗಳೂರು


    ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ (ಬೋನ್ ಮ್ಯಾರೊ) ಕಸಿ ಘಟಕ ಆರಂಭವಾದ ಒಂಬತ್ತು ತಿಂಗಳಲ್ಲೇ ವಿವಿಧ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 59 ರೋಗಿಗಳಿಗೆ ಶೇ.100 ಯಶಸ್ವಿಯಾಗಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ.

    ಲಿಂಫೋಮಾ, ಹಾಡ್ಗ್ಕಿನ್ಸ್ ಲಿಂಫೋಮಾ, ಮಲ್ಟಿಪಲ್ ಮೈಲೋಮಾ, ನ್ಯೂರೋ ಬ್ಲಾಸ್ಟೋಮಾ, ಅಕ್ಯೂಟ್ ಲುಕೇಮಿಯಾ ರೋಗಿಗಳಿಗೆ ಆರೋಗ್ಯಶ್ರೀ ಸೇರಿ ಸರ್ಕಾರಿ ಯೋಜನೆಯಡಿ ಹಾಗೂ ರೋಗಿಗಳ ಕ್ಷೇಮಾಭಿವೃದ್ಧಿ ನಿಧಿ ಬಳಸಿ 18 ಮಕ್ಕಳು ಸೇರಿ 59 ಮಂದಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 3 ಮಂದಿಗೆ ಹಾಗೂ 56 ಮಂದಿಗೆ ಆಟೊಲೋಗಸ್ ವಿಧಾನದಲ್ಲಿ ಚಿಕಿತ್ಸೆ ನಡೆಸಲಾಗಿದೆ. ಇನ್ನೂ ಆರು ಮಂದಿ ಸರದಿಯಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಅವರಿಗೂ ಚಿಕಿತ್ಸೆ ಪೂರ್ಣಗೊಳಿಸುವುದಾಗಿ ವಿಭಾಗದ ವೈದ್ಯರು ತಿಳಿಸಿದ್ದಾರೆ.

    ಎರಡು ವಿಧದಲ್ಲಿ ಕಸಿ ಚಿಕಿತ್ಸೆ: ರೋಗಿಯ ದೇಹದಲ್ಲಿ ಸಕ್ರಿಯವಾಗಿರುವ ಕ್ಯಾನ್ಸರ್ ಕಣಗಳನ್ನು ನಾಶಗೊಳಿಸಿ, ಅವರದೇ ದೇಹದ ಆರೋಗ್ಯಕರ ಅಂಗದ ಒಂದಿಷ್ಟು ಮಜ್ಜೆಯನ್ನು ತೆಗೆದು ಕ್ಯಾನ್ಸರ್ ಕಣಗಳು ನಾಶವಾದ ಜಾಗದಲ್ಲಿ ಕಸಿ ಮಾಡಲಾಗುತ್ತದೆ. ಇದು ಆಟೊಲೋಗಸ್ ವಿಧಾನವಾಗಿದ್ದು, 3-4 ಲಕ್ಷ ರೂ. ವೆಚ್ಚದಲ್ಲಿ ಚಿಕಿತ್ಸೆ ನಡೆಸಲಾಗಿದೆ. ಮತ್ತೊಂದು ವಿಧಾನದಲ್ಲಿ ಕ್ಯಾನ್ಸರ್‌ಪೀಡಿತ ವ್ಯಕ್ತಿಯ ದೇಹಕ್ಕೆ ಹೊಂದಿಕೊಳ್ಳುವ ಮಜ್ಜೆಯನ್ನು ಬೇರೆಯವರಿಂದ ಪಡೆದು ಕಸಿ ಮಾಡಲಾಗುತ್ತಿದೆ. ಇದು ಅಲೋಜನಿಕ್ ವಿಧಾನವಾಗಿದ್ದು, 10-12 ಲಕ್ಷ ರೂ. ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ.

    ಹೆಚ್ಚಿದ ಬೇಡಿಕೆ: ಕ್ಯಾನ್ಸರ್ ರೋಗಿಗಳು ಅಸ್ತಿಮಜ್ಜೆ ಕಸಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ 30ರಿಂದ 50 ಲಕ್ಷ ರೂ. ಖರ್ಚು ಮಾಡಬೇಕಿದೆ. ಹೀಗಾಗಿ ಈ ಚಿಕಿತ್ಸೆ ಪಡೆಯುವುದು ಬಡ ರೋಗಿಗಳಿಗೆ ಕಷ್ಟಸಾಧ್ಯವಾಗಿತ್ತು. ಇದೀಗ ಈ ಚಿಕಿತ್ಸೆ ನಗರದ ಕಿದ್ವಾಯಿ ಆಸ್ಪತ್ರೆಯಲ್ಲೇ ಪ್ರಾರಂಭವಾಗಿದ್ದು, ಉಚಿತವಾಗಿ ಚಿಕಿತ್ಸೆ ದೊರೆಯುತ್ತಿರುವುದು ರೋಗಿಗಳಿಗೆ ವರದಾನವಾಗಿದೆ. ಇದರಿಂದ ಸಂಸ್ಥೆಯಲ್ಲಿ ಚಿಕಿತ್ಸೆಗೆ ಬೇಡಿಕೆ ಹೆಚ್ಚಿದೆ.

    ಘಟಕದ ವಿಶೇಷತೆ: ಸಂಸ್ಥೆಯ ಆವರಣದಲ್ಲಿನ ಜಿಂದಾಲ್ ಕೇಂದ್ರದ ನಾಲ್ಕನೇ ಮಹಡಿಯಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ 15 ಸಾವಿರ ಚದರ ಅಡಿ ವಿಸ್ತೀರ್ಣದ ಅಸ್ತಿಮಜ್ಜೆ ಘಟಕದ ಕಟ್ಟಡ ನಿರ್ಮಾಣಗೊಂಡಿದೆ. 10 ಪ್ರತ್ಯೇಕ ಹಾಗೂ ಸುಸಜ್ಜಿತ ಕೊಠಡಿಗಳು, ಮೂರು ಶಸಚಿಕಿತ್ಸಾ ಘಟಕಗಳು, ವೈದ್ಯರ ವಿಶ್ರಾಂತಿ ಕೊಠಡಿಯನ್ನು ಒಳಗೊಂಡಿದೆ. ನುರಿತ ವೈದ್ಯರು ಹಾಗೂ ಸಿಬ್ಬಂದಿ ತಂಡವನ್ನು ಹೊಂದಿದೆ. ಇದು ರಾಜ್ಯದ ಮೊದಲ ಸರ್ಕಾರಿ ಅಸ್ತಿಮಜ್ಜೆ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts