More

    ಗಂಗೊಳ್ಳಿ ಬೋಟ್ ನಿಲುಗಡೆ ಸಮಸ್ಯೆ

    ಗಂಗೊಳ್ಳಿ: ಮೀನುಗಾರರ ಬಹುಕಾಲದ ಬೇಡಿಕೆಯಾಗಿದ್ದ ಸುಮಾರು 12 ಕೋಟಿ ರೂ. ವೆಚ್ಚದ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯ ಪುನರ್ ನಿರ್ಮಾಣ ಕಾರ್ಯ ಸಾಗುತ್ತಿದೆ. ಆದರೆ ಈ ಮೀನುಗಾರಿಕೆ ಋತುವಿಗೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಇರುವ ಚಿಕ್ಕ ದೊಡ್ಡ ಮೀನುಗಾರಿಕೆ ದೋಣಿಗಳಿಗೆ ನಿಲುಗಡೆಗೆ ಸ್ಥಳವಕಾಶ ಸಾಕಾಗದೆ ಮೀನುಗಾರಿಕಾ ಚಟುವಟಿಕೆಗೆ ಅಡ್ಡಿಯಾಗುತ್ತಿದೆ.

    ಬಂದರು ಪ್ರದೇಶದಲ್ಲಿ ನಿರ್ಮಾಣ ವಾಗುತ್ತಿರುವ 405 ಮೀಟರ್ ಉದ್ದದ ಜೆಟ್ಟಿಯ ಪೈಕಿ ಸುಮಾರು 200 ಮೀಟರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಹರಾಜು ಪ್ರಾಂಗಣ, ಚರಂಡಿ ನಿರ್ಮಾಣ ಹಾಗೂ ಇನ್ನಿತರ ಕಾರ್ಯಗಳ ಇನ್ನಷ್ಟೇ ನಡೆಯಬೇಕಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಕಾಮಗಾರಿ ಗುಣಮಟ್ಟದ ಚೆನ್ನಾಗಿರುವುದು ಸ್ಥಳೀಯ ಮೀನುಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.ಆದರೆ ತ್ವರಿತವಾಗಿ ಕಾಮಗಾರಿ ಮುಗಿದಿದ್ದರೆ ಈ ಋತುವಿನಲ್ಲಿ ಮೀನುಗಾರಿಕೆ ಚಟುವಟಿಕೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುತ್ತಿತ್ತು ಎನ್ನುವುದು ಅವರ ಅಭಿಪ್ರಾಯ. ಜೆಟ್ಟಿ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.

    ಎರಡು ವರ್ಷದಿಂದ ಪ್ರಯೋಜನಕ್ಕಿಲ್ಲ: 2018ರ ಅ. 13 ರಂದು ಕುಸಿದು ಬಿದ್ದ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕಳೆದೆರಡು ವರ್ಷಗಳಿಂದ ಮೀನುಗಾರರ ಪ್ರಯೋಜನಕ್ಕೆ ಸಿಕ್ಕಿಲ್ಲ. ಜೆಟ್ಟಿಯ ಸಂಪೂರ್ಣ ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 12 ಕೋಟಿ ರೂ. ಯೋಜನೆಗೆ 2020ರ ಫೆ. 16 ರಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 2021ರ ಫೆ.26ರಂದು ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಗೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಚಾಲನೆ ನೀಡಿದ್ದರು. ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕುಸಿದು ಬರೋಬ್ಬರಿ ಎರಡು ವರ್ಷಗಳ ಬಳಿಕ ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು.

    300ಕ್ಕೂ ಅಧಿಕ ಪರ್ಸಿನ್ ಬೋಟುಗಳು, 600ಕ್ಕೂ ಮಿಕ್ಕಿ ಬೋಟು ಹಾಗೂ 500ಕ್ಕೂ ಅಧಿಕ ನಾಡದೋಣಿಗಳಿದ್ದು, ಸಾವಿರಾರು ಮೀನುಗಾರರು ಅವಲಂಬಿಸಿರುವ ಬಂದರು ಇದಾಗಿದೆ. ಆದರೆ ಸುಮಾರು 405 ಮೀ. ಉದ್ದದ ಮೀನುಗಾರಿಕಾ ಜೆಟ್ಟಿಯಲ್ಲಿ ಈಗ ಕೇವಲ 200 ಮೀ. ಮಾತ್ರ ಮೀನುಗಾರರ ಉಪಯೋಗಕ್ಕೆ ಸಿಗುತ್ತಿದೆ. ಇದರಿಂದ ಬೋಟ್, ದೋಣಿಗಳನ್ನು ನಿಲ್ಲಿಸಲು ನಿತ್ಯ ಸಮಸ್ಯೆಯಾಗುತ್ತಿದೆ. ಈ ವರ್ಷದ ಮೀನುಗಾರಿಕಾ ಚಟುವಟಿಕೆಗಳು ಮುಗಿಯುವ ಮುನ್ನವಾದರೂ ಜೆಟ್ಟಿ ಪುನರ್ ನಿರ್ಮಾಣ ಕಾಮಾಗಾರಿ ಮುಗಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡ ಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ. ಜೆಟ್ಟಿ ಸಮೀಪ ಕಾಂಕ್ರೀಟ್ ನೆಲಹಾಸು ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ. ಮೀನುಗಾರಿಕೆ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವುದರ ಒಳಗಾಗಿ ಜೆಟ್ಟಿ ನಿರ್ಮಾಣದ ಇನ್ನುಳಿದ ಕಾಮಗಾರಿಗಳು ಪೂರ್ಣಗೊಳ್ಳುವುದು ಕಷ್ಟಸಾಧ್ಯ. ಜೆಟ್ಟಿ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ಈ ಬಾರಿಯೂ ಮೀನುಗಾರಿಕಾ ಚಟುವಟಿಕೆಗಳಿಗೆ ತೊಡಕಾಗುವ ಸಾಧ್ಯತೆಗಳಿದ್ದು, ಬೋಟ್, ದೋಣಿಗಳನ್ನು ನಿಲ್ಲಿಸಲು ಸಮಸ್ಯೆಯಾಗಲಿದೆ. ಜೆಟ್ಟಿ ಸಮೀಪ ನೆಲ ಸಮತಟ್ಟು ಮಾಡಿ ಕಾಂಕ್ರೀಟ್ ನೆಲಹಾಸು ಹಾಕುವ ಕೆಲಸ ನಡೆಯದಿದ್ದಲ್ಲಿ ಮೀನುಗಾರರಿಗೆ ಬಹಳಷ್ಟು ತೊಂದರೆಯಾಗಲಿದೆ. ಅಲ್ಲದೆ ಬೋಟ್ ಮತ್ತು ದೋಣಿಗಳಿಂದ ಮೀನನ್ನು ಸಾಗಿಸಲು ಮೀನುಗಾರ ಮಹಿಳೆಯರು ಹರಸಾಹಸ ಪಡಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts