More

    ಬೋಟ್ ಮೇಲಕ್ಕೆತ್ತುವ ಕಾರ್ಯ ಸ್ಥಗಿತ

    ಮಂಗಳೂರು: 12 ನಾಟಿಕಲ್ ಮೈಲು ದೂರ ಆಳ ಸಮುದ್ರದಲ್ಲಿ ಸೋಮವಾರ ರಾತ್ರಿ ಮುಳುಗಡೆಯಾದ ‘ಶ್ರೀ ರಕ್ಷಾ’ ಬೋಟ್ ಮೇಲಕ್ಕೆತ್ತುವ ಕಾರ್ಯಾಚರಣೆ ಟಗ್ ಮೂಲಕ ಅಸಾಧ್ಯವಾದ ಕಾರಣ ಸ್ಥಗಿತಗೊಂಡಿದೆ.
    ದುರಂತದಲ್ಲಿ ನಾಪತ್ತೆಯಾಗಿದ್ದ ಐವರ ಮೃತದೇಹ ಈಗಾಗಲೇ ಪತ್ತೆಯಾಗಿವೆ. ಆದರೆ, ನಾಪತ್ತೆಯಾಗಿರುವ ಕಸ್ಬ ಬೆಂಗ್ರೆಯ ಅನ್ಸಾರ್ (31)ಪತ್ತೆಗೆ ಕರಾವಳಿ ಕಾವಲು ಪಡೆ ಪೊಲೀಸರು ಮೂರು ಬೋಟ್‌ಗಳಲ್ಲಿ ಹಾಗೂ ಮುಳುಗು ತಜ್ಞರು ಶುಕ್ರವಾರವೂ ಹುಡುಕಾಟ ಮುಂದುವರಿಸಿದ್ದರು. ಯಾವುದೇ ಪ್ರಯೋಜನವಾಗಿಲ್ಲ. ಅನ್ಸಾರ್ ಮೃತದೇಹ ಮುಳುಗಿದ ದೋಣಿಯೊಳಗಡೆ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಡಳಿತದ ಸೂಚನೆ ಮೇರೆಗೆ ಧರತಿ ಟಗ್ ಮೂಲಕ ಅಲುಗಾಡಿಸಿ ಮುಳುಗು ತಜ್ಞರು ಅಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ.
    ಬೋಟ್ ಮುಳುಗಿದ ಪ್ರದೇಶದಲ್ಲಿ ದಿನದ 24 ಗಂಟೆಯೂ ಮೀನುಗಾರಿಕೆ ನಡೆಯುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ಎಲ್ಲ ಬೋಟ್‌ನವರಿಗೆ ಸಂದೇಶ ರವಾನಿಸಲಾಗಿದೆ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ತಿಳಿಸಿದ್ದಾರೆ.

    ಮುಳುಗಡೆಯಾದ ‘ಶ್ರೀರಕ್ಷಾ’ ಬೋಟ್ ಸುಮಾರು 65 ಟನ್ ತೂಕ ಇದ್ದು, ಬಾರ್ಜ್, ಟಗ್ ಮೂಲಕ ಅದನ್ನು ನೀರಿನಿಂದ ಮೇಲಕ್ಕೆತ್ತಲು ಸಾಧ್ಯವಿಲ್ಲ. ಟಗ್ ಮೂಲಕ ಎತ್ತಲು ಪ್ರಯತ್ನಿಸಲಾಗಿತ್ತು. ಪೂರ್ಣಪ್ರಮಾಣದಲ್ಲಿ ಮೇಲೆತ್ತಲು ಅಸಾಧ್ಯ ಎನ್ನುವುದು ಗೊತ್ತಾಗಿದೆ. ಅದರ ತೆರವು ಮಾಡಲು ಸರ್ಕಾರದ ಮಟ್ಟದಲ್ಲಿ ಇನ್ನಷ್ಟೇ ನಿರ್ಧಾರ ಆಗಬೇಕಾಗಿದೆ. ಇಲಾಖೆಯಲ್ಲಿ ಅಂತಹ ವ್ಯವಸ್ಥೆಗಳಿಲ್ಲ. ಘಟನೆಗೆ ಸಂಬಂಧಿಸಿದ ವಿವರಗಳನ್ನು ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಕಳುಹಿಸಿದ್ದೇವೆ ಎಂದು ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಮೀನುಗಾರರಿಗೆ ಶುಕ್ರವಾರ ರಜೆಯಾದ ಕಾರಣ ಅನ್ಸಾರ್‌ನ ಹುಡುಕಾಟಕ್ಕೆ ಮೀನುಗಾರರು ಸಮುದ್ರಕ್ಕೆ ತೆರಳಿಲ್ಲ. ಉರ್ವ ಮಾರಿಯಮ್ಮನ ತಿಂಗಳ ಪೂಜೆಯ ಪ್ರಯುಕ್ತ ಪರ್ಸೀನ್ ಬೋಟಿನ ಮೀನುಗಾರರು ರಜೆ ಹಾಕಿ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಪರ್ಸೀನ್ ಬೋಟ್ ಮಾಲೀಕ ಉಮೇಶ್ ತಿಳಿಸಿದ್ದಾರೆ.

    ಮೀನು ಮಾರ್ಕೆಟ್ ಯಥಾಸ್ಥಿತಿಗೆ
    ಬುಧವಾರ ಮೀನುಗಾರರ ಶೋಕಾಚರಣೆಯಿಂದ ದಕ್ಕೆಗೆ ಬಂದ ಬೋಟುಗಳಿಂದ ಮೀನು ಇಳಿಸುವ ಕೆಲಸ ಆಗಿರಲಿಲ್ಲ. ಗುರುವಾರ ಮತ್ತಷ್ಟು ಬೋಟುಗಳು ದಕ್ಕೆ ಬಂದ ಪರಿಣಾಮ ಪೂರೈಕೆ ಹೆಚ್ಚಳವಾಗಿ ಮೀನು ದರ ಇಳಿಕೆಯಾಗಿತ್ತು. ಆದರೆ ಶುಕ್ರವಾರ ಮೀನು ದರ ಯಥಾಸ್ಥಿತಿಗೆ ಮರಳಿದೆ.

    ಪರ್ಸೀನ್ ಸಂಘದಿಂದ ನೆರವು
    ಮೃತ ಮೀನುಗಾರ ಕುಟುಂಬಸ್ಥರಿಗೆ ಪರ್ಸಿನ್ ಮೀನುಗಾರರ ಸಂಘವೂ ನೆರವು ನೀಡಲಿದೆ. ಮುಳುಗು ತಜ್ಞರಿಗೂ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಆದರೆ ಮೀನುಗಾರ ಮುಖಂಡರು ಜತೆಗೂಡಿ ಸಭೆ ಮಾಡಿದ ಬಳಿಕವೇ ಎಷ್ಟು ಮೊತ್ತ ಎನ್ನುವುದು ನಿರ್ಧಾರ ಆಗಲಿದೆ ಎಂದು ಪರ್ಸಿನ್ ಮೀನುಗಾರಿಕಾ ಸಂಘದ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ ತಿಳಿಸಿದ್ದಾರೆ.

    ಸಮುದ್ರ ಸೇರಲಿದೆಯಾ ಬೋಟ್?
    ಇರೀಟ್ರಿಯಾ ದೇಶದ ಡೆನ್‌ಡೆನ್ ಹಡಗು 2007ರ ಜೂ.23ರಂದು ನವಮಂಗಳೂರು ಬಂದರು ಮೂಲಕ ಹೋಗಿ ತಣ್ಣೀರು ಬಾವಿ ಬಳಿ ಅಪಾಯಕ್ಕೆ ಗುರಿಯಾಗಿತ್ತು. 2008ರ ಜು.17ರಂದು ಎನ್‌ಎಂಪಿಟಿನಿಂದ ಹೊರಟ ಇತಿಯೋಪಿಯಾದ ಏಷಿಯನ್ ಾರೆಸ್ಟ್ ಹಡಗು ಅರಬ್ಬಿ ಸಮುದ್ರದಲ್ಲಿ ಮುಳುಗಿತ್ತು. 2017ರಲ್ಲಿ ಆಂಧ್ರದ ಧರತಿ ಕಂಪನಿಯ ಬಾರ್ಜ್ ಉಳ್ಳಾಲದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿತ್ತು. ಹಲವಾರು ಮೀನುಗಾರಿಕಾ ದೋಣಿಗಳು ಅಳಿವೆಬಾಗಿಲು ಸೇರಿದಂತೆ ವಿವಿಧ ಕಡೆ ಅವಘಡಕ್ಕೀಡಾಗಿ ಸಮುದ್ರದಲ್ಲಿ ಮುಳುಗಿವೆ. ಶ್ರೀರಕ್ಷಾ ಬೋಟ್ ಕೂಡ ಅದರೊಂದಿಗೆ ಸೇರಿಕೊಳ್ಳಲಿದೆಯೇ ಎನ್ನುವ ಪ್ರಶ್ನೆ ಮೀನುಗಾರರಲ್ಲಿ ಮೂಡಿದೆ.

    ನೀರಿಗೆ ಇಳಿದ ಮೀನುಗಾರ ನಾಪತ್ತೆ
    ದೋಣಿ ದುರಂತದ ನೆನಪು ಹಸಿರಾಗಿರುವಾಗಲೇ ಇಲ್ಲಿನ ಮೀನುಗಾರಿಕಾ ದಕ್ಕೆಯಲ್ಲಿ ಶುಕ್ರವಾರ ಇನ್ನೊಂದು ದುರಂತ ಸಂಭವಿಸಿದೆ. ಟ್ರಾಲ್ ಬೋಟಿನ ಫ್ಯಾನ್‌ಗೆ ಸಿಕ್ಕಿದ ಹಗ್ಗವನ್ನು ತೆಗೆಯಲು ನೀರಿಗೆ ಇಳಿದ ವ್ಯಕ್ತಿ ಶುಕ್ರವಾರ ನಾಪತ್ತೆಯಾಗಿದ್ದಾರೆ.

    ಉಳ್ಳಾಲ ರಾಜೇಶ್ ಅವರಿಗೆ ಸೇರಿದ ಸ್ನೇಹಾ ಶ್ರೇಯಸ್ ಟ್ರಾಲ್ ಬೋಟು ಮೀನುಗಾರಿಕೆ ಹೊರಡಲು ಸಿದ್ಧವಾಗಿತ್ತು. ಆದರೆ ಬೋಟಿನ ಫ್ಯಾನ್‌ನ ರೆಕ್ಕೆಗೆ ಹಗ್ಗ ಸಿಕ್ಕಿಕೊಂಡಿದ್ದು, ಅದನ್ನು ತೆಗೆಯಲು ಹೋದ ತಮಿಳುನಾಡಿನ ಅರ್ಜುನ್(40) ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ತಣ್ಣೀರುಬಾವಿಯ ಮುಳುಗು ತಜ್ಞರ ತಂಡದ ನೆರವಿನಿಂದ ಅವರ ಪತ್ತೆ ಕಾರ್ಯ ನಡೆಯುತ್ತಿದೆ. ಸಂಜೆ 7ರ ಸುಮಾರಿಗೆ ಈ ಘಟನೆ ನಡೆದಿರುವುದರಿಂದ ಮುಳುಗು ತಜ್ಞರಿಗೆ ಹುಡುಕಾಟ ನಡೆಸಲು ಸ್ವಲ್ಪ ಕಷ್ಟವಾಗಿದೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts