More

    ಬಿಎಂಆರ್​ಸಿಎಲ್​ನಿಂದ ಮತ್ತೊಂದು ಪ್ರಯೋಗ: ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು

    | ಗಿರೀಶ್ ಗರಗ
    ಬೆಂಗಳೂರು: ಮೆಟ್ರೋ 2ನೇ ಹಂತದಲ್ಲಿ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆ ಜಾರಿ ಸೇರಿ ಹಲವು ಪ್ರಯೋಗಗಳಿಗೆ ಮುಂದಾಗಿರುವ ಬಿಎಂಆರ್​ಸಿಎಲ್, ಇದೀಗ ಚಾಲಕರಹಿತ ರೈಲು ಸಂಚಾರಕ್ಕೆ ಯೋಜನೆ ರೂಪಿಸಿದೆ.

    2ನೇ ಹಂತದ 72 ಕಿ.ಮೀ. ಮಾರ್ಗ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಾರ್ಗಗಳು ಪೂರ್ಣಗೊಳ್ಳುವುದಕ್ಕೆ ಮುನ್ನವೇ ರೈಲು ಸೇವೆ ಹೇಗಿರಬೇಕು ಎಂಬ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಅದರಂತೆ 2ನೇ ಹಂತದಲ್ಲಿನ ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರವರೆಗಿನ (ಹಳದಿ ಮಾರ್ಗ) 18.82 ಕಿ.ಮೀ. ಮಾರ್ಗದಲ್ಲಿ ಚಾಲಕರಹಿತ ರೈಲುಗಳ ಸಂಚಾರಕ್ಕೆ ನಿರ್ಧರಿಸಲಾಗಿದೆ. ಇದಕ್ಕಾಗಿ ಅನ್​ಅಟೆಂಡರ್ಡ್ ಟ್ರೖೆನ್ ಆಪರೇಷನ್ (ಯುಟಿಒ) ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಅರ್ಹ ಸಂಸ್ಥೆಗಾಗಿ ಟೆಂಡರ್ ಆಹ್ವಾನಿಸಲಾಗಿದೆ.

    ಇದನ್ನೂ ಓದಿ: ಕೇಂದ್ರ ಸಚಿವ ಜಾವಡೇಕರ್ ಜತೆಗೆ ಬುಧವಾರ ವೇದಿಕೆ ಹಂಚಿಕೊಂಡಿದ್ದ ಪಿಐಬಿ ಡಿಜಿಗೆ ಕೋವಿಡ್-19 ಸೋಂಕು ದೃಢ

    ಚಾಲಕನ ಕ್ಯಾಬಿನ್ ಇರುವುದಿಲ್ಲ

    ನೂತನ ವ್ಯವಸ್ಥೆಯಿಂದಾಗಿ ಈಗಿನ ರೈಲುಗಳಲ್ಲಿರುವಂತೆ ಚಾಲಕನ ಕ್ಯಾಬಿನ್ ಇರುವುದಿಲ್ಲ. ಆ ಸ್ಥಳದಲ್ಲಿ ಪ್ರಯಾಣಿಕರು ಸಂಚರಿಸಬಹುದಾಗಿದೆ. ನೂತನ ವ್ಯವಸ್ಥೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ಸಿಗಲಿದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಒಎ2 ರಿಂದ ಜಿಒಎ4: 1ನೇ ಹಂತದಲ್ಲಿ ಗ್ರೇಡ್ ಆಫ್ ಆಟೋಮೋಷನ್ (ಜಿಒಎ) 2ನೇ ಶ್ರೇಣಿಯ ರೈಲು ಸೇವೆ ನೀಡಲಾಗುತ್ತಿದೆ. ಅದನ್ನು 2ನೇ ಹಂತದಲ್ಲಿ ಜಿಒಎ 4ನೇ ಶ್ರೇಣಿಗೆ ರೈಲು ಸೇವೆ ಉನ್ನತೀಕರಿಸಲಾಗುತ್ತದೆ. ಜಿಒಎ2ನಲ್ಲಿ ರೈಲು ನಿಲುಗಡೆ ಮತ್ತು ಸಂಚಾರ ಸ್ವಯಂಚಾಲಿತವಾಗಿದೆ. ಆದರೆ ಬಾಗಿಲುಗಳ ನಿಯಂತ್ರಣ, ನಿಲ್ದಾಣಗಳ ಬಗೆಗಿನ ವಿವರಣೆ ನೀಡುವುದು ಸೇರಿ ಇನ್ನಿತರ ಕಾರ್ಯಗಳನ್ನು ಚಾಲಕರು ಮಾಡುತ್ತಾರೆ.

    ಆದರೆ ಜಿಒಎ4ರಿಂದ ಪ್ರತಿ ಕೆಲಸವನ್ನೂ ಮೊದಲೇ ನಿಗದಿ ಮಾಡಲಾಗಿರುತ್ತದೆ. ಅದಕ್ಕೆ ಚಾಲಕ ಸೇರಿ ಯಾವುದೇ ಸಿಬ್ಬಂದಿ ಅವಶ್ಯಕತೆಯಿರುವುದಿಲ್ಲ. ಸಿಗ್ನಲ್​ಗಳ ಮೂಲಕ ರೈಲು ಚಾಲನೆ ಮಾಡುವ ವ್ಯವಸ್ಥೆ ಇರುತ್ತದೆ. ಕಮ್ಯುನಿಕೇಷನ್ ಬೇಸ್ಡ್ ಟ್ರೖೆನ್ ಕಂಟ್ರೋಲ್ ವ್ಯವಸ್ಥೆ ಅಳವಡಿಸುವುದರಿಂದ ಸೆನ್ಸರ್ ಆಧಾರದಲ್ಲಿ ರೈಲುಗಳ ವೇಗ, ನಿಲ್ದಾಣಗಳಲ್ಲಿ ನಿಲುಗಡೆ ಸೇರಿ ಇನ್ನಿತರ ಕಾರ್ಯ ನಿಯಂತ್ರಿಸಬಹುದು.

    ಸಮಯ, ಸಿಬ್ಬಂದಿ ಉಳಿತಾಯ

    ನೂತನ ವ್ಯವಸ್ಥೆಯಿಂದಾಗಿ ಪ್ರತಿ ರೈಲಿನ ಸಂಚಾರದಲ್ಲಿ 1.30 ನಿಮಿಷಕ್ಕೂ ಹೆಚ್ಚಿನ ಅವಧಿ ಉಳಿತಾಯವಾಗಲಿದೆ. ಅದರ ಜತೆಗೆ ಚಾಲಕ ಸೇರಿ ಇನ್ನಿತರ ಸಿಬ್ಬಂದಿ ಬೇಕಾಗುವುದಿಲ್ಲ. ಈ ಎಲ್ಲ ಕಾರಣದಿಂದ ಬಿಎಂಆರ್​ಸಿಎಲ್ ತಗಲುವ ವೆಚ್ಚ ಉಳಿತಾಯವಾಗಲಿದೆ.

    15 ರೈಲುಗಳು: ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುತ್ತದೆ. ಖಾಸಗಿ ಸಂಸ್ಥೆಯೊಂದಕ್ಕೆ ತಲಾ 6 ಬೋಗಿಗಳುಳ್ಳ 15 ರೈಲುಗಳನ್ನು ಪೂರೈಸಲು ಈಗಾಗಲೆ ಗುತ್ತಿಗೆ ನೀಡಲಾಗಿದೆ. ಒಟ್ಟು 90 ಬೋಗಿಗಳು ಅನ್​ಅಟೆಂಡರ್ಡ್ ಟ್ರೖೆನ್ ಆಪರೇಷನ್ ಅಡಿಯಲ್ಲಿ ಸಂಚರಿಸಲಿವೆ.

    ಹಲವು ಕಾರ್ಯ ಆಗಬೇಕು: ಯುಟಿಒ ವ್ಯವಸ್ಥೆ ಜಾರಿಗಾಗಿ ರೈಲು ಸೇವೆಯ ಪ್ರತಿಯೊಂದು ವ್ಯವಸ್ಥೆಯೂ ಬದಲಾಗಬೇಕಿದೆ. ಸಿಗ್ನಲ್ ವ್ಯವಸ್ಥೆ, ಇಂಜಿನ್ ಮತ್ತು ಬೋಗಿಗಳ ವಿನ್ಯಾಸ, ಸಂವಹನ, ರೈಲುಗಳ ನಿಯಂತ್ರಣ ವ್ಯವಸ್ಥೆ, ವಿದ್ಯುತ್ ಪೂರೈಕೆ ಸೇರಿ ಎಲ್ಲವೂ ವಿಭಿನ್ನವಾಗಿರಲಿದೆ. ಈ ವ್ಯವಸ್ಥೆ ಅಳವಡಿಸುವುದಕ್ಕಾಗಿ ಇದೀಗ ಗುತ್ತಿಗೆ ಕರೆಯಲಾಗಿದೆ. ಗುತ್ತಿಗೆ ಪಡೆಯುವ ಸಂಸ್ಥೆ ಮುಂದಿನ 30 ತಿಂಗಳಲ್ಲಿ ಯುಟಿಒ ವ್ಯವಸ್ಥೆ ಜಾರಿಗೊಳಿಸಬೇಕಿದೆ.

    ನೀರಿನ ಸಂಪರ್ಕ ಪಡೆದವರ ವಿವರ ಡಿಜಿಟಲೀಕರಣಕ್ಕೆ ಜಲಮಂಡಳಿ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts