More

    ಅರಳಿದ ತಾವರೆ, ಮುದುಡಿದ ಬದುಕು

    ಬೆಳಗಾವಿ: ಮಹಾಮಾರಿ ಕರೊನಾ ವೈರಸ್ ದೇಶದಲ್ಲಿ ಆತಂಕ ಸೃಷ್ಟಿಸಿದ್ದರಿಂದ ಬೆಳಗಾವಿ ಜಿಲ್ಲೆಯ ಪುಷ್ಪ ಕೃಷಿಕರು ಕಂಗಾಲಾಗಿದ್ದಾರೆ. ಖರೀದಿಸುವವರಿಲ್ಲದೆ ರೈತರು ವಿವಿಧ ಬಗೆಯ ಹೂವುಗಳನ್ನು ತಿಪ್ಪೆಗೆ ಸುರಿಯುತ್ತಿದ್ದಾರೆ.

    ಕರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಆದೇಶ ಹೊರಡಿಸಿದ್ದರಿಂದ ಜಿಲ್ಲೆಯಲ್ಲಿ ಹೂವಿನ ಬೆಲೆ ಪಾತಾಳಕ್ಕೆ ಕುಸಿದಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಹೂವುಗಳನ್ನು ಕೇಳುವವರೇ ಇಲ್ಲ. ಇನ್ನು ಲಾಕ್‌ಡೌನ್‌ದಿಂದ ರಾಜ್ಯ ಸರ್ಕಾರ ಹಬ್ಬ-ಹರಿದಿನ, ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ, ಹೋಮ-ಹವನ, ಜಾತ್ರಾ ಮಹೋತ್ಸವ ಹಾಗೂ ಸಭೆ-ಸಮಾರಂಭಗಳನ್ನು ಸ್ಥಗಿತಗೊಳಿಸಿದ್ದರಿಂದ ಹೂವಿನ ಬೆಲೆ ಗಣನೀಯವಾಗಿ ಕುಸಿತಗೊಂಡಿದೆ. ಬೆಳಗಾವಿ ಜಿಲ್ಲೆಯ ಬಹುತೇಕ ರೈತರು ಪುಷ್ಪ ಕೃಷಿಯನ್ನೇ ನಂಬಿಕೊಂಡಿದ್ದರು. ಈಗ ಮಹಾಮಾರಿ ಕರೊನಾ ಭೀತಿಯಿಂದ ದೇವಾನು ದೇವತೆಗಳಿಗೆ ಪ್ರೀಯವಾದ ಹೂವುಗಳನ್ನು ಯಾರೂ ಕೊಳ್ಳುತ್ತಿಲ್ಲ. ಸಾಮಾನ್ಯವಾಗಿ ಬೇಸಿಯಲ್ಲಿ ಮದುವೆ ಸಮಾರಂಭ ಹಾಗೂ ಜಾತ್ರೆಗಳು ಹೆಚ್ಚಾಗಿ ನಡೆಯುತ್ತವೆ. ಹೀಗಾಗಿ ಪುಷ್ಪ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಹೂವಿನ ಕೃಷಿ ಮಾಡಿದ್ದರು. ಆದರೆ, ದೇಶದೆಲ್ಲೆಡೆ ವ್ಯಾಪಿಸಿರುವ ಕರೊನಾ ವೈರಸ್‌ನಿಂದಾಗಿ ಬೆಳೆದ ಹೂವುಗಳಿಗೆ ಸೂಕ್ತ ಬೆಲೆ ಸಿಗದಾಗಿದೆ.

    ಹೂವಿನ ಬೆಳೆ ನಾಶ: ಬೆಳೆದ ಹೂವಿನಿಂದ ಒಂದಿಷ್ಟೂ ಲಾಭ ದಕ್ಕದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಕೆಲವರು ಅರಳಿದ ಹೂವುಗಳನ್ನು ಕಟಾವು ಮಾಡಿ ಮಾರುಕಟ್ಟೆಗೆ ಹೊತ್ತೊಯ್ಯುತ್ತಿದ್ದಾರೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರೇ ಸುಳಿಯುತ್ತಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ಕಷ್ಟಪಟ್ಟು ಬೆಳೆದ ಹೂವುಗಳನ್ನು ಚರಂಡಿಗೆ ಸುರಿದು ಬರುತ್ತಿದ್ದಾರೆ. ಕೆಲವರು ಅರಳಿದ ಹೂವುಗಳನ್ನು ಹೊಲದಲ್ಲೇ ಕಟಾವು ಮಾಡಿ ಬಿಸಾಕುತ್ತಿದ್ದರೆ, ಇನ್ನೂ ಕೆಲವರು ಇಡೀ ಹೊಲಕ್ಕೆ ನೇಗಿಲು ಹೊಡೆದು ರಾತ್ರೋರಾತ್ರಿ ಹೂವಿನ ಬೆಳೆ ನಾಶ ಮಾಡುತ್ತಿದ್ದಾರೆ.

    ಮಾರುಕಟ್ಟೆ ಸ್ತಬ್ಧ: ರಾಜ್ಯದಲ್ಲಿಯೇ ಬೆಳಗಾವಿ ಮಾರುಕಟ್ಟೆ ಹೂವಿನ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿದೆ. ಇದೇ ಮಾರುಕಟ್ಟೆಯಿಂದ ಮಹಾರಾಷ್ಟ್ರ ಹಾಗೂ ಗೋವಾ ವ್ಯಾಪಾರಸ್ಥರು ಹೂವು ಖರೀದಿಸಿ ದೂರದ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ, ಕರೊನಾ ಭೀತಿಯಿಂದ ಬೆಳಗಾವಿ ಹೂವು ಮಾರುಕಟ್ಟೆಯೇ ಸ್ತಬ್ಧವಾಗಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ, ಗೋಕಾಕ ಹಾಗೂ ಬೆಳಗಾವಿ ಮಾರುಕಟ್ಟೆಯಿಂದ ಪ್ರತಿದಿನ ಸಾವಿರಾರು ಕ್ವಿಂಟಾಲ್ ಹೂವು ಮುಂಬೈ, ಚೆನ್ನೈ ಹಾಗೂ ಹೈದರಾಬಾದ್‌ಗೆ ರಫ್ತಾಗುತ್ತಿತ್ತು. ಈಗ ಅಲ್ಲಿನ ಮಳಿಗೆಗಳೂ ಬಂದ್ ಆಗಿದ್ದರಿಂದ ಹೂವು ವ್ಯಾಪಾರವೇ ನಿಂತುಹೋಗಿದೆ ಎನ್ನುತ್ತಾರೆ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ರೈತ ಮಹಾದೇವಪ್ಪ ಜೋಡಟ್ಟಿ.

    ಬದುಕಿಗೆ ಆಘಾತ: ಕಳೆದ ತಿಂಗಳು ಕೆಜಿಗೆ 50 ರೂ.ಗೆ ಮಾರಾಟವಾಗುತ್ತಿದ್ದ ಚೆಂಡು ಹೂವು ಕೇವಲ 5 ರೂ.ಗೆ ಮಾರಾಟವಾಗುತ್ತಿದೆ. ಕೆಜಿಗೆ 200 ರೂ. ಇದ್ದ ಸೇವಂತಿ ಬೆಲೆ 35 ರೂ.ಗೆ ಕುಸಿದೆ. 5-6 ರೂ.ಗೆ ಒಂದರಂತೆ ಮಾರಾಟವಾಗುತ್ತಿದ್ದ ಗುಲಾಬಿ ಹೂವು ಈಗ ಕೇವಲ 1-2 ರೂ. ಬೆಲೆಯಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಜಿಲ್ಲೆಯ ಬಹುತೇಕ ರೈತರು ಬೆಳೆಹಾನಿಯಿಂದ ನಷ್ಟ ಅನುಭವಿಸಿ ಈ ಬಾರಿ ಜೀವನ ನಿರ್ವಹಣೆಗೆಂದು ಪುಷ್ಪ ಕೃಷಿ ಮಾಡಿದ್ದರು. ಆದರೆ, ಮಾರುಕಟ್ಟೆಯಲ್ಲಿ ಹೂವು ಕೊಳ್ಳುವವರಿಲ್ಲದೆ ಹೂವು ಬೆಳೆಗಾರರ ಬದುಕೇ ಮುದುಡಿದಂತಾಗಿದೆ.

    ದ್ವಿಗುಣಗೊಂಡ ಹೂವು ಇಳುವರಿ

    ತೋಟಗಾರಿಕೆ ಇಲಾಖೆ ಮಾಹಿತಿಯಂತೆ ಕಳೆದ ವರ್ಷ (2018-19ನೇ ಸಾಲು) ಜಿಲ್ಲೆಯಲ್ಲಿ 1290.89 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹೂವು ಬೆಳೆದಿದ್ದರು. ಈ ವರ್ಷ (2019-20) ಮಾರ್ಚ್ ಮೊದಲ ವಾರದ ವರೆಗೆ 1835.55 ಹೆಕ್ಟೇರ್ ಪ್ರದೇಶ ಹೂವಿನ ಬೆಳೆಯಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 600 ಹೆಕ್ಟೇರ್ ಹೂವಿನ ಬೆಳೆ ವೃದ್ಧಿಯಾಗಿದೆ. ಅಲ್ಲದೆ, ಕಳೆದ ವರ್ಷ ಶೇ.12.5ರಷ್ಟು ಹೂವಿನ ಇಳುವರಿ ಇತ್ತು. ಈ ವರ್ಷ 15.3ರಷ್ಟು ಇಳುವರಿ ವೃದ್ಧಿಯಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ.

    ಬೆಳಗಾವಿ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹೂವು ಖರೀದಿಸಿ ದೂರದ ಮುಂಬೈ, ಚೆನ್ನೈಗೆ ಸಾಗಿಸುತ್ತಿದ್ದೆ. ಆದರೆ, ಸರ್ಕಾರದ ಲಾಕ್‌ಡೌನ್ ಆದೇಶದಿಂದ ಬೆಳಗಾವಿ ಪುಷ್ಪ ಮಾರುಕಟ್ಟೆಯೇ ಸ್ಥಗಿತೊಂಡಿದೆ. ಪ್ರತಿದಿನ ಹೂವು ವ್ಯಾಪಾರ ಮಾಡಿದರೆ ಮಾತ್ರ ನಮಗೆ ಹೊಟ್ಟೆಗೆ ಹಿಟ್ಟು. ಹಾಗಾಗಿ ಸರ್ಕಾರ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಅನುವು ಮಾಡಿಕೊಟ್ಟಂತೆ ಹೂವು ವ್ಯಾಪಾರಕ್ಕೂ ಅವಕಾಶ ಕಲ್ಪಿಸಬೇಕು.
    | ಅಬ್ದುಲ್‌ರಜಾಕ್ ಅಕ್ಬರಸಾಬ ಚಿಕ್ಕೋಡಿ ಹೂವು ವ್ಯಾಪಾರಸ್ಥ, ಬೆಳಗಾವಿ

    ಎರಡು ಎಕರೆಯಲ್ಲಿ ಚೆಂಡು ಹೂವು ಬೆಳೆದಿದ್ದೆ. ಲಾಕ್‌ಡೌನ್‌ದಿಂದ ಹೂವಿಗೆ ಸೂಕ್ತ ಬೆಲೆ ದೊರಕದೆ ಹೊಲದಲ್ಲೇ ನಾಶಪಡಿಸುತ್ತಿದ್ದೇನೆ. ಪುಷ್ಪ ಕೃಷಿಕರು ಆರ್ಥಿಕ ತೊಂದರೆ ಅನುಭವಿಸುತ್ತಿದ್ದು, ಸರ್ಕಾರ ನೆರವಿಗೆ ಬರಬೇಕು.
    | ಕಲ್ಲಪ್ಪ ಶಿವಲಿಂಗ ನಾಯಿಕ ಝಂಟಿಹಾಳ ಗ್ರಾಮ, ಹುಕ್ಕೇರಿ ತಾಲೂಕು

    | ಅಕ್ಕಪ್ಪ ಮಗದುಮ್ಮ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts