More

    ಯುವಜನತೆಗೆ ರಕ್ತದಾನದ ಜಾಗೃತಿ ಅಗತ್ಯ

    ಸವಣೂರ: ಯುವಕರು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮಾಚರಣೆಯನ್ನು ರಕ್ತದಾನ ಮೂಲಕ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ರಕ್ತ ಭಂಡಾರ ವೈದ್ಯಾಧಿಕಾರಿ ಡಾ. ಕವನಾ ಹಿರೇಮಠ ಹೇಳಿದರು.

    ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದ ಗ್ರಾಪಂನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಮತ್ತು ತಾಲೂಕು ರಕ್ತ ಭಂಡಾರ ಸಹಯೋಗದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸವಣೂರ ಶಾಖೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಶಿಬಿರ ಏರ್ಪಡಿಸಿ, ರಕ್ತದಾನಕ್ಕೆ ಮುಂದಾಗಿರುವುದು ಯುವಜನತೆಗೆ ಮಾದರಿಯಾಗಿದೆ. ಯುವಜನತೆ ರಕ್ತದಾನದ ಕುರಿತು ಜಾಗೃತಿ ಹೊಂದುವುದು ಅವಶ್ಯವಾಗಿದೆ ಎಂದರು.

    ಎಬಿವಿಪಿ ತಾಲೂಕು ಸಂಚಾಲಕ ಈರಣ್ಣ ಹರದಗಟ್ಟಿ ಮಾತನಾಡಿ, ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ ಎಂದರು.

    ಗ್ರಾಮದ 43 ಯುವಕರು ರಕ್ತದಾನ ಮಾಡಿದರು. ರಕ್ತ ಭಂಡಾರದ ಹಿರಿಯ ಪ್ರಯೋಗಶಾಲಾ ತಜ್ಞ ಬಸವರಾಜ ಕಮತದ, ಕಿರಿಯ ಪ್ರಯೋಗಶಾಲಾ ತಜ್ಞ ಮಾಲತೇಶ ಹೊಳೆಮ್ಮನವರ, ಎಬಿವಿಪಿ ಕಾರ್ಯದರ್ಶಿ ಶಂಭು ಕಲ್ಮಠ, ಪದಾಧಿಕಾರಿಗಳಾದ ದೇವರಾಜ ದೊಡ್ಡಮನಿ, ಬಸವರಾಜ ಮೇಟಿ, ಅಶೋಕ ಧಾರವಾಡ, ಶಾಂತಯ್ಯ ಹಿರೇಮಠ, ಮಂಜುನಾಥ ಧಾರವಾಡ, ಸಿದ್ದು ಪಾಟೀಲ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts