More

    ರಕ್ತದಾನದಿಂದ ಮತ್ತೊಂದು ಜೀವ ಉಳಿಸಬಹುದು-ಎಸ್ಪಿ ಟಿ.ಶ್ರೀಧರ ಅಭಿಮತ

    ವಿಜಯವಾಣಿ ದಶಮಾನೋತ್ಸವ ಅಂಗವಾಗಿ ಶಿಬಿರ ಆಯೋಜನೆ

    ಕೊಪ್ಪಳ: ಬದುಕಿರುವ ಜೀವ ರಕ್ತದಾನದ ಮೂಲಕ ಮತ್ತೊಂದು ಜೀವ ಉಳಿಸುತ್ತದೆ. ಯಾರೋ ರಕ್ತ ಕೊಡುತ್ತಾರೆ, ಇನ್ಯಾರದೋ ಜೀವ ಉಳಿಯುತ್ತದೆ. ಹೀಗಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದು ಎಸ್ಪಿ ಟಿ.ಶ್ರೀಧರ ಹೇಳಿದರು.

    ವಿಜಯವಾಣಿ ದಶಮಾನೋತ್ಸವದ ಪ್ರಯುಕ್ತ ನಗರದ ಪೊಲೀಸ್ ಸಭಾಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ ಶಾಖೆ ಹಾಗೂ ಭಾಗ್ಯನಗರದ ಇನ್ನರ್‌ವ್ಹೀಲ್ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ವಿಜಯವಾಣಿ ವಿಜಯಪಥ ವಿಶೇಷ ಪುರವಣಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಾಮಾಜಿಕ ಜವಾಬ್ದಾರಿ ಎಂಬುದು ಕೇವಲ ಕೆಲವರ ಹೊಣೆಗಾರಿಕೆಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ರಕ್ತದ ಕೊರತೆ ಕಾರಣ ಅನೇಕರು ನಮ್ಮ ಕಣ್ಣ ಮುಂದೆ ಜೀವ ಬಿಡುವುದನ್ನು ಕಾಣುತ್ತೇವೆ. ರಕ್ತ ನೀಡಿದಲ್ಲಿ ಒಂದು ಅಮೂಲ್ಯ ಜೀವ ಉಳಿಸಬಹುದು. ಹೀಗಾಗಿ ಎಲ್ಲರೂ ರಕ್ತದಾನ ಮಾಡಿ. ಈ ನಿಟ್ಟಿನಲ್ಲಿ ವಿಜಯವಾಣಿ ತಂಡ ಕಳೆದ 15 ದಿನದಿಂದ ನಮ್ಮನ್ನು ಸಂಪರ್ಕಿಸಿ ಸಾಮಾಜಿಕ ಕಾರ್ಯಕ್ರಮ ಮಾಡುವ ಬಗ್ಗೆ ತಿಳಿಸಿದಾಗ ಖುಷಿಯಿಂದಲೇ ಒಪ್ಪಿಕೊಂಡೆವು ಎಂದರು.

    ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ಸೋಮರಡ್ಡಿ ಅಳವಂಡಿ ಮಾತನಾಡಿ, ಎಲ್ಲರೂ ಒಗ್ಗೂಡಿದಾಗ ಮಾತ್ರ ಸಾಮಾಜಿಕ ಜವಾಬ್ದಾರಿ ಹೊರಲು ಸಾಧ್ಯ. ಈ ನಿಟ್ಟಿನಲ್ಲಿ ಮಾಧ್ಯಮದ ಪಾತ್ರವೂ ಅಧಿಕವಿದೆ. ವಿಜಯವಾಣಿ ಬಳಗ ಪ್ರತಿ ಹಂತದಲ್ಲೂ ತನ್ನ ಸಾಮಾಜಿಕ ಬದ್ಧತೆ ಪ್ರದರ್ಶಿಸುತ್ತಾ ಬಂದಿದೆ. ಇಂದು ದಶಮಾನೋತ್ಸವದ ಹೊಸ್ತಿಲಿನಲ್ಲೂ ಇಂಥ ಕಾರ್ಯಕ್ರಮದ ಮೂಲಕ ಉತ್ತಮ ಕೆಲಸ ಮಾಡಿದೆ. ರೆಡ್‌ಕ್ರಾಸ್ ಸಂಸ್ಥೆ ಜಿಲ್ಲೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ. ನಮ್ಮ ಜಿಲ್ಲೆ ಅಷ್ಟೇ ಅಲ್ಲದೆ, ಬೇರೆ ಜಿಲ್ಲೆಗೆ ರಕ್ತ ಪೂರೈಸುವ ಮೂಲಕ ಉತ್ತಮವಾಗಿ ಕಾರ್ಯ ಮಾಡುತ್ತಿದೆ ಎಂದರು.

    ವಿಜಯವಾಣಿ ಗಂಗಾವತಿ ವಿಭಾಗದ ಸ್ಥಾನಿಕ ಸಂಪಾದಕ ಚಂದ್ರಶೇಖರ್ ವೈ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ನಂಬರ್ 1 ದಿನಪತ್ರಿಕೆಯಾದ ವಿಜಯವಾಣಿ ಯಶಸ್ವಿಯಾಗಿ 9 ವರ್ಷಗಳನ್ನು ಪೂರೈಸಿ, 10ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಈ ಸುಸಂದರ್ಭದಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಇನ್ನು ಹಲವು ಕಾರ್ಯಕ್ರಮಗಳು ನಮ್ಮ ಬ್ಯೂರೋ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿವೆ ಎಂದರು.

    ವಿಜಯವಾಣಿ ದಶಮಾನೋತ್ಸವ ಅಂಗವಾಗಿ ಹೊರತಂದ ವಿಜಯಪಥ ವಿಶೇಷ ಪುರವಣಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಗಣ್ಯರನ್ನು ವಿಜಯವಾಣಿ ತಂಡದಿಂದ ಸನ್ಮಾನಿಸಲಾಯಿತು. ಪೊಲೀಸ್ ಅಧಿಕಾರಿಗಳು, ವಿಜಯವಾಣಿ ಪ್ರತಿನಿಧಿಗಳು ಸೇರಿ ಅನೇಕರು ರಕ್ತದಾನ ಮಾಡಿದರು. ಹಿರಿಯ ಉಪಸಂಪಾದಕ ರಾಘವೇಂದ್ರ ದಂಡಿನ್ ನಿರೂಪಿಸಿದರು. ಸಿಪಿಐ ವಿಶ್ವನಾಥ ಹಿರೇಗೌಡರ್, ರವಿ ಉಕ್ಕುಂದ, ಮೌನೇಶ್ವರ ಪಾಟೀಲ್, ಶಿವರಾಜ ಇಂಗಳಗಿ, ಭಾರತಿ ಗುಡ್ಲಾನೂರು, ಪದ್ಮಾವತಿ ಸೇರಿ ಇತರರಿದ್ದರು.

    ವಿಜಯವಾಣಿ ದಶಮಾನೋತ್ಸವದ ಸಂದರ್ಭದಲ್ಲಿ ರಕ್ತದಾನದಂತ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ಸಂದರ್ಭದಲ್ಲಿ ನಾವು ಹಲವರಿಂದ ರಕ್ತದಾನ ಮಾಡಿಸುವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ. ಇದಕ್ಕೆ ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದಗಳು.
    | ಶಾರದಾ ಪಾನಘಂಟಿ, ಭಾಗ್ಯನಗರ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ

    ರಕ್ತದಾನದಿಂದ ಮತ್ತೊಂದು ಜೀವ ಉಳಿಸಬಹುದು-ಎಸ್ಪಿ ಟಿ.ಶ್ರೀಧರ ಅಭಿಮತ
    ವಿಜಯವಾಣಿ ದಶಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಪೊಲೀಸ್ ಅಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts