More

    ಬ್ಲ್ಯಾಕ್ ಫಂಗಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ; ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮಾಹಿತಿ

    ರಾಯಚೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ಬ್ಲ್ಯಾಕ್ ಫಂಗಸ್ ಸೋಂಕು 41 ಜನರಲ್ಲಿ ಕಂಡು ಬಂದಿರುವುದರಿಂದ ಕರಿಮಾರಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದರ ಜತೆಗೆ ಸೋಂಕಿತರಿಗೆ ಸ್ಥಳೀಯ ರಿಮ್ಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

    ನಗರದ ಹೊರವಲಯದ ಯರಮರಸ್ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು. ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ 40 ರಿಂದ 45 ದಿನ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ಪ್ರಮಾಣ ಹೆಚ್ಚಾಗಿದ್ದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ ಎಂದರು.

    ಜಿಲ್ಲಾಡಳಿತದ ಕೈಗೊಂಡ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆ ಸರ್ವೇ ನಡೆಸಿ ಸೋಂಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಕೇರ್‌ಗಳಿಗೆ ಕರೆತರಲು ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ರಿಮ್ಸ್ ಮತ್ತು ಒಪೆಕ್ ಆಸ್ಪತ್ರೆಯಲ್ಲಿ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

    ಸಾರಿಗೆ ಇಲಾಖೆಯಿಂದ ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ಸೌಲಭ್ಯವುಳ್ಳ ಬಸ್‌ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಸಂಸದರು, ಶಾಸಕರು ನೀಡಿದ ಅನುದಾನದಲ್ಲಿ ಬಸ್ ಸಿದ್ಧಪಡಿಸಲಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ 20 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಘಟಕವನ್ನು ಉದ್ಘಾಟಿಸಲಾಗಿದ್ದು, ಜಿಲ್ಲೆಗೆ ಸರ್ಕಾರದಿಂದ 30 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಸರಬರಾಜು ಮಾಡಲಾಗಿದೆ. ಆಕ್ಸಿಜನ್ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

    ನಬಾರ್ಡ್ ಯೋಜನೆಯಡಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗಾಗಿ 1,998 ಕೋಟಿ ರೂ.ಗೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಇದರಲ್ಲಿ ರಾಜ್ಯದ ಪಾಲು ಇದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಜೂ.8ರಂದು ಜಿಲ್ಲೆಗೆ ಆಗಮಿಸಿ ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಜಿಲ್ಲೆಯ ಪ್ರತಿ ಗ್ರಾಪಂಗೆ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದಿಂದ ತಲಾ 50 ಸಾವಿರ ರೂ. ಅನುದಾನ ನೀಡಿದ್ದು, ಅನುದಾನವನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ನರೇಗಾ ಯೋಜನೆಯನ್ನು ಪುನಃ ಪ್ರಾರಂಭಿಸಲು ಸಚಿವರು ನೀಡಲಿದ್ದಾರೆ ಎಂದರು.

    ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts