More

    ನಿವೃತ್ತ ಸೈನಿಕ ಈಗ ಜನಸೇವಕ

    ಚಿಕ್ಕಮಗಳೂರು: ಹಲವು ಸ್ವಾರಸ್ಯಕರ ಸಂಗತಿಗಳಿಗೆ ಜಿಲ್ಲೆಯ ಗ್ರಾಪಂ ಅಖಾಡ ಸಾಕ್ಷಿಯಾಯಿತು. ಮಾಜಿ ಉಪಪ್ರಧಾನಿ ಲಾಲ್​ಕೃಷ್ಣ ಅಡ್ವಾಣಿ ಸೇರಿ, ವಿವಿಧ ರಾಜ್ಯದ ಮುಖ್ಯಮಂತ್ರಿಗಳಿಗೆ ಬ್ಲ್ಯಾಕ್​ಕ್ಯಾಟ್ ಕಮಾಂಡರ್ ಆಗಿದ್ದ ನಿವೃತ್ತ ಸೈನಿಕ ಬಿ.ಎಂ.ರಾಘವೇಂದ್ರ ಗ್ರಾಪಂ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸುವ ಮೂಲಕ ಜನಸೇವಕನಾಗಿದ್ದಾರೆ.

    ತಾಲೂಕಿನ ಕೆ.ಆರ್.ಪೇಟೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಘವೇಂದ್ರ 493 ಮತಪಡೆದು ಎದುರಾಳಿ ಸಾಗರ್ ಅವರನ್ನು 154 ಮತಗಳ ಅಂತರದಲ್ಲಿ ಸೋಲಿಸಿದರು.

    ಗೃಹಮಂತ್ರಿ ರಾಜನಾಥ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ, ಮುಲಾಯಂಸಿಂಗ್ ಯಾದವ್, ಮಾಯಾವತಿ, ಪ್ರಫುಲ್​ಕುಮಾರ್ ಮಹಂತ ಸೇರಿ 2002ರಿಂದ 2007ರವರೆಗೆ ಹಲವು ನಾಯಕರಿಗೆ ಬ್ಲ್ಯಾಕ್​ಕ್ಯಾಟ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

    ರಾಜಕಾರಣಕ್ಕೆ ಅಡಿಪಾಯವೇ ಗ್ರಾಪಂ. ಗ್ರಾಮಗಳು ಅಭಿವೃದ್ಧಿಯಾಗಿ ತಳಮಟ್ಟದಲ್ಲಿ ಸುಧಾರಣೆಯಾದರೆ ದೇಶ ಸಹಜವಾಗಿ ಅಭಿವೃದ್ಧಿ ಹೊಂದುತ್ತದೆ. ಮೂರು ವರ್ಷದ ಹಿಂದೆ ನಿವೃತ್ತಿಯಾದಗಲೇ ರಾಜಕೀಯ ಪ್ರವೇಶ ಮಾಡಬೇಕೆಂದು ಚಿಂತಿಸಿದ್ದೆ. ಇದೀಗ ಜನ ಆಶೀರ್ವದಿಸಿದ್ದಾರೆ. ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ ಎಂದು ಬಿ.ಎಂ.ರಾಘವೇಂದ್ರ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದರು.

    ಒಂದು ವೋಟ್ ಅಂತರದ ಗೆಲುವು: ಪಕ್ಷೇತರ ಅಭ್ಯರ್ಥಿ ಕೆ.ಆರ್.ರವಿಕುಮಾರ್ ಒಂದು ಮತದ ಅಂತರದಿಂದ ಪ್ರತಿಸ್ಪರ್ಧಿಯನ್ನು ಪರಾಭವಗೊಳಿಸಿದ್ದಾರೆ. ಕಾಮೇನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರವಿಕುಮಾರ್ 236 ಮತಗಳು ಪಡೆದರೆ ಎದುರಾಳಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಮಶೇಖರ್ 235 ಮತ ಪಡೆದರು. ಪ್ರತಿಸ್ಪರ್ಧಿ ಬೇಡಿಕೆಯಂತೆ ಅಧಿಕಾರಿಗಳು ಮರು ಎಣಿಕೆ ಮಾಡಿದಾಗಲೂ ಫಲಿತಾಂಶ ಬದಲಾಗಲಿಲ್ಲ.

    5ನೇ ಬಾರಿ ವಿಶ್ವಾಸಗೆದ್ದ 74 ವರ್ಷದ ಹಿರಿಯ: ಕರ್ತಿಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ 74 ವರ್ಷದ ವೃದ್ಧ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ಎಂ.ಚಂದ್ರಶೇಖರ್ 736 ಮತ ಪಡೆದು ಪ್ರತಿಸ್ಪರ್ಧಿ ಮಾಜಿ ಗ್ರಾಪಂ ಅಧ್ಯಕ್ಷ ಆನಂದ್ ಅವರನ್ನು 253 ಮತಗಳ ಅಂತರದಿಂದ ಸೋಲುಣಿಸಿದರು. 1987ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಮಂಡಲ ಪಂಚಾಯಿತಿ ಉಪಪ್ರಧಾನರಾಗಿದ್ದ ಚಂದ್ರಶೇಖರ್ ನಂತರ 3 ಬಾರಿ ಗೆದ್ದು, ಈಗ 5ನೇ ಬಾರಿ ಪುನಃ ಆಯ್ಕೆಯಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದಾಗ ಗೆಲುವಿನ ಬಗ್ಗೆ ಅಳುಕಿತ್ತು. ಪಕ್ಷದ ಮುಖಂಡರ ಶ್ರಮದಿಂದ ಜನ ಬೆಂಬಲಿಸಿದ್ದಾರೆ. ಇದು ನನ್ನ ಕೊನೆಯ ಸ್ಪರ್ಧೆ. ಜನರ ನಿರೀಕ್ಷೆ ಹುಸಿಯಾಗದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಚಂದ್ರಶೇಖರ್ ‘ವಿಜಯವಾಣಿ’ ಜತೆ ಅನಿಸಿಕೆ ಹಂಚಿಕೊಂಡರು.

    ಸ್ನೇಹಿತರ ಸವಾಲ್: ಗೆಳೆಯರಾಗಿರುವ ಅಭಿಜಿತ್ ಮತ್ತು ದರ್ಶನ್ ಮಳಲೂರು ಕ್ಷೇತ್ರದಲ್ಲಿ ಪರಸ್ಪರ ಸ್ಪರ್ಧಿಸಿದ್ದರು. ಕೆ.ಆರ್.ದರ್ಶನ್ 451 ಮತಗಳಿಸಿ ಸ್ನೇಹಿತ ಅಭಿಜಿತ್ ಅವರನ್ನು 150 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ. ಮತಎಣಿಕೆ ಕೊಠಡಿಯಿಂದ ಹೊರ ಬಂದನಂತರ ಪರಸ್ಪರ ಕೈಕುಲುಕಿ ಶುಭಾಯ ಕೋರಿ ಜತೆಯಲ್ಲೇ ಸಾಗಿದರು. ಇಬ್ಬರೂ ಬಿಜೆಪಿ ಬೆಂಬಲಿತರೇ ಆಗಿದ್ದು, ಚುನಾವಣೆಯನ್ನು ಸ್ಪರ್ಧಾ ಭಾವದಿಂದ ಸ್ವೀಕರಿಸಿದ್ದು, ಗ್ರಾಮದ ಅಭಿವೃದ್ಧಿಗೆ ಒಗ್ಗೂಡಿ ಸ್ಪಂದಿಸುವುದಾಗಿ ಹೇಳಿದರು.

    ಬಿಜೆಪಿ ಬೆಂಬಲಿತ ಸದಸ್ಯ ಇತಿಹಾಸ ಸೃಷ್ಟಿ: ಮರ್ಲೆ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ದಶಕಗಳಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಆಯ್ಕೆಯಾಗುತ್ತಿದ್ದ ನಾಗರಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಟಿ.ಎಸ್.ಜಗದೀಶ್ 501 ಮತ, ಸುಧಾ ಮಂಜುನಾಥ್ 526 ಮತಗಳಿಸುವ ಮೂಲಕ ಪ್ರತಿಸ್ಪರ್ಧಿಗಳಾದ ಪ್ರಕಾಶ್ (177), ರೇಖಾ ಯಶೋಧರ (144) ಇವರನ್ನು ಪರಾಭವಗೊಳಿಸಿ ಇತಿಹಾಸ ಬರೆದಿದ್ದಾರೆ.

    ಮತಪೆಟ್ಟಿಗೆಗೆ ಸುತ್ತಿಗೆ ಏಟು !: ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿಗಳುಮರ್ಲೆ ಕ್ಷೇತ್ರದ ಮತ ಪೆಟ್ಟಿಗೆಯನ್ನು ಸೀಲ್ ಮಾಡಿದ್ದ ಬಟ್ಟೆ ತೆಗೆದರು. ಆದರೆ ಲಾಕ್ ತೆರೆಯಲು ಕೆಲ ಕಾಲ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ತಹಸೀಲ್ದಾರ್ ಡಾ. ಕಾಂತರಾಜ್ ಸೂಚನೆ ಮೇರೆಗೆ ಸುತ್ತಿಗೆ ಹಾಗೂ ಸ್ಕ್ರೂ ಡ್ರೖೆವರ್ ಉಪಯೋಗಿಸಿ ಬೀಗ ತೆರೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts