More

    ಬಿ.ಕೆ.ಸುಂದರೇಶ್ ಶೋಷಿತರ ಧ್ವನಿ

    ಚಿಕ್ಕಮಗಳೂರು: ಬಡವರು, ಶೋಷಿತರು ಹಾಗೂ ಕಾರ್ಮಿಕರಿಗಾಗಿ ಜೀವನವನ್ನೇ ಮುಡಿಪಿಟ್ಟು ಹೋರಾಟ ನಡೆಸಿದವರು ಬಿ.ಕೆ.ಸುಂದರೇಶ್ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ತಿಳಿಸಿದರು.

    ಸಿಪಿಐ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಬಿ.ಕೆ.ಸುಂದರೇಶ್ 29ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸುಂದರೇಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸುಂದರೇಶ್ ಕೇವಲ ವ್ಯಕ್ತಿಯಾಗಿರದೆ ಶೋಷಿತರ ಧ್ವನಿ ಮತ್ತು ಶಕ್ತಿಯಾಗಿದ್ದರು ಎಂದು ಸ್ಮರಿಸಿದರು.
    ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ಮುಖಂಡರಿಗೆ ಸುಂದರೇಶ್ ಪ್ರೇರಣೆ. ಇಂಥ ವ್ಯಕ್ತಿಯ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದುವರಿದರೆ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.
    ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿ, ಇಂದಿನ ರಾಜಕಾರಣದಲ್ಲಿ ತಾಳಕ್ಕೆ ತಕ್ಕಂತೆ ಬದಲಾಗುವ ಸನ್ನಿವೇಶವಿದೆ. ಸುಂದರೇಶ್ ರಾಜಕೀಯ ಎನ್ನುವುದು ಜನರ ಸೇವೆಯೇ ಹೊರತು ವೈಯಕ್ತಿಕ ಆದಾಯ ಮಾಡುವುದಾಗಿರಲಿಲ್ಲ ಎಂದು ತಿಳಿಸಿದರು.
    ಸಿಪಿಐ ಜಿಲ್ಲಾ ಸದಸ್ಯ ಸಿ.ವಸಂತ್‌ಕುಮಾರ್ ಮಾತನಾಡಿ, ಕಾರ್ಮಿಕರು ಹಾಗೂ ಶೋಷಿತರ ಬಗ್ಗೆ ಕಾಳಜಿ ಹೊಂದಿದ್ದ ಸುಂದರೇಶ್ ಸ್ಮರಣಾರ್ಥ ತಮಿಳು ಕಾಲನಿ ಸಮೀಪದ ಬಿ.ಕೆ.ಸುಂದರೇಶ್ ಉದ್ಯಾನದಲ್ಲಿ ಕಂಚಿನ ಪುತ್ಥಳಿ ನಿರ್ಮಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
    ಸುಂದರೇಶ್ ಸಹೋದರ ಬಿ.ಕೆ.ಲಕ್ಷ್ಮಣ ಗೌಡ, ಸಿಪಿಐ ರಾಜ್ಯ ಸಮಿತಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ, ಜಿಲ್ಲಾ ಸಮಿತಿ ಸದಸ್ಯರಾದ ಗುಣಶೇಖರ್, ಜಯಕುಮಾರ್, ವಿಜಯ್‌ಕುಮಾರ್, ಜಾನಕಿ, ಮಂಜೇಗೌಡ, ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts