More

    ಕೃಷ್ಣಾಕೊಳ್ಳದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ!

    ತುಮಕೂರು: ಶಿರಾ ಉಪಸಮರದಲ್ಲಿ ಬಿಜೆಪಿ ಖಾತೆ ತೆರೆಯುವ ಮೂಲಕ ಕೃಷ್ಣಾ ಕೊಳ್ಳದಲ್ಲಿ ಕಮಲ ಅರಳಿಸಲು ಭರ್ಜರಿ ರಾಜಕೀಯ ತಂತ್ರ ರೂಪಿಸಿದೆ. ಕಾವೇರಿಕೊಳ್ಳ ಭಾಗದಲ್ಲಿ ನೆಲೆಕಂಡುಕೊಂಡಿರುವ ಬಿಜೆಪಿಗೆ ಈವರೆಗೆ ಕೃಷ್ಣಾಕೊಳ್ಳದಲ್ಲಿ ಕೇಸರಿ ಬಾವುಟ ಹಾರಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಬೈಎಲೆಕ್ಷನ್ ಮೂಲಕ ಕೃಷ್ಣಾಕೊಳ್ಳ ಪ್ರವೇಶಿಸಲು ಬಿಜೆಪಿ ಸರ್ಕಾರವೂ ತನ್ನೆಲ್ಲಾ ಶಕ್ತಿ ವ್ಯಯಿಸಲು ಸಿದ್ಧತೆ ಮಾಡಿಕೊಂಡಿದೆ.

    ಕೃಷ್ಣಾಕೊಳ್ಳ ಭಾಗದ ಶಿರಾ, ಮಧುಗಿರಿ, ಕೊರಟಗೆರೆ ಹಾಗೂ ಪಾವಗಡ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಈವರೆಗಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ‘ಶಕ್ತಿ’ ಸಾಬೀತಾಗಿದ್ದು, ಒಮ್ಮೆ ಕೇಸರಿ ಬಾವುಟ ಹಾರಿಸಿದ್ದೇ ಆದಲ್ಲಿ ಈ ಕ್ಷೇತ್ರಗಳಲ್ಲಿ ನೆಲೆಕಂಡುಕೊಳ್ಳಬಹುದೆಂಬುದನ್ನು ಅರಿತಿರುವ ಬಿಜೆಪಿ ಮುಖಂಡರು ಕುಂಚಿಟಿಗ ಸಮುದಾಯದೊಂದಿಗೆ ಒಬಿಸಿ ಮತಕ್ರೋಡೀಕರಣ ಮಾಡುವ ಮೂಲಕ ‘ಜಾತಿ’ ಸಮೀಕರಣ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

    ರಾಜೇಶ್‌ಗೌಡಗೆ ಗಾಳ: ಕೃಷ್ಣ್ಣಾಕೊಳ್ಳ ದಾಟಲು ಸಮರ್ಥ ಅಂಬಿಗನಿಗೆ ಹುಡುಕಾಟ ನಡೆಸಿರುವ ಬಿಜೆಪಿ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ಡಾ.ಸಿ.ಎಂ.ರಾಜೇಶ್‌ಗೌಡಗೆ ಗಾಳ ಹಾಕಿದೆ. ಈ ಹಿಂದೆ ಚುನಾವಣೆಗಳಲ್ಲಿ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ ಟಿಕೆಟ್ ಆಕಾಂಕ್ಷಿಗಳಲ್ಲಿ ಮಂಚೂಣಿಯಲ್ಲಿದ್ದು, ಇಬ್ಬರ ಮನವೊಲಿಸಿ ಗೆಲ್ಲುವ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಖುದ್ದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಖಾಡಕ್ಕಿಳಿದಿದ್ದಾರೆ.

    ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ 2018ರಲ್ಲಿ ಕ್ಷೇತ್ರಕ್ಕೆ ಕಾಲಿಟ್ಟ ವೈದ್ಯ ಡಾ.ರಾಜೇಶಗೌಡ 3 ವರ್ಷಗಳಲ್ಲಿ ತಾಲೂಕಿನಾದ್ಯಂತ ಸದ್ದಿಲ್ಲದೆ ಬೇರುಗಳನ್ನು ಗಟ್ಟಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ ಪಕ್ಷಗಳ ಅಂತರ ಕಾಯ್ದುಕೊಂಡ ರಾಜೇಶ್‌ಗೌಡ ಆ ಮೂಲಕ ಜನರ ಪ್ರೀತಿ ಗೆಲ್ಲುವಲ್ಲಿ ಯಶಸ್ವಿಯಾದರು.

    ಕಾಡುಗೊಲ್ಲ ಅಭಿವೃದ್ಧಿ ನಿಗಮದ ಜತೆಗೆ ಮದಲೂರು ಕೆರೆಗೆ ಹೇಮೆ ಹರಿಸುವ ಭರವಸೆಯೊಂದಿಗೆ ಬಿಜೆಪಿ ಈಗ ರಾಜೇಶ್‌ಗೌಡ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಂಡು ಕೃಷ್ಣಾಕೊಳ್ಳದಲ್ಲಿ ‘ಖಾತೆ’ ತೆರೆಯಲು ರಾಜಕೀಯ ತಂತ್ರ ರೂಪಿಸಿದೆ. ಈ ತಂತ್ರ ಎಷ್ಟರ ಮಟ್ಟಿಗೆ ಕೈಹಿಡಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts