More

    ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

    ವಿರಾಜಪೇಟೆ: ಹಿಂದು ಸಂಘಟನೆಗಳ ಪ್ರಮುಖರನ್ನು ಗುರಿಯಾಗಿಸಿಕೊಂಡು ಧಮನ ಮಾಡುವ ಹುನ್ನಾರದಿಂದ ರಾಜ್ಯ ಸರ್ಕಾರ ಎಸ್‌ಸಿ-ಎಸ್‌ಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಇಲ್ಲಿನ ಉಪ ಅಧೀಕ್ಷರರ ಕಚೇರಿ ಮುಂಭಾಗ ಸೋಮವಾರ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟಕರಿಂದ ಬೃಹತ್ ಪ್ರತಿಭಟನೆ ನಡೆಯಿತು.

    ಪಕ್ಷದ ಎಸ್‌ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮಾನಂದ ಮಾತನಾಡಿ, ಶೋಷಿತ ಸಮುದಾಯದ ಮೇಲಿನ ದೌರ್ಜನ್ಯ ತಡೆಗಟ್ಟಲು ಜಾರಿಗೆ ತರಲಾಗಿರುವ ಕಾನೂನನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಂಘಟನೆಯ ಪ್ರಮುಖರೊಬ್ಬರ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ದೂರು ದಾಖಲಿಸಲಾಗಿದೆ ಎಂದು ಕಿಡಿಕಾರಿದರು.

    ಕೊಡಗಿನ ವಿವಿಧ ಸ್ಥಳಗಳಲ್ಲಿನ ಅಮಾಯಕರನ್ನು ಗುರಿಯಾಗಿಸಿಕೊಂಡು ಸುಮಾರು 16 ಅಟ್ರಾಸಿಟಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ಕ್ಷುಲ್ಲಕ ಕಾರಣ ಹಿಂದು ಸಂಘಟನೆ ಪ್ರಮುಖರಾದ ಹೇಮಂತ್ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಶಾಸಕರಾದ ಪೊನ್ನಣ್ಣ ಅವರು ಪರೋಕ್ಷವಾಗಿ ಕುಮ್ಮಕ್ಕು ನೀಡುತಿದ್ದಾರೆ ಎಂದು ಆರೋಪಿಸಿದರು.

    ಪೊಲೀಸ್ ಇಲಾಖೆ ಒಂದು ಪಕ್ಷದ ಪರವಾಗಿ ಕರ್ತವ್ಯ ನಿರ್ವಹಿಸದೆ ನ್ಯಾಯ ಸಮ್ಮತವಾಗಿ ತನಿಖೆ ಮಾಡಬೇಕು. ಅಲ್ಲದೆ ಹೇಮಂತ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸುಖಾಂತ್ಯ ಹಾಡಬೇಕು ಎಂದು ಆಗ್ರಹಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಈ ಹಿಂದೆ ಸಾಮರಸ್ಯದಿಂದ ಇದ್ದ ಜಿಲ್ಲೆಗೆ ಕಳಂಕ ಬರುವ ರೀತಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು. ಧರ್ಮಗಳ ಮಧ್ಯೆ ಕಂದಕ ನಿರ್ಮಾಣ ಮಾಡಿದ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಮ್ಮೆ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದೆ ಎಂದು ಕಿಡಿಕಾರಿದರು.

    ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಅಭಿಜಿತ್ ಮಾತನಾಡಿ, ಹಿಂದು ಧರ್ಮದ ಉಳಿವಿಗಾಗಿ ಹೋರಾಟ ಮಾಡುವ ವ್ಯಕ್ತಿಗಳಿಗೆ ಕಾಂಗ್ರೆಸ್ ತೊಂದರೆ ನೀಡುತ್ತಿದೆ. ಶೋಷಿತರ ಅನುಕೂಲಕ್ಕಾಗಿ ತಂದ ಕಾನೂನನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೇಮಂತ್ ಅವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮೋಹನ್‌ಕುಮಾರ್, ಕಾನೂನು ಬದ್ಧವಾಗಿ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದರಲ್ಲದೆ, ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು.

    ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಸುವೀನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ತಾಲೂಕು ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು, ಪ್ರಮುಖರಾದ ರೀನಾ ಪ್ರಕಾಶ್, ಯಮುನಾ ಚೆಂಗಪ್ಪ, ವಿಶ್ವ ಹಿಂದು ಪರಿಷತ್‌ನ ತಾಲೂಕು ಅಧ್ಯಕ್ಷ ಬಿ.ಎಂ ಕುಮಾರ್, ನಗರಾಧ್ಯಕ್ಷ ಟಿ.ಪಿ ಕೃಷ್ಣ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts