More

    ಸೇವೆ ಮೂಲಕ ಮಾನವೀಯತೆ ಮೆರೆದ ಕಾರ್ಯಕರ್ತರು ; ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ. ಕೆ.ಸಿ. ಸಂದೀಪ್‌ಕುಮಾರ್ ಮೆಚ್ಚುಗೆ

    ತುಮಕೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೇವಲ ಸಂಘಟನೆ ಹಾಗೂ ಹೋರಾಟಕ್ಕೆ ಸೀಮಿತವಾಗದೆ ಕರೊನಾ ಸಂಕಷ್ಟದಲ್ಲಿ ಅನ್ನದಾನದಿಂದ ಅಂತ್ಯಕ್ರಿಯೆವರೆಗೂ ಸೇವೆ ಸಲ್ಲಿಸಿ ಸೇವಾ ಹೀ ಸಂಘಟನೆಗೆ ನಿಜಾರ್ಥ ತಂದುಕೊಟ್ಟಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ. ಕೆ.ಸಿ. ಸಂದೀಪ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

    ನಗರದ ಖಾಸಗಿ ರೆಸಾರ್ಟ್‌ನಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್ ನೇತೃತ್ವದಲ್ಲಿ ಆಯೋಜಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದರು. ದೇಶಾದ್ಯಂತ ಜನರು ಕರೊನಾ ಪಿಡುಗಿನಿಂದ ತಲ್ಲಣಗೊಂಡಿದ್ದರು. ರಾಜ್ಯದಲ್ಲೂ ಕರೊನಾದಿಂದ ಸಾಕಷ್ಟು ಸಾವುನೋವು ಸಂಭವಿಸಿದೆ. ಇಂಥ ಕಷ್ಟಕಾಲದಲ್ಲಿ ಅತ್ಯಂತ ಜವಾಬ್ದಾರಿ, ಮಾನವೀಯತೆ ಹಾಗೂ ಸಂವೇದನಾಶೀಲತೆಯಿಂದ ಜನರ ನೋವಿಗೆ ಸ್ಪಂದಿಸಿದ ಏಕೈಕ ಪಕ್ಷ ಬಿಜೆಪಿ. ಇದರ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲಬೇಕು ಎಂದರು.

    ಯುವ ಮೋರ್ಚಾ ಕಾರ್ಯಕರ್ತರು 3 ತಿಂಗಳ ಹಿನ್ನೋಟ ಮತ್ತು 3 ತಿಂಗಳ ಮುನ್ನೋಟ, ಪಕ್ಷ ಕೊಟ್ಟ ಜವಾಬ್ದಾರಿಯ ನಿರ್ವಹಣೆ, ಜವಾಬ್ದಾರಿಯನ್ನು ಪರಿಪೂರ್ಣಗೊಳಿಸಿದ್ದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಕಾರ್ಯಕಾರಿಣಿ ಸಭೆ ವೇದಿಕೆಯಾಗಿದೆ ಎಂದು ಹೇಳಿದರು.
    ಬಿಜೆಪಿ ತತ್ವ, ವಿಚಾರಗಳ ತಳಹದಿ ಮೇಲೆ ಕಟ್ಟಿರುವ ಪಕ್ಷ. ಭವಿಷ್ಯದ ಭಾರತಕ್ಕೆ ಯುವ ಮೋರ್ಚಾ ಕಾರ್ಯಕರ್ತರು ಕೆಲಸ ನಿರ್ವಹಿಸಬೇಕು. ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಪ್ರಚಾರಪಡಿಸಬೇಕು. ಪಕ್ಷವು ಕಾರ್ಯಕರ್ತರಿಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್ ತಿಳಿಸಿದರು.

    ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಕುಮಾರ್ ಬಿದರೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದು, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಕಳೆದ 7 ವರ್ಷಗಳಲ್ಲಿ ರಾಷ್ಟ್ರ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಕಂಡಿದೆ ಎಂದರು.

    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿಶಂಕರ್ ಹೆಬ್ಬಾಕ, ಸಂಪಿಗೆ ಶ್ರೀಧರ್, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳೆಕಾಯಿ, ಕಾರ್ಯದರ್ಶಿ ಅರವಿಂದ್, ಪ್ರಶಾಂತ್, ರುದ್ರೇಶ್, ದಾವಣಗೆರೆ ವಿಭಾಗದ ಸಹ ಪ್ರಭಾರಿ ಲಕ್ಷ್ಮೀಶ, ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಯಶಸ್, ಶಿವಕುಮಾರ ಸ್ವಾಮಿ, ಟಿ.ಡಿ. ವಿನಯ್, ರಕ್ಷಿತ್, ಗುರು, ಶ್ರೀಧರ್, ನವಚೇತನ, ನವೀನ್ ಮತ್ತಿತರರು ಇದ್ದರು.

    ಯುವಕರಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿಯನ್ನು ಬಿಜೆಪಿ ಯುವ ಮೋರ್ಚಾ ಬೆಳೆಸುತ್ತದೆ. ಜತೆಗೆ ಅವರಲ್ಲಿ ಕ್ರೀಯಾಶಿಲತೆ ಹಾಗೂ ಐಕ್ಯತೆಯನ್ನು ಮೂಡಿಸುತ್ತದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಹೆಚ್ಚಿನ ಅವಕಾಶ ಕಲ್ಪಿಸಬೇಕು.
    ಅರಕೆರೆ ರವೀಶ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

    ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಯುವ ಘಟಕದ ಅಧ್ಯಕ್ಷರು ರಾಜಕೀಯ ಹಿನ್ನಲೆಯುಳ್ಳ ಕುಂಟುಂಬದವರೇ ಇದ್ದಾರೆ. ಆದರೆ, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆ ಸಿಗುತ್ತದೆ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಸಿಗಲಿದ್ದು ಎಲ್ಲರೂ ಗೆದ್ದುಬರಬೇಕು.
    ಡಾ.ಕೆ.ಸಿ.ಸಂದೀಪ್‌ಕುಮಾರ್ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts