More

    ವಿಳಾಸ ಮರೆತು ಬಂದ ಬಿಜೆಪಿ ಕಾರ್ಯಕರ್ತರು

    ಚಿಕ್ಕಮಗಳೂರು: ಸಂಸದರ ಕಚೇರಿಗೆ ಹೋಗಬೇಕಾದ ಬಿಜೆಪಿಯವರು ವಿಳಾಸ ತಪ್ಪಿ ಶಾಸಕರ ಕಚೇರಿಗೆ ಬಂದು ಹೋಗಿದ್ದಾರೆ ಎಂದು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಬಿಜೆಪಿ ಕಾರ್ಯಕರ್ತರನ್ನು ಲೇವಡಿ ಮಾಡಿದರು.
    ನಗರದ ಪ್ರೆಸ್‌ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 8 ತಿಂಗಳಲ್ಲಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಎಷ್ಟು ಹಣ ತರಲಾಗಿದೆ ಎಂದು ಶಾಸಕರನ್ನು ಪ್ರಶ್ನೆ ಮಾಡಿರುವ ಬಿಜೆಪಿ ಮುಖಂಡರು ನಿಮ್ಮ ಸಂಸದರು ಕಳೆದ ಐದು ವರ್ಷದಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂದು ತಿಳಿಸಲಿ ಎಂದರು.
    ಬಿಜೆಪಿ ಕಾರ್ಯಕರ್ತರು ಶಾಸಕರನ್ನು ಪ್ರಶ್ನಿಸಿರುವ ಹಾಗೆ ಸಂಸದರನ್ನು ಪ್ರಶ್ನಿಸಿದ್ದರೆ ಅವರ ಹೋರಾಟಕ್ಕೆ ಅರ್ಥ ಬರುತ್ತಿತ್ತು. ಇದು ಬಿಜೆಪಿ ನಾಯಕರ ಮನದೊಳಗಿನ ರಾಜಕೀಯ ಅಸಹನೆ ತೋರಿಸುತ್ತದೆ. ಶಾಸಕ ಎಚ್.ಡಿ. ತಮ್ಮಯ್ಯ ಅವರು, ಜಾತಿ, ಮತ, ಧರ್ಮ ಹಾಗೂ ಪಕ್ಷ ಮೀರಿ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದಾರೆ. ಕಚೇರಿಗೆ ಯಾರೇ ಬಂದರೂ ಪ್ರೀತಿಯಿಂದ ಮಾತನಾಡಿಸಿ, ಕೆಲಸ ಮಾಡುತ್ತಿದ್ದಾರೆ. ಶಾಸಕರು ಕಚೇರಿಯಲ್ಲಿ ಇದ್ದ ದಿನ ಬಿಜೆಪಿ ಮುಖಂಡರು ಬಂದಿದ್ದರೆ ಅವರಿಗೆ ಔತಣದ ವ್ಯವಸ್ಥೆ ಮಾಡಿ ಕಳುಹಿಸುತ್ತಿದ್ದೆವು ಎಂದು ಹೇಳಿದರು.
    19 ವರ್ಷ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದರು. ಇದೀಗ ಪ್ರಶ್ನೆ ಮಾಡುವ ಮನೋಭಾವ ಮರಳಿ ಅವರಿಗೆ ಬಂದಿರುವುದು ಮೆಚ್ಚುಗೆಯ ವಿಷಯ ಎಂದು ವ್ಯಂಗ್ಯವಾಡಿದರು.
    ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನಪ್ರತಿನಿಧಿಗಳೇ ಗುತ್ತಿಗೆದಾರರಾಗಿದ್ದರು. ಆಗ ಕಾಂಗ್ರೆಸ್‌ನವರು ದ್ವೇಷದ ರಾಜಕಾರಣ ಮಾಡಲಿಲ್ಲ, ಅವರ ಮನಸ್ಥಿತಿಯ ರಾಜಕಾರಣ ಕಾಂಗ್ರೆಸ್ ಮಾಡಿದ್ದರೆ ಅವರು ಮಾಡಿರುವ ಕೆಲಸಗಳ ಎಲ್ಲ ಬಿಲ್‌ಗಳನ್ನು ತಡೆ ಹಿಡಿಯಬಹುದಾಗಿತ್ತು ಎಂದರು.
    ಕಾಮಗಾರಿ ನಡೆಯುವ ಸ್ಥಳದಲ್ಲಿ ಗುತ್ತಿಗೆದಾರರ ವಿಳಾಸ ಹಾಗೂ ಪೂರ್ಣ ಮಾಹಿತಿಯ ಬೋರ್ಡ ಅಳವಡಿಸಲಾಗುತ್ತಿದೆ. ಹಿಂದೆ ಈ ರೀತಿಯ ಪಾರದರ್ಶಕವಾದ ಪದ್ಧತಿ ಇರಲಿಲ್ಲ . ಕಳೆದ 8 ತಿಂಗಳಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸಗಳಿಗಾಗಿ 150 ಕೋಟಿ ರೂ. ಬಿಡುಗಡೆಯಾಗಿದೆ. ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ 60 ಕೋಟಿ, ಅರಣ್ಯಭವನ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿದೆ. ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ 455 ಕೋಟಿ ರೂ. ಮಂಜೂರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
    ಕಾಂಗ್ರೆಸ್ ಮುಖಂಡರಾದ ನಾಗೇಶ್, ಪ್ರಕಾಶ್, ರಾಘವೇಂದ್ರ, ಸುರೇಶ್ ಹಾಗೂ ನಗರಸಭೆ ಸದಸ್ಯ ಜಾವೀದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts