More

    ದಳ್ಳುರಿ ಕಾಲಕ್ಕೆ ಶ್ರೀನಿವಾಸ ಮೂರ್ತಿ ಜತೆಗೆ ಅಖಂಡವಾಗಿ ನಿಂತ ಬಿಜೆಪಿ; ಮಾಜಿ ಸಿಎಂ ಯಡಿಯೂರಪ್ಪ

    ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಕೋಮು ದಳ್ಳುರಿ ಕಾಲಕ್ಕೆ ಶಾಸಕರಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಮನೆ ಸುಟ್ಟಿದ್ದರು. ಇಂತಹ ಸಂದರ್ಭದಲ್ಲಿ ಅಖಂಡ ಶ್ರೀನುವಾಸ ಮೂರ್ತಿ ಜತೆಗೆ ಬಿಜೆಪಿ ನಿಂತಿತ್ತು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಬೆಂಬಲಿಗರನ್ನು ಬುಧವಾರ ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಅವರು, ಜನರ ಜತೆಗೆ ಉತ್ತಮ ಬಾಂಧವ್ಯ, ನಿಕಟ ಸಂಪರ್ಕ ಇರಿಸಿಕೊಂಡಿರುವ ಅಖಂಡ ಸೇರ್ಪಡೆಯಿಂದ ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.

    ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿತ್ತು. ಅಖಂಡ ಶ್ರೀನಿವಾಸ ಮೂರ್ತಿ ಬಂದಿರುವುದರಿಂದ ಗೆಲುವಿನ ಅಂತರ 2-3 ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಹೆಚ್ಚಿಸಿದೆ ಎಂದು ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದರು.

    ಕಷ್ಟ-ನಷ್ಟದ ಮಧ್ಯೆ ಕೆಚ್ಚು

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ ಪಕ್ಷದ ಸಂಘಟನೆ ಅಷ್ಟೇನು ಗಟ್ಟಿಯಾಗಿಲ್ಲದ ಪುಲಕೇಶಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾರ್ಯಕರ್ತರು ಕಷ್ಟ, ನಷ್ಟ ಅನುಭವಿಸಿ ಪಕ್ಷ ಕಟ್ಟಲು ದುಡಿಯುತ್ತಿದ್ದಾರೆ. ಕೋಮು ಗಲಭೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಅಖಂಡ ಅವರ ಮನೆ ಸುಟ್ಟು ಹೋಗಿತ್ತು. ಈ ವೇಳೆ ಅವರೊಂದಿಗೆ ಕಾಂಗ್ರೆಸ್ ಪಕ್ಷ ನಿಲ್ಲಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

    ಅಖಂಡ ಶ್ರೀನಿವಾಸ ಮೂರ್ತಿ ಮಾತನಾಡಿ  ಈ ದಿನ ನಮಗೆಲ್ಲ ಸಂತೋಷದ ದಿನ. ರಾಮನವಮಿ ಶುಭಾಶಯ. ರಾಮನ ಆಶೀರ್ವಾದದಿಂದ ಬಿಜೆಪಿ ಸೇರಿದ್ದೇನೆ. ಮೋದಿ ಅವರ ಆಶೀರ್ವಾದವಿದೆ. ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. 2018 ರಲ್ಲಿ ಅತಿ ಹೆಚ್ಚು ಮತ ಪಡೆದವನು ನಾನು. ನನ್ನನ್ನೇ ಕಾಂಗ್ರೆಸಿಗರು ಕಡಗಣಿಸಿದರು.

    ಕ್ಷೇತ್ರದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಒಂದಾಗಿದ್ದೇವೆ. ನಾನು ದೂರು ಕೊಟ್ಟಿದ್ದು ನಾಲ್ಕು ಜನರ ಮೇಲಷ್ಟೆ. ಸುಮ್ಮನೆ ನನ್ನನ್ನು ಮುಸ್ಲಿಂ ವಿರೋಧಿ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಗಲಭೆ ನಡೆಸಿದವರು ಹೊರಗೆ ತಿರುಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ನನ್ನನ್ನು ಗುರಿ ಮಾಡಿ, ಟಿಕೆಟ್ ತಪ್ಪಿಸಿದರು. ಒಳ್ಳೆಯದೇ ಆಯಿತು, ಬಿಜೆಪಿ ಸೇರಿರುವೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಶೋಭಾ ಕರಂದ್ಲಾಜೆ ಗೆಲ್ಲಬೇಕು. ಅದಕ್ಕಾಗಿ ದುಡಿಯೋಣವೆಂದು ಬೆಂಬಲಿಗರಿಗೆ ಅಖಂಡ ಕೋರಿದರು.

    ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಮಹಿಳಾ ಮೋರ್ಚಾ ಅಧ್ತಕ್ಷೆ ಮಂಜುಳಾ, ಪಕ್ಷದ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts