More

    ಜನರ ಬಳಿಗೆ ಕಮಲಪಡೆ ನಾಯಕರು ದೌಡು

    ಬೆಂಗಳೂರು: ರಾಜ್ಯ ಸರ್ಕಾರ, ವಿಧಾನಸಭೆ ಸ್ಪೀಕರ್ ನಡೆ ವಿರುದ್ಧ ರೊಚ್ಚಿಗೆದ್ದಿರುವ ಪ್ರತಿಪಕ್ಷ ಬಿಜೆಪಿ, ವಿಧಾನಸೌಧ, ರಾಜಭವನದ ಬಳಿಕ ಜನರ ಬಳಿಗೆ ದೌಡಾಯಿಸಲು ಕಮಲಪಡೆ ನಾಯಕರು ಸಜ್ಜಾಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವೈಲ್ಯ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಜನಸಾಮಾನ್ಯರ ಗಮನಸೆಳೆಯಲು ನಿರ್ಧರಿಸಿದೆ.

    ವಿಧಾನಸಭೆ ಅಧಿವೇಶನದಿಂದಲೇ ಹೊರ ಹಾಕಿಸಿ ಪ್ರತಿಪಕ್ಷಗಳ ಬಾಯ್ಮುಚ್ಚಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಿದ್ದು, ಸ್ಪೀಕರ್ ಅವರನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದೆ. ವಿಧಾನಸಭೆಯಿಂದ 10 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ನಡೆ ಖಂಡನೀಯವಾಗಿದೆ ಎಂದು ವಿಧಾನ ಮಂಡಲದ ಉಭಯ ಸದನಗಳ ಕೊನೆಯ ದಿನದ ಕಲಾಪವನ್ನೂ ಸಹ ಬಿಜೆಪಿ ಬಹಿಷ್ಕರಿಸಿದರೆ, ಜೆಡಿಎಸ್ ಕೂಡ ಸಾಥ್ ನೀಡಿದೆ.

    ಮತ್ತೆ ಧರಣಿ

    ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಶುಕ್ರವಾರವೂ ಬಿಜೆಪಿ ನಾಯಕರು ಧರಣಿ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಜನರ ಬದುಕು ದುರ್ಬರವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ವಿ.ಸುನಿಲ್‌ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ, ಅನೇಕ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.

    ಪ್ರತಿಭಟನೆ ನಾಳೆ

    ಮಳೆ ಕೊರತೆಯಿಂದಾಗಿ ತಲೆದೋರಿದ ಸಂಕಷ್ಟಕ್ಕೆ ಸ್ಪಂದನೆಯಲ್ಲಿ ನಿರ್ಲಕ್ಷ್ಯ, ಕಾನೂನು ಮತ್ತು ಸುವ್ಯವಸ್ಥೆ ಕುಸಿತ, ರಾಜ್ಯದ ಸಮಗ್ರ ಅಭಿವೃದ್ಧಿ ವಿರೋಧಿ ಬಜೆಟ್, ಹಿಂದುಗಳ ವಿರೋಧಿ, ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ತೆಗಳಿಸುವುದಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.
    ಸರ್ಕಾರದ ತಾತ್ಸಾರ ಮನೋಭಾವವನ್ನು ಖಂಡಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಜನಪರವಾಗಿ ಪಕ್ಷ ಧ್ವನಿ ಎತ್ತಲಿದೆ. ಅಲ್ಲದೆ, ವಿಧಾನಸಭೆಯಿಂದ ಪಕ್ಷದ 10 ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದ್ದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts