More

    ಬಿಜೆಪಿ ಸೇರುವ ಸುಳಿವು ಕೊಟ್ಟ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ

    ಮಾಗಡಿ: ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಕಾಲವೇ ನಿರ್ಣಯ ಮಾಡಲಿದೆ, ಈಗಾಗಲೇ ಮುಖ್ಯಮಂತ್ರಿಗಳು ಪಕ್ಷಕ್ಕೆ ಆಹ್ವಾನಿಸಿದರೂ ನಿರಾಕರಿಸಿದ್ದೆ. ಆಗ ನಿನ್ನದು ಎಂತಹ ಜಾತಿ ಪ್ರೇಮ ಎಂದಿದ್ದರು. ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆ ನೋಡಿದರೆ ಕಾಂಗ್ರೆಸ್ ಸೇರಿ ತಪ್ಪು ಮಾಡಿದೆ ಎನಿಸುತ್ತಿದೆ ಎನ್ನುವ ಮೂಲಕ ಬಿಜೆಪಿ ಸೇರುವ ಬಗ್ಗೆ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸುಳಿವು ನೀಡಿದ್ದಾರೆ.

    ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನನ್ನ ಸೋದರನನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ಎಚ್.ಡಿ.ಕುಮಾರಸ್ವಾಮಿ ದ್ವೇಷ ರಾಜಕೀಯ ಮಾಡಿದರು. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಕೂಡ ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂದರೆ ಯಾರನ್ನು ನಂಬಿ ರಾಜಕಾರಣ ಮಾಡುವುದು? ಆಗಲೂ ನಾನು ಸಹಾಯ ಮಾಡಿ ಎಂದು ಯಾರ ಬಳಿಯೂ ಹೋಗಲಿಲ್ಲ ಎಂದರು.

    ಸಂಸದರನ್ನು ಗೆಲ್ಲಿಸಿದ್ದು ನಾನೆ, ಕೆಪಿಸಿಸಿ ಅಧ್ಯಕ್ಷರು, ಸಂಸದರು ನಮ್ಮ ಬಳಿ ಇದ್ದಾರೆ ಎಂದು ಶಾಸಕ ಎ. ಮಂಜುನಾಥ್ ಹೇಳುತ್ತಿರುವುದನ್ನು ನೋಡಿದರೆ ನಮ್ಮ ಪಕ್ಷದ ವರಿಷ್ಠರ ಬಗ್ಗೆಯೇ ಅನುಮಾನದ ಜತೆಗೆ ಆತಂಕ ಮೂಡುತ್ತಿದೆ. ಸಂಸದ ಡಿ.ಕೆ. ಸುರೇಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶದಂತೆ ಕರೊನಾ ಹಿನ್ನೆಲೆಯಲ್ಲಿ ಕಾರ್ಯಕರ್ತರೊಂದಿಗೆ ಗ್ರಾಮಗಳಿಗೆ ತೆರಳಿ ಕೈಲಾದ ಕೆಲಸ ಮಾಡುತ್ತಿದ್ದೇವೆ. ಇಷ್ಟೆಲ್ಲ ಮಾಡಿದರೂ ಕಾಲೆಳೆಯುವುದನ್ನು ನೋಡಿದರೆ ಕಾಂಗ್ರೆಸ್ ಸಂಘಟಿಸಬೇಕೆ, ಬೇಡವೆ ಎಂಬ ಗೊಂದಲ ಶುರುವಾಗಿದೆ. ಜೆಡಿಎಸ್ ಶಾಸಕರ ಮಾತಿನ ವರಸೆ ನೋಡಿದರೆ ಸಂಸದ, ಕೆಪಿಸಿಸಿ ಅಧ್ಯಕ್ಷರನ್ನೇ ನಿಯಂತ್ರಣದಲ್ಲಿಟ್ಟುಕೊಂಡಂತೆ ಭಾಸವಾಗುತ್ತದೆ. ಈ ಬಗ್ಗೆ ಸಂಸದರೇ ಸ್ಪಷ್ಟನೆ ನೀಡಬೇಕು. ಎದುರಿಗಿರುವ ಶತ್ರುವನ್ನು ಎದುರಿಸಬಹುದು. ಆದರೆ, ಪಕ್ಕದಲ್ಲೇ ಕುಳಿತು ಚುಚ್ಚಿದರೆ ಹೇಗೆ ಎಂದು ಶಾಸಕರು, ಸಂಸದರ ನಡೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಹಣಕ್ಕಾಗಿ ರಾಜಕಾರಣ ಮಾಡುವುದು ನಮ್ಮ ಕುಟುಂಬಕ್ಕೆ ಅಗತ್ಯವಿಲ್ಲ. ಬಿಡದಿ ಕೆಐಎಡಿಬಿ ವಿಷಯದಲ್ಲಿ ರೈತರಿಗೆ, ನನ್ನನ್ನು ನಂಬಿದವರಿಗೆ ಮೋಸವಾಗಲು ಬಿಡಲ್ಲ. ಶಾಸಕರನ್ನು ಎಂದಿಗೂ ಏಕವಚನದಲ್ಲಿ ನಿಂದಿಸಿಲ್ಲ ಎಂದರು.

    ನಾನು ಶಾಸಕನಾಗಲು ಕಾಂಗ್ರೆಸ್ ನಾಯಕರ ಆಶೀರ್ವಾದ ಮುಖ್ಯವಲ್ಲ. ನನ್ನ ಕಾರ್ಯಕರ್ತರು, ಕ್ಷೇತ್ರದ ಜನತೆಯ ಆಶೀರ್ವಾದ ಮುಖ್ಯ. ಎಲ್ಲೋ ಒಂದು ಕಡೆ ತಪ್ಪು ಮಾಡಿದ್ದೇವೆ, ನಮ್ಮ ಶಕ್ತಿಯನ್ನು ಬೇರೆಯವರಿಗೆ ಧಾರೆ ಎರೆಯುತ್ತಿದ್ದ್ದೇವೆಯೇ ಎಂಬ ಭಾವನೆ ಮೂಡುತ್ತಿದೆ ಎಂದರು. ಬಿಜೆಪಿ, ಜೆಡಿಎಸ್‌ನಲ್ಲಿದ್ದಾಗ ಪ್ರಾಮಾಣಿಕವಾಗಿ ಪಕ್ಷ ಕಟ್ಟಿದ್ದೇವೆ. ಈಗ ಕಾಂಗ್ರೆಸ್‌ನಲ್ಲಿದ್ದೇವೆ, ನಮ್ಮ ನಾಯಕರ ೆಟೋ ಹಾಕಿಕೊಳ್ಳುತ್ತೇವೆಯೇ ಹೊರತು ಬೇರೆಯವರ ೆಟೋ ಹಾಕಿಕೊಳ್ಳುವುದಿಲ್ಲ. ಇಂತಹ ಸಂಸ್ಕೃತಿ ಶಾಸಕರಿಗೆ ಒಳ್ಳೆಯದಲ್ಲ ಎಂದರು.

    ಸಂಸದ, ಶಾಸಕರೇ ಉತ್ತರಿಸಲಿ: ಕೆಐಎಡಿಬಿ ವಿಷಯದಲ್ಲಿ ನಮ್ಮ ಬೆಂಬಲಕ್ಕೆ ನಿಂತರೆ ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಶಾಸಕರಿಗೆ ಮನವಿ ಮಾಡಿದರೆ, ಈಗಾಗಲೇ ಎಚ್‌ಡಿಕೆ, ಡಿ.ಕೆ. ಶಿವಕುಮಾರ್, ಸಂಸದರ ಮೂಲಕ ಪತ್ರ ನೀಡಿದ್ದೇವೆ ಎನ್ನುತ್ತಾರೆ. ಆದರೂ ನೋಟಿಫಿಕೇಶನ್ ಆಗುತ್ತದೆ ಎಂದರೆ ಹೇಗೆ? ಇವರೆಲ್ಲರ ಪತ್ರಕ್ಕೆ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿದ ಬಾಲಕೃಷ್ಣ, ಮುಖ್ಯಮಂತ್ರಿಯಾದವರು, ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಉಳ್ಳವರು ಹಾಗೂ ಪ್ರಬಲ ಕಾಂಗ್ರೆಸ್‌ನ ಏಕೈಕ ಸಂಸದರು ಪತ್ರ ನೀಡಿದರೂ ನೋಟಿಫಿಕೇಶನ್ ಆಗಿದೆ. ಇವರೆಲ್ಲ ಜಿಲ್ಲೆಯಲ್ಲಿ ಶಕ್ತಿಹೀನರೇ ಎಂದು ಪ್ರಶ್ನಿಸಿದ ಬಾಲಕೃಷ್ಣ, ಕೆಐಎಡಿಬಿ ಭೂ ಸ್ವಾಧೀನ ವಿಷಯದಲ್ಲಿ ರೈತರ ಪರ ನಿಲ್ಲದಿದ್ದರೆ ಅಂತಿಮ ನೋಟೀಫಿಕೇಶನ್ ಆಗಿ ಮೂರುದಿನಗಳ ಒಳಗೆ ಇವರೆಲ್ಲ ಹಣ ಪಡೆಯುತ್ತಿದ್ದರು. ರೈತರ ಪರ ಪತ್ರ ನೀಡಿದ್ದೇವೆ ಎನ್ನುವ ಇವರು ಅದು ಯಾವ ಪತ್ರ ಎಂದು ತೋರಿಸಲಿ ಎಂದು ಸವಾಲು ಹಾಕಿದರು. ನಾನು ಹೇಳಿರುವುದರಲ್ಲಿ ತಪ್ಪಿದ್ದರೆ ರಾಜಕಾರಣ ಮಾಡುವುದಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಹೊಟ್ಟೆಪಾಡಿನ ರಾಜಕಾರಣ ಮಾಡುವುದಿಲ್ಲ. ಈ ವಿಷಯದಲ್ಲಿ ಬಹಿರಂಗ ಚರ್ಚೆಗೆ ಬಂದರೆ ಸಿದ್ಧನಿದ್ದೇನೆ. ಶಾಸಕರು ಗೌರವಯುತವಾಗಿ ಮಾತನಾಡಬೇಕು, ಅದನ್ನು ಬಿಟ್ಟು ದುರ್ಯೋಧನನಂತೆ ವರ್ತಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಿಎಸ್‌ವೈಗೆ ಅಭಿನಂದನೆ: ಬಿಡದಿ ಕೆಐಎಡಿಬಿ ವಿಚಾರದಲ್ಲಿ ರೈತರ 14 ವರ್ಷದ ಸಮಸ್ಯೆಯನ್ನು ಪರಿಹರಿಸಿ, ನ್ಯಾಯ ಕೊಡಿಸುತ್ತೇನೆ. ನನ್ನ ತಾಯಿಯ ಮೇಲಾಣೆ, ಬಿಡದಿ ಕೆಐಎಡಿಬಿ ವಿಷಯವಾಗಿ ಮುಖ್ಯಮಂತ್ರಿಗಳು ಕಾಯಕಲ್ಪ ನೀಡಲಿದ್ದಾರೆ. ಇದರಿಂದ ಈ ಯೋಜನೆ ಅಂತ್ಯಗೊಳಲಿದೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ಕ್ಷೇತ್ರದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಶಾಸಕ ಎ.ಮಂಜುನಾಥ್ ಸಾಹೇಬ್ರು ನನ್ನನ್ನು ಕೆಣಕಿದ್ದಾರೆ, ಇನ್ಮುಂದೆ ಒಂದೊಂದಾಗಿ ಉತ್ತರ ನೀಡುತ್ತೇನೆ ಎಂದರು.

    ಕಳೆದ ಎಂಪಿ ಚುನಾವಣೆಯಲ್ಲಿ ನನ್ನ ಕಾರ್ಯಕರ್ತರು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎನ್ನುತ್ತಾರೆ. ಆದರೆ, ಶಾಸಕರಿಗೆ ಸಿಕ್ಕ ಬಹುಮತ ಸಂಸದರಿಗೇಕೆ ಬರಲಿಲ್ಲ. ನಾನು ಮತ್ತು ನನ್ನ ಕಾರ್ಯಕರ್ತರು ಸ್ವಾಭಿಮಾನಿಗಳು. ಕೆಲಸ ಇದ್ದರೆ ಮಾತ್ರ ಮುಖಂಡರ ಮನೆಗೆ ಹೋಗುತ್ತೇವೆ. ಕಾಂಗ್ರೆಸ್ ಸಂಸ್ಕೃತಿಯಲ್ಲಿ ಬೆಳಗ್ಗೆಯೇ ಮುಖಂಡರ ಮನೆ ಬಾಗಿಲಲ್ಲಿ ಇದ್ದರೆ ಕಾಂಗ್ರೆಸಿಗರು ಇಲ್ಲದಿದ್ದರೆ ಅಲ್ಲ ಎಂಬ ಭಾವನೆ ನಾಯಕರಲ್ಲಿ ಇದ್ದರೆ ಅದು ನನ್ನ ತಪ್ಪಲ್ಲ.
    ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ, ಮಾಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts