More

  ಸತೀಶ್ ಪ್ರಭು ಕಾಂಗ್ರೆಸ್ ಸೇರ್ಪಡೆ, ಬಿಜೆಪಿ ಮುಳುಗುತ್ತಿರುವ ಹಡಗು ಎಂದ ಬಿ.ಕೆ.ಹರಿಪ್ರಸಾದ್

  ಮಂಗಳೂರು: ಬಿಜೆಪಿ ಹಿರಿಯ ಮುಖಂಡ ಸತೀಶ್ ಪ್ರಭು ಸಹಿತ ನಾಲ್ವರು ಭಾನುವಾರ ನಗರದ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ಕಾಂಗ್ರೆಸ್ ಮುಖಂಡರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ರಜತ್ ಆರ್. ಕಾಮತ್, ದೀಕ್ಷಾ ಕಾಮತ್ ಮತ್ತು ಸಂತೋಷ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾದ ಇತರ ಮೂವರು.

  ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಅವರು, ಈ ಬಾರಿ ಬಿಜೆಪಿಯ 47 ಮಂದಿ ಹಿರಿಯ ನಾಯಕರು ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಸೇರಿದ್ದಾರೆ ಎಂದರು. ಐದು ವರ್ಷಗಳ ಕಾಲಾವಕಾಶವಿದ್ದ ಬಿಜೆಪಿಯ ವಿಧಾನಪರಿಷತ್ ಸದಸ್ಯರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವುದನ್ನು ನೋಡಿದರೆ ಬಿಜೆಪಿ ಹಡಗು ಪೂರ್ಣವಾಗಿ ಮುಳುಗಡೆಯಾಗುವುದರಲ್ಲಿ ಅನುಮಾನವಿಲ್ಲ ಎಂದರು.

  ಸೋಮವಾರ ಚುನಾವಣಾ ಪ್ರಚಾರದ ಕೊನೆಯ ದಿನವಾಗಿದ್ದು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಸೋನಿಯಾ ಗಾಂಧಿ ಈಗಾಗಲೇ ಪ್ರಚಾರದಲ್ಲಿ ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದರು.

  ಶಾಸಕ ರೋಜಿ ಜಾನ್ ಮಾತನಾಡಿ, ಸತೀಶ್ ಪ್ರಭು ಸೇರ್ಪಡೆಯಿಂದ ಜಿಲ್ಲಾ ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ಬರಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

  ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೊ, ಪಕ್ಷದ ಪ್ರಮುಖರಾದ ಶಶಿಧರ ಹೆಗ್ಡೆ, ಪಿ.ವಿ.ಮೋಹನ್, ನವೀನ್ ಡಿಸೋಜ, ಲುಕ್ಮಾನ್ ಬಂಟ್ವಾಳ, ಲಾವಣ್ಯ ಬಲ್ಲಾಳ್, ಪ್ರಕಾಶ್ ಸಾಲ್ಯಾನ್ ಉಪಸ್ಥಿತರಿದ್ದರು.

  ಸತೀಶ್ ಪ್ರಭು 1988ರಿಂದ ಬಿಜೆಪಿ ಯುವಮೋರ್ಚಾದಲ್ಲಿ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ, ಜಿಲ್ಲಾ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿದ್ದಾರೆ. ಸಂಘನಿಕೇತನ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

  ಅಧಿಕಾರಕ್ಕಾಗಿ ಸೇರಿಲ್ಲ

  ಸತೀಶ್ ಪ್ರಭು ಮಾತನಾಡಿ, ಯಾವುದೇ ಅಧಿಕಾರ, ಹುದ್ದೆಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಈ ಜಿಲ್ಲೆಯಲ್ಲಿ ನಮ್ಮ ಹಿರಿಯರು ಕಾಂಗ್ರೆಸ್‌ನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು, ಆ ನಿಟ್ಟಿನಲ್ಲಿ ಗತವೈಭವ ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಸುಮಾರು ವರ್ಷಗಳಿಂದ ಸಂಘಪರಿವಾರ, ಬಿಜೆಪಿ ಜತೆ ಗುರುತಿಸಿಕೊಂಡಿದ್ದು, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯಲ್ಲಿ ಜನಹಿತ ಸಾಧನೆ ಗೌಣವಾಗುತ್ತಿದ್ದು, ಇದರಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts