More

    ಬಿಜೆಪಿ ಗೆಲುವಿಗೆ ಮುಖಂಡರೇ ಅಡ್ಡಿ?: ಜಿಲ್ಲೆಯಲ್ಲಿ ಚರ್ಚೆ ಆರಂಭ 

    ರಾಮನಗರ: ಗ್ರಾಮ ಪಂಚಾಯ್ತಿ ಚುನಾವಣೆ ಮಟ್ಟಿಗೆ ಬಿಜೆಪಿ ಜಿಲ್ಲೆಯಲ್ಲಿ ಭರ್ಜರಿ ಗೆಲುವನ್ನೇ ದಾಖಲಿಸಿದೆ, ಆದರೆ ಈ ದಾಖಲೆಗೆ ಮತ್ತಷ್ಟು ಸಂಖ್ಯೆ ಸೇರ್ಪಡೆಗೊಳ್ಳುವ ಅವಕಾಶವಿದ್ದರೂ ಪಕ್ಷದ ಮುಖಂಡರೇ ಅಡ್ಡಿಯಾದರೆ?

    ಹೀಗೊಂದು ಚರ್ಚೆ ವ್ಯಾಪಕವಾಗಿ ಕೇಳಿ ಬರುತ್ತಿದ್ದು ಬಿಜೆಪಿಯ ಆತ್ಮಾವಲೋಕನಕ್ಕೆ ಇದು ಸಕಾಲವಾಗಿದೆ.

    ಬಿಜೆಪಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲು ಮಾಡಿದೆ. ಆದರೆ, ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ವಪಕ್ಷೀಯರೇ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಕೆಲವು ಸ್ಥಾನಗಳು ಕೈತಪ್ಪುವಂತೆ ಆಗಿದೆ ಎನ್ನುವ ಚರ್ಚೆಗಳು ಆರಂಭಗೊಂಡಿವೆ.

    ರುದ್ರೇಶ್ ಕಮಾಲ್: ರೇಷ್ಮೇ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರ ಗೆಲುವಿನ ಹಿಂದೆ ಕೆಆರ್​ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಅವರ ಶ್ರಮವಿದೆ ಎನ್ನುವುದು ಬಿಜೆಪಿ ವಾದ. ಹಿಂದೆ ಜಿಲ್ಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಪಕ್ಷವನ್ನು ಸಮರ್ಥವಾಗಿ ಸಂಘಟನೆ ಮಾಡಿದ ಪರಿಣಾಮ ಇಂದು ಪಕ್ಷಕ್ಕೆ ನೆಲೆ ದೊರೆಯುವಂತೆ ಆಗಿದೆ. ಇದರಿಂದಾಗಿಯೇ ರಾಮನಗರ, ಕನಕಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ ಎಂಬುದು ಹಲವರ ಅಭಿಪ್ರಾಯ.

    ಕಾಲೆಳೆದರು?: ಈಗ ಗೆಲುವು ಸಾಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಲ್ಲಿ ಕೆಲವರು ಹೇಳುವಂತೆ ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ರುದ್ರೇಶ್ ಅವರ ನಿರ್ದೇಶನದ ಮೇರೆಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆವು. ಆದರೆ, ಪ್ರಸ್ತುತ ಇರುವ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ರುದ್ರೇಶ್ ಅವರ ಬೆಂಬಲಿಗ ಎನ್ನುವ ಕಾರಣಕ್ಕೆ

    ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರು. ನಿರಾಯಾಸವಾಗಿ ಗೆಲ್ಲುವ ಕಡೆಗಳಲ್ಲಿ ನಾವು ಶ್ರಮ ಪಡುವಂತೆ ಆಯಿತು. ಅದೆಷ್ಟೋ ವಾರ್ಡ್​ಗಳಲ್ಲಿ ಸ್ವ ಪಕ್ಷೀಯರೇ ನೀಡಿದ ತೊಂದರೆಯಿಂದಾಗಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇಲ್ಲವಾದರೆ ಮತ್ತಷ್ಟು ಸ್ಥಾನಗಳನ್ನು ಗೆಲ್ಲಬಹುದಾಗಿತ್ತು ಎಂದು ಹೇಳುತ್ತಾರೆ.

    ಆತ್ಮಾವಲೋಕನಕ್ಕೆ ಸಕಾಲ

    ಕೆಆರ್​ಐಡಿಎಲ್​ನ ಅಧ್ಯಕ್ಷರಾಗಿರುವ ಎಂ.ರುದ್ರೇಶ್ ನಾಯಕತ್ವನ್ನು ಒಪ್ಪಿಕೊಂಡಿರುವ ಒಂದು ಬಣ ಮತ್ತು ಇವರಿಗೆ ವಿರುದ್ಧವಾಗಿ ಇನ್ನೊಂದು ಬಣ ಜಿಲ್ಲೆಯಲ್ಲಿ ಸಕ್ರಿಯವಾಗಿವೆ. ಆದರೆ ಈ ಬಾರಿ ಚುನಾವಣೆಯಲ್ಲಿ ರುದ್ರೇಶ್ ಮತ್ತು ಅವರ ಬೆಂಬಲಿಗರಿಗೆ ಕಡಿವಾಣ ಹಾಕಲು ಮತ್ತೊಂದು ಬಣ ಸಾಕಷ್ಟು ಪ್ರಯತ್ನ ನಡೆಸಿದ ಪರಿಣಾಮ ಮತ್ತಷ್ಟು ಸ್ಥಾನಗಳು ಕೈ ತಪ್ಪಿವೆ ಎನ್ನುವ ಸಂದೇಶಗಳು ವಾಟ್ಸ್ ಆಫ್ ಮೂಲಕ ಹರಿದಾಡಿವೆ. ಅಲ್ಲದೆ ಪಕ್ಷದ ಮುಖಂಡರು ಕೂಡಲೇ ಇತ್ತ ಗಮನ ಹರಿಸಿ ಪಕ್ಷಕ್ಕೆ ಕಂಟಕವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.

    ಜಿಲ್ಲೆಯಲ್ಲಿ ಪಕ್ಷದ ಸಾಧನೆ ತೃಪ್ತಿ ತಂದಿದೆ. ಆದರೂ ಮತ್ತಷ್ಟು ಸಾಧಿಸಬಹುದಿತ್ತು. ನಮ್ಮ ಪಕ್ಷದವರೇ ಹಲವಾರು ಅಭ್ಯರ್ಥಿಗಳಿಗೆ ಮುಳುವಾಗಿದ್ದಾರೆ. ಇದನ್ನು ಸರಿಪಡಿಸಿಕೊಂಡು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ.

    | ಎಂ.ರುದ್ರೇಶ್, ಕೆಆರ್​ಐಡಿಎಲ್ ಅಧ್ಯಕ್ಷ.

    ಬಿಜೆಪಿ ಬೆಂಬಲದೊಂದಿಗೆ ಕಣಕ್ಕೆ ಇಳಿದಿದ್ದೆ. ರುದ್ರೇಶ್ ಅವರ ಬೆಂಬಲಿಗ ಎನ್ನುವ ಕಾರಣಕ್ಕೆ ಹಾಲಿ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳೇ ನನ್ನ ವಿರುದ್ಧ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರು. ಆದರೂ ಗೆಲುವು ಸಾಧಿಸಿದ್ದೇನೆ. ಮೊದಲು ಇಂತಹ ಮುಖಂಡರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕಿದೆ.

    | ಕಿರಣ್ ಹಳ್ಳಿಮಾಳ ಮತ ಕ್ಷೇತ್ರದಿಂದ ವಿಜೇತರಾದವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts