More

    ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಹಿಂದುಳಿದ ವರ್ಗಕ್ಕೆ ಅವಹೇಳನ ಮಾಡಿದ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ತಕ್ಷಣ ದೇಶದ ಜನರ ಬಳಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಕಾರ್ಯಕರ್ತರು, ರಾಹುಲ್ ಗಾಂಧಿ ಹಲವಾರು ವಿಷಯಗಳಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು, ಇದೀಗ ನರೇಂದ್ರ ಮೋದಿ ಹಿಂದುಳಿದ ವರ್ಗದ ನಾಯಕನಲ್ಲ. ಗಾಣಿಗ ಸಮಾಜ ಹಿಂದುಳಿದ ವರ್ಗಕ್ಕೆ ಸೇರಿಲ್ಲ ಎಂಬ ಅರ್ಥಹೀನ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
    ತೇಲಿ ಸಮಾಜ ಎಂದರೆ ಕರ್ನಾಟಕದಲ್ಲಿ ಗಾಣಿಗ ಎಂದರ್ಥ. ಇದು ಹಿಂದುಳಿದ ಸಮಾಜವಾಗಿದ್ದು, ಮೋದಿ ಅಂತಹ ಸಮಾಜದಿಂದ ಬಂದವರು ಎಂಬುದು ಹೆಮ್ಮೆ ಪಡುವಂಥ ವಿಷಯ. ಆದರೆ ರಾಹುಲ್ ಗಾಂಧಿ ಅದನ್ನು ತಿಳಿಯದೆ ಅವಹೇಳನ ಮಾಡಿದ್ದಾರೆಂದು ದೂರಿದರು.
    1994ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ತೇಲಿ ಅಥವಾ ಗಾಣಿಗ ಸಮಾಜವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಲಾಗಿದೆ. ನಂತರ 1999ರಲ್ಲಿ ಗಾಣಿಗ ಸಮಾಜವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಿದೆ. ಪ್ರಧಾನಿಗೂ ಹಾಗೂ ಹಿಂದುಳಿದ ವರ್ಗಕ್ಕೂ ಅವಹೇಳನ ಮಾಡಿರುವ ರಾಹುಲ್ ಗಾಂಧಿ ಈ ಕೂಡಲೇ ದೇಶದ 140 ಕೋಟಿ ಜನರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
    ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಶಿವರಾಜ್, ಸಿ.ಎಚ್.ಮಾಲತೇಶ್, ಸುಧಾಕರ್, ಆಯನೂರು ಕುಪ್ಪೇಂದ್ರ, ಪ್ರದೀಪ್ ಹೊನ್ನಪ್ಪ, ಪುರುಷೋತ್ತಮ, ವಿಕಾಸ್, ಪ್ರಭಾಕರ್, ರಂಗನಾಥ್, ವಿನ್ಸೆಂಟ್ ರೋಡ್ರಿಗಸ್, ವೀರಭದ್ರಪ್ಪ ಪೂಜಾರಿ, ರಾಹುಲ್ ಬಿದರೆ, ದರ್ಶನ್, ಹರೀಶ್, ಎಸ್.ರಮೇಶ್, ಓಂಗಣೇಶ್ ಶೇಟ್, ಕೆ.ವಿ.ಅಣ್ಣಪ್ಪ, ಸುರೇಖಾ ಮುರಳೀಧರ್, ರಶ್ಮಿ, ರೂಪಾ, ಉಷಾ, ಕರಿಬಸಮ್ಮ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts