More

    ಬಿಜೆಪಿ ಸಮಾವೇಶದಲ್ಲಿ‌ ಕಾಂಗ್ರೆಸ್ ವಿರುದ್ಧ ಪ್ರಧಾನಿ ಪ್ರಹಾರ

    ಚಿತ್ರದುರ್ಗ: ಬಿಜೆಪಿ ಕೋಟೆ ನಾಡಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾವೇಶದಲ್ಲಿ‌ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದರು. ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನೇ ಬಂಡವಾಳ ಮಾಡಿಕೊಂಡಿದ್ದು, ಆತಂಕವಾದದ ಪೋಷಕ ಎಂದು ಜರಿದರು.

    ವಿಜ್ಞಾನ ಕಾಲೇಜು ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ನವಕರ್ನಾಟಕ ಸಂಕಲ್ಪ ಸಮಾವೇಶದುದ್ದಕ್ಕೂ, ಪ್ರಧಾನಿ ಮೋದಿ, ಕಾಂಗ್ರೆಸ್ ಇತಿಹಾಸವನ್ನು ಕೆದಕಿ, ಪ್ರಮಾದಗಳನ್ನು ಪಟ್ಟಿ ಮಾಡಿ ಪ್ರಹಾರ ನಡೆಸಿದರು.

    ಹೊಸದಿಲ್ಲಿಯ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಉಗ್ರನ ಪರ ಕಣ್ಣೀರು ಸುರಿಸಿದ್ದರು. ಪಾಕ್ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆದಾಗಲೂ ಭಾರತೀಯ ಸೈನಿಕರನ್ನು ಅವಮಾನಿಸಿದ್ದರು.

    ಈ ವಿಷಯದಲ್ಲಿ ಕಾಂಗ್ರೆಸ್- ಜೆಡಿಎಸ್ ನಿಲುವಿನಲ್ಲಿ ಕೂಡ ಭಿನ್ನತೆ ಇಲ್ಲ ಎಂದು ಜಾತ್ಯತೀತ ಜನತಾದಳವನ್ನು ಕುಟುಕಿದ ಪ್ರಧಾನಿ ಕರ್ನಾಟಕ ಸೇರಿದಂತೆ ದೇಶದಲ್ಲಿ ಉಗ್ರವಾದ ದಮನಕ್ಕೆ ನಾವು ಸಶಕ್ತರಿದ್ದೇವೆ ಎಂಬ ಸಂದೇಶ ಸಾರಿದರು.

    ಆತಂಕವಾದದ ಪೋಷಕ

    ಅತ್ತ ಬೆಂಗಳೂರಿನಲ್ಲಿ, ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್, ಬಜರಂಗದಳ ನಿಷೇಧ ವಿಷಯ ಪ್ರಸ್ತಾಸಿದರೆ, ಇತ್ತ ಚಿತ್ರದುರ್ಗದಲ್ಲಿ ಮೋದಿ ಆತಂಕವಾದದ ಪೋಷಕ ಎಂದು ಕೈ ಪಡೆಯನ್ನು ಜರಿದಿದ್ದು ವಿಶೇಷ ಎನಿಸಿತು.

    ಬಿಜೆಪಿ ಸಮಾವೇಶದಲ್ಲಿ‌ ಕಾಂಗ್ರೆಸ್ ವಿರುದ್ಧ ಪ್ರಧಾನಿ ಪ್ರಹಾರ

    ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಮದಕರಿ ನಾಯಕರು, ವೀರ ವನಿತೆ ಒನಕೆ ಓಬವ್ವ, ಮಠ ಮಾನ್ಯಗಳು, ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ನೆನೆದರು.

    ಏಳು ಸುತ್ತಿನ ಕೋಟೆ

    ದುರ್ಗದ ಏಳು ಸುತ್ತಿನ ಕೋಟೆ ಹೇಗೆ ಜನರಿಗೆ ಸುರಕ್ಷತೆ ಒದಗಿಸಿದೆಯೋ ಹಾಗೆ ಬಿಜೆಪಿಯ ಏಳು ಯೋಜನೆಗಳು ಜನಸಾಮಾನ್ಯರಿಗೆ ಸುರಕ್ಷೆ ಒದಗಿಸಿವೆ ಎಂದು ಪಿಎಂ ಆವಾಸ್, ಉಜ್ವಲ, ಆಯುಷ್ಮಾನ್ ಭಾರತ್, ಮುದ್ರಾ, ಅಟಲ್‌ಪಿಂಚಣಿ, ಮಹಿಳಾ ಸಬಲೀಕರಣವನ್ನು ಪ್ರಸ್ತಾಪಿಸಿದರು.

    ಪರಿಶಿಷ್ಟರು, ಹಿಂದುಳಿದವರು, ಬಂಜಾರರಿಗೆ ವಸತಿ, ಜಮೀನು ಹಕ್ಕುಪತ್ರ ಕೊಟ್ಟಿದ್ದೇವೆ, ಮಾತೃಭಾಷೆಯಲ್ಲಿ ಮೆಡಿಕಲ್, ಇಂಜಿನಿಯ ರಿಂಗ್ ಪರೀಕ್ಷೆಗೆ ಅನುವು, ಅಪ್ಪರ್ ಭದ್ರಾಗೆ 5500 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿಗೆ 3500 ಕೋಟಿ ರೂ. ನೀಡಲಾಗಿದೆ.

    ತುಮಕೂರು – ಚಿತ್ರದುರ್ಗ- ದಾವಣಗೆರೆ ರೈಲು ಮಾರ್ಗದ ಕಾಮಗಾರಿ ಶುರುವಾಗಿದೆ ಎಂದು ಅಭಿವೃದ್ಧಿಯ ಪಟ್ಟಿ ನೀಡಿದರು.

    ಕಾಂಗ್ರೆಸ್‌ಗೆ ತಕ್ಕ ಪಾಠ

    ವಾರೆಂಟಿ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ಸಿನ ಗ್ಯಾರಂಟಿಗಳನ್ನು ನಂಬುವುದು ಹೇಗೆ? ಗ್ಯಾರಂಟಿಗಳ ಅನುಷ್ಠಾನಕ್ಕೆ ಉಳಿದ ಅಭಿವೃದ್ಧಿ ಕಾರ್ಯ ಸ್ಥಗಿತಗೊಳಿಸಬೇಕಾಗುತ್ತದೆ.

    2012 ರಲ್ಲಿ ಗುಜರಾತ್ ಚುನಾವಣೆ ವೇಳೆ ಮನೆ ನಿರ್ಮಾಣದ ಸುಳ್ಳು ಭರವಸೆ ನೀಡಿದ್ದ ಕಾಂಗ್ರೆಸ್‌ಗೆ ಅಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.

    ರಾಜ್ಯ ಬಿಜೆಪಿ ಹೊರತಂದಿರುವ ಪ್ರಣಾಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ.

    ಸ್ವಾತಂತ್ರೊೃೀತ್ಸವದ ಅಮೃತಕಾಲದಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ. ದೇಶದ ನಂ.1 ರಾಜ್ಯವಾಗಿ ಅಭಿವೃದ್ಧಿಪಡಿಸಲು ಸಹಕರಿಸಿ ಎಂದು ಮನವಿ ಮಾಡಿದರು.

    ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಅಭ್ಯರ್ಥಿಗಳಾದ ಚನ್ನಗಿರಿಯ ಎಚ್.ಎಸ್.ಶಿವಕುಮಾರ್, ಮಾಯಕೊಂಡದ ಬಸವರಾಜ್ ನಾಯ್ಕ, ಚಳ್ಳಕೆರೆಯ ಅನಿಲ್‌ಕುಮಾರ್ ಇತರರಿದ್ದರು.

    ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ಸಿನಿಂದ ಅವಮಾನ
    ದುರ್ಗದ ಮಣ್ಣಿನ ಮಗ, ರಾಷ್ಟ್ರೀಯ ನಾಯಕ, ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರಿಗೆ ಆಗಿದ್ದ ಅಪಮಾನವನ್ನು ನೆನಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಿಜೆಪಿಯ ಜಯ ನಿಶ್ಚಿತವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸದಾ ತಮ್ಮನ್ನು ನಿಂದಿಸುವ ಕಾಂಗ್ರೆಸ್ ನಾಯಕರ ಚಾಳಿಯ ವಿರುದ್ಧ ಮಾತಿನ ಪ್ರಬಲ ಚಾಟಿ ಬೀಸಿದರು.

    ನನ್ನ ವಿರುದ್ಧ ಅವರ ನಿಂದನೆಗಳು ನೂರಾಗಿವೆ. ಕಾಂಗ್ರೆಸ್ ದ್ವೇಷ, ನಿಂದನೆ ಮಾತು ಗಳನ್ನು ಆಡುತ್ತಾ ಸಮಾಜವನ್ನು ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.

    ಭ್ರಷ್ಟಾಚಾರವೆಂಬ ಕಾರ್ಕೋಟಕ ವಿಷಕ್ಕೆ ಆ ಪಕ್ಷ ಕಾರಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ರಿವರ್ಸ್ ಗೇರ್‌ನಲ್ಲಿ ಚಲಿಸುವುದು ನಿಶ್ಚಿತವೆಂದು ಆತಂಕ ವ್ಯಕ್ತಪಡಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts