More

    ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆ ನೀಗಿಸಿ

    ಸೋಮವಾರಪೇಟೆ: ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಬಡರೋಗಿಗಳು ಪರದಾಡುವಂತಾಗಿದ್ದು, ಶಾಸಕರು ಕ್ರಮಕೈಗೊಳ್ಳಬೇಕೆಂದು ಬಿಜೆಪಿ ನಗರ ಅಧ್ಯಕ್ಷ ಎಸ್.ಆರ್.ಸೋಮೇಶ್ ಒತ್ತಾಯಿಸಿದ್ದಾರೆ.

    ಅಪ್ಪಚ್ಚು ರಂಜನ್ ಶಾಸಕರಾಗಿದ್ದಾಗ 10ರಿಂದ 12 ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಮೂವರು ಕಾರ್ಯನಿರ್ವಹಿಸುತ್ತಿದ್ದು, ಉಳಿದವರು ವರ್ಗಾವಣೆ ಆಗಿದ್ದಾರೆ. ಇದರ ಪರಿಣಾಮವಾಗಿ ರೋಗಿಗಳು ಆಸ್ಪತ್ರೆಯಲ್ಲಿ ಸಾಲಗಟ್ಟಿ ನಿಲ್ಲುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾದ ನಂತರ ಸಾರ್ವಜನಿಕರಿಗೆ ಸಂಕಷ್ಟಗಳು ಹೆಚ್ಚಾಗಿವೆ. ಸೋಮವಾರಪೇಟೆ ಕೆಎಸ್‌ಆರ್‌ಟಿ ಬಸ್ ನಿಲ್ದಾಣಕ್ಕೆ ವಿವಿಧ ಮಾರ್ಗದ 7 ಬಸ್‌ಗಳು ಬರುತ್ತಿಲ್ಲ. ಇದರಿಂದ ಮೈಸೂರು ಮಾರ್ಗದಲ್ಲಿ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಸಮಸ್ಯೆಯಾಗಿದೆ. ಎಲ್ಲವೂ ಉಚಿತವಾದ ಮೇಲೆ ಖಚಿತವಾಗಿ ಬಸ್ ಬರುತ್ತಿಲ್ಲ. ಕೂಡಲೇ ಹೊಸ ಬಸ್‌ಗಳನ್ನು ಬಿಡಬೇಕು ಎಂದರು.

    ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಕಳೆದ 6 ತಿಂಗಳಿಂದ ಯಾವುದೇ ನೂತನ ಕಾಮಗಾರಿಗಳು ನಡೆಯುತ್ತಿಲ್ಲ. ಹಿಂದಿನ ಬಿಜೆಪಿ ಶಾಸಕರು ತಂದಿದ್ದ ಅನುದಾನದಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಈಗಿನ ಶಾಸಕರು ಉದ್ಘಾಟನೆ ಮಾಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಬೀದಿ, ಬೀದಿಯಲ್ಲಿ ಫ್ಲೆಕ್ಸ್ ಹಾಕಿಕೊಂಡು ಪ್ರಚಾರ ಪಡೆದರೆ ಸಾಲದು, ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ತರಬೇಕು ಎಂದು ಹೇಳಿದರು.

    2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ನಂತರದ ಅತಿವೃಷ್ಟಿಯಿಂದ ಹಾನಿಯಾದ ಸ್ಥಳಗಳ ಅಭಿವೃದ್ಧಿಗೆ ನೀಡಿದ ಹಣ ತಡವಾಗಿ ಬಿಡುಗಡೆಯಾಗಿದ್ದು, ಆ ಹಣವನ್ನು ಹಾನಿಯಾದ ಪ್ರದೇಶಗಳಿಗೆ ವಿನಿಯೋಗಿಸಬೇಕು. ಈಗ ಯಾರದೋ ಮಾತು ಕೇಳಿ, ಬೇರೆ ಪ್ರದೇಶಗಳ ಅಭಿವೃದ್ಧಿಗೆ ಹಣ ಬಳಕೆ ಮಾಡಲು ತಂತ್ರ ರೂಪಿಸಲಾಗಿದ್ದು, ಇದು ಸಂತ್ರಸ್ತರಿಗೆ ಮಾಡಿದ ದ್ರೋಹವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಪಕ್ಷದ ಮುಖಂಡರಾದ ಪಿ.ಕೆ.ಚಂದ್ರು, ಮೃತ್ಯುಂಜಯ, ಶರತ್‌ಚಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts