More

    ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ

    ಹುಬ್ಬಳ್ಳಿ: ಮೃತ ನೇಹಾ ಪ್ರಕರಣವನ್ನಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದರು.
    ನಗರದ ಬಿಡ್ನಾಳದಲ್ಲಿರುವ ನೇಹಾಳ ಮನೆಗೆ ಗುರುವಾರ ಭೇಟಿ ನೀಡಿ ನೇಹಾಳ ತಂದೆ-ತಾಯಿಗೆ ಸಾಂತ್ವನ ಹೇಳಿ ಹೊರಬಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
    ನೇಹಾ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ಬಿಜೆಪಿ ಹೇಳುತ್ತಿದೆ. ಆದರೆ ತಮ್ಮ ಸರ್ಕಾರ ಇದ್ದಾಗ ಒಂದು ಪ್ರಕರಣವನ್ನಾದರೂ ಸಿಬಿಐಗೆ ಕೊಟ್ಟಿದ್ದಾರಾ? ನಮ್ಮ ಸರ್ಕಾರ ಇದ್ದಾಗ ಸಿಬಿಐಗೆ ಸಾಕಷ್ಟು ಪ್ರಕರಣಗಳನ್ನು ಕೊಟ್ಟಿದ್ದೇವೆ. ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು.
    ಇದೊಂದು ದುರದೃಷ್ಟಕರ ಘಟನೆ. ಹಂತಕ ಫಯಾಜ್‌ನನ್ನು ಬಂಧಿಸಿದ್ದೇವೆ. ನೇಹಾ ಹತ್ಯೆ ಪ್ರಕರಣವನ್ನು ಸಿಐಡಿಗೆ ಕೊಟ್ಟಿದ್ದೇವೆ. ಎಲ್ಲ ಮಗ್ಗಲುಗಳಿಂದಲೂ ತನಿಖೆ ಚುರುಕುಗೊಂಡಿದೆ. ನೇಹಾ ಕುಟುಂಬದ ಜತೆಗೆ ನಾವಿದ್ದೇವೆ ಎಂದರು.
    ನೇಹಾ ಕುಟುಂಬದವರಿಗೆ ಪೊಲೀಸರ ರಕ್ಷಣೆ ಕೊಡುತ್ತೇವೆ. ಸಿಐಡಿ ತನಿಖೆ ಮಾಡಿ ವಿಶೇಷ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಿದೆ. ನಂತರ ಟ್ರಯಲ್ ನಡೆಯುತ್ತದೆ. ಹಂತಕನಿಗೆ ಆದಷ್ಟು ಬೇಗ ಗರಿಷ್ಠ ಶಿಕ್ಷೆ ಆಗುತ್ತದೆ ಎಂದರು. 120 ದಿನದೊಳಗೆ ನ್ಯಾಯ ಕೊಡಿಸೋಣ ಬಿಡಿ ಎಂದು ಸಿಎಂ, ನಿರಂಜನ ಹಿರೇಮಠ ಅವರ ಬೆನ್ನು ತಟ್ಟಿ ಸಮಾಧಾನ ಪಡಿಸಿದರು.
    ಸಾಂತ್ವನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಹಾಳ ತಂದೆ ನಿರಂಜನ ಹಿರೇಮಠ, ತಾಯಿ ಗೀತಾ ಹಿರೇಮಠ ಅವರಿಗೆ ಸಾಂತ್ವನ ಹೇಳಿದರು.
    ಆರೋಪಿಗೆ ಆತನ ಕೃತ್ಯಕ್ಕೆ ಸರಿಸಮನಾದ ಕಾನೂನಿನಡಿ ಶಿಕ್ಷೆ ಕೊಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಈಗಾಗಲೇ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ತನಿಖೆ ಅತ್ಯಂತ ತ್ವರಿತವಾಗಿ ನಡೆಯುತ್ತಿದೆ. ಇಂಥಾ ದುಷ್ಕರ್ಮಿಗಳು ಯಾರೇ ಇದ್ದರೂ ಮತ್ತೆ ಇಂಥಾ ಹೀನ ಕೃತ್ಯಕ್ಕೆ ಕೈ ಹಾಕಬಾರದು ಎನ್ನುವ ಸ್ಪಷ್ಟ ಎಚ್ಚರಿಕೆ ನೀಡುವ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದರು. ನಂತರ ಮನೆಯಿಂದ ಹೊರಬಂದು ನೇಹಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
    ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ, ಮಹೇಂದ್ರ ಸಿಂಘಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts