More

    ಹನುಮಾನ್​ ಆರಾಧನೆ ವಿಚಾರ: ಅರವಿಂದ ಕೇಜ್ರಿವಾಲ್ v/s ಬಿಜೆಪಿ ನಾಯಕರು…

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿರುವಾಗಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಬಿಜೆಪಿ ನಾಯಕ ಮನೋಜ್ ತಿವಾರಿ ಅವರ ನಡುವೆ ಹನುಮಾನ್ ಆರಾಧನೆ ವಿಚಾರದ ಲೇವಡಿ, ಟೀಕೆ ಗಮನಸೆಳೆದಿದೆ.

    ಈ ವಿಚಾರವಾಗಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ತಿವಾರಿ, ಅವರು(ಅರವಿಂದ ಕೇಜ್ರಿವಾಲ್​) ಹನುಮಾನ್​ ಜಿಯ ಪೂಜೆ ಮಾಡುವುದಕ್ಕೆ ಹೋಗಿದ್ದರೇ ಅಥವಾ ಅಶುದ್ಧಿ ಮಾಡುವುದಕ್ಕೆ ಹೋಗಿದ್ದರೇ? ಒಂದು ಕೈನಲ್ಲಿ ಚಪ್ಪಲಿ ಎತ್ತಿ ಇಡುತ್ತಾರೆ. ಮತ್ತೆ ಅದೇ ಕೈಯಲ್ಲಿ ಮಾಲೆ ತೆಗೆದುಕೊಂಡು… ಏನು ಮಾಡಿಬಿಟ್ಟರು? ನಕಲಿ ಭಕ್ತರು ಬಂದಾಗ ಈ ರೀತಿ ಆಗುವುದು ಸಹಜ. ಹೀಗಾಗಿ ಹನುಮಾನ್​ಜಿಗೆ ಬಹಳ ಸಲ ಅಭಿಷೇಕ ಮಾಡಿ ಎಂದು ನಾನು ಪಂಡಿತರಲ್ಲಿ ಕೇಳಿಕೊಂಡೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

    ಕ್ರೇಜಿವಾಲ್ ಇದಕ್ಕೆ ಪ್ರತಿಕ್ರಿಯಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಟಿವಿ ಚಾನೆಲ್​ ಒಂದರಲ್ಲಿ ಸಂದರ್ಶನದ ವೇಳೆ ನಾನು ಹನುಮಾನ್ ಚಾಲೀಸಾವನ್ನು ಉಲ್ಲೇಖಿಸಿದ್ದೆ. ಅಲ್ಲಿಂದೀಚೆಗೆ ಬಿಜೆಪಿಯವರು ನನ್ನನ್ನು ಲೇವಡಿ ಮಾಡುವುದಕ್ಕೆ ಶುರುಮಾಡಿಕೊಂಡಿದ್ದಾರೆ. ನಿನ್ನೆ ನಾನು ಹನುಮಾನ್​ ಜಿಯ ದೇವಸ್ಥಾನಕ್ಕೆ ಹೋಗಿದ್ದೆ. ದೇವರು ಎಲ್ಲರಿಗೂ ಸೇರಿದವನು. ಬಿಜೆಪಿಯವರನ್ನು ಸೇರಿದಂತೆ ಎಲ್ಲರನ್ನೂ ಆಶೀರ್ವದಿಸುತ್ತಾನೆ ಕೂಡ. ನಾನು ಪ್ರವೇಶಿಸಿದ್ದರಿಂದಾಗಿ ದೇವಸ್ಥಾನ ಅಶುದ್ಧವಾಗಿದೆ ಎಂದು ಬಿಜೆಪಿ ನಾಯಕರು ಇಂದು ಆಡಿಕೊಳ್ಳುತ್ತಿದ್ದಾರೆ. ಇದು ಯಾವ ಸೀಮೆಯ ರಾಜಕೀಯ? ಎಂದು ಪ್ರಶ್ನಿಸಿದ್ದಾರೆ.

    ಏನಿದು ಘಟನೆ: ಅರವಿಂದ ಕೇಜ್ರಿವಾಲ್ ಪತ್ನಿ ಸಮೇತರಾಗಿ ಕನೌಟ್​ ಪ್ಲೇಸ್​​ನಲ್ಲಿರುವ ಪ್ರಸಿದ್ಧ ಹನುಮಾನ್ ಮಂದಿರಕ್ಕೆ ಶುಕ್ರವಾರ ತೆರಳಿ ಪೂಜೆ ಸಲ್ಲಿಸಿದ್ದರು. ಅವರ ಈ ಭೇಟಿ ಎಲ್ಲರ ಗಮನಸೆಳೆದಿತ್ತು. ಇದಕ್ಕೂ ಮುನ್ನ ಹನುಮಾನ್ ಚಾಲೀಸಾ ಕುರಿತು ಕೇಜ್ರಿವಾಲ್ ನೀಡಿದ್ದ ಹೇಳಿಕೆ ಬಿಜೆಪಿ ನಾಯಕರಿಗೆ ನೋವುಂಟುಮಾಡಿತ್ತು.

    ಹೀಗಾಗಿ ಹನುಮಾನ್​ ಆರಾಧನೆ ವಿಚಾರದಲ್ಲಿ ಬಿಜೆಪಿ ನಾಯಕರು ಕೇಜ್ರಿವಾಲ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಫೆಬ್ರವರಿ 4ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಕೇಜ್ರಿವಾಲ್ ಅವರು ಈಗ ಹನುಮಾನ್ ಚಾಲೀಸಾ ಹೇಳ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಓವೈಸಿ ಕೂಡಾ ಇದನ್ನೇ ಮಾಡಲಿದ್ದಾರೆ. ಖಚಿತವಾಗಿಯೂ ಇದುವೇ ಆಗುವುದು ಎಂದು ವ್ಯಂಗ್ಯವಾಡಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts