More

    ದೇಶದ ಹಿತಕ್ಕಾಗಿ ಬಿಜೆಪಿ ಹೋರಾಟ

    ಚಿಕ್ಕಮಗಳೂರು: ದೇಶದ ಹಿತ ಮತ್ತು ಜನರ ರಕ್ಷಣೆಗಾಗಿ ಬಿಜೆಪಿ ಚುನಾವಣೆಯಲ್ಲಿ ಹೋರಾಟ ನಡೆಸುತ್ತಿದ್ದರೆ, ಕಾಂಗ್ರೆಸ್ ಗಾಂಧಿ ಕುಟುಂಬದ ರಕ್ಷಣೆಗಾಗಿ ಹೋರಾಟ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸರ್ವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜಗತ್ತಿನ ಆರ್ಥಿಕ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ ಸಿಕ್ಕಿದೆ ಎಂದು ಹೇಳಿದರು.
    ಬಡತನದ ವಿಷವರ್ತುಲದ ಸದ್ದಡಗಿಸಿದ ಪರಿಣಾಮ ಆರ್ಥಿಕ ಬೆಳವಣಿಗೆಯಿಂದ ಭಾರತವು ಇಂದು ನಾವಿನ್ಯತೆಯ ಕೇಂದ್ರವಾಗಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗೆ ಶೇ. 16ಕ್ಕಿಂತ ಹೆಚ್ಚಿನ ಕೊಡುಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೃಢವಾಗಿ ನಿಂತಿದೆ. ಜೊತೆಗೆ ಉದ್ಯಮಶೀಲತೆ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
    ಕೇಂದ್ರ ಸರ್ಕಾರ ಡಿಜಿಟಲೀಕರಣಕ್ಕೆ ಒತ್ತು ನೀಡಿದ ಪರಿಣಾಮ 2016 ರಿಂದ ಇದುವರೆಗೆ 26,500 ಕೋಟಿ ಡಿಜಿಟಲ್ ವ್ಯವಹಾರಗಳು ನಡೆದಿವೆ. ಮೇಕ್ ಇನ್ ಇಂಡಿಯಾ ಮೂಲಕ 14 ಕ್ಷೇತ್ರಗಳಲ್ಲಿ ಒಂದು ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಜಿಎಸ್ ಟಿ ತೆರಿಗೆಯಲ್ಲಿ ಪ್ರತಿ ತಿಂಗಳು 1.6 ಲಕ್ಷ ಕೋಟಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ವಿವರಿಸಿದರು.
    ಪಿಎಂ ಅವಾಜ್ ಯೋಜನೆಯಲ್ಲಿ ನಾಲ್ಕು ಕೋಟಿ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಉಜ್ವಲ್ ಯೋಜನೆಯಡಿ 10 ಕೋಟಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 12 ಕೋಟಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್ ಮಾತನಾಡಿ, ಕಾಂಗ್ರೆಸ್ನ ಸುಳ್ಳು ಭರವಸೆಗಳು ಮತ್ತು ಹೇಳಿಕೆಗೆ ಜನ ಬೆಲೆ ಕೊಡದೆ ಆಲೋಚನೆ ಮಾಡಿ ಬಿಜೆಪಿಗೆ ಮತ ನೀಡಬೇಕು ಎಂದು ಹೇಳಿದರು.
    ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಆ ಪಕ್ಷದ ಶಾಸಕರಿಗೆ ತೃಪ್ತಿ ಇದ್ದಂತಿಲ್ಲ. ಹೀಗಾಗಿಯೇ ಯಾವೊಬ್ಬ ಶಾಸಕರು ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಧುಕುಮಾರ್ ರಾಜ್ ಅರಸ್, ಬೀಕನಹಳ್ಳಿ ಸೋಮಣ್ಣ, ಕೆ.ಪಿ.ವೆಂಕಟೇಶ್, ಸಿ.ಎಂ.ಕೌಶಿಕ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts