More

    ಲೋಕಸಭೆ ಚುನಾವಣೆ: ಬಿಜೆಪಿಗೆ ಕಾಂಗ್ರೆಸ್​ಗಿಂತ ದುಪ್ಪಟ್ಟು ಮತ ಪ್ರಮಾಣ

    ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕಿಂತ ಶೇಕಡ 12ರಷ್ಟು ಹೆಚ್ಚು ಮತಗಳನ್ನು ಗಳಿಸಲಿದೆ. ಎನ್​ಡಿಎಗೆ ಶೇ. 46 ಮತ ಹಾಗೂ ಇಂಡಿಯಾಗೆ ಶೇ. 34 ಮತಗಳು ಸಿಗಲಿವೆ ಎಂದು ಲೋಕನೀತಿ-ಸಿಎಸ್​ಡಿಎಸ್ (ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್) ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆ ಹೇಳಿದೆ. ಪಕ್ಷವಾರು ಬಿಜೆಪಿ ಶೇ. 40 ಹಾಗೂ ಕಾಂಗ್ರೆಸ್ ಶೇ. 21 ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲಿವೆ ಎಂದು ಸಮೀಕ್ಷೆ ತಿಳಿಸಿದೆ.

    ಸಮೀಕ್ಷೆ ಪ್ರಕಾರ 10 ಮತದಾರರ ಪೈಕಿ ನಾಲ್ವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಕೂಡ ಸ್ವಲ್ಪ ಲಾಭ ಗಳಿಸುವುದಾದರೂ ಗಮನಾರ್ಹ ಪೈಪೋಟಿ ನೀಡುವ ಸಂಭವವಿಲ್ಲ. ಎನ್​ಡಿಎ ಮುನ್ನಡೆಯನ್ನು ಕಾಯ್ದುಕೊಂಡರೂ 2019ಕ್ಕೆ ಹೋಲಿಸಿದರೆ ಸರ್ಕಾರದ ಕಾರ್ಯ ಕ್ಷಮತೆಯ ಬಗ್ಗೆ ತೃಪ್ತಿಯಲ್ಲಿ ಇಳಿಕೆ ಕಂಡು ಬಂದಿರುವುದು ಗಮನಾರ್ಹವಾಗಿದೆ.

    ಮೋದಿ ಅಲೆಯಿಂದ ಲಾಭ: ಪ್ರಧಾನಿ ನರೇಂದ್ರ ಮೋದಿ ಅಲೆ ಎನ್​ಡಿಎಗೆ ಲಾಭ ಒದಗಿಸುವ ಪ್ರಮುಖ ಅಂಶವಾಗಿದೆ. ಆದರೂ ಈ ಚುನಾವಣೆಯಲ್ಲಿ ಜೀವನೋಪಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಪ್ರಮುಖ ಆತಂಕಗಳಾಗಿ ಹೊರಹೊಮ್ಮುತ್ತಿವೆ. ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನದ ಹೊಗೆಯಾಡುತ್ತಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

    ಸಾಧನೆಗೆ ತೃಪ್ತಿ: ಪ್ರತಿಕ್ರಿಯಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಬಿಜೆಪಿ ಸರ್ಕಾರದ 10 ವರ್ಷದ ಸಾಧನೆಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದು ಮೋದಿ ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡುವುದಕ್ಕೆ ಸಕಾರಾತ್ಮಕ ಒಲವಿನ ಅಂಶವಾಗಿದೆ.

    ಪ್ರಧಾನಿ ಹುದ್ದೆ ಮೋದಿಗೆ ಆದ್ಯತೆ: ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ, ಅಂದಾಜು ಶೇಕಡ 48ರಷ್ಟು ಜನರು ಪ್ರಧಾನಿ ಪಟ್ಟಕ್ಕೆ ನರೇಂದ್ರ ಮೋದಿಯವರ ಆಯ್ಕೆಗೆ ಒಲವು ವ್ಯಕ್ತಪಡಿಸಿದ್ದಾರೆ. ಕೇವಲ ಶೇ. 27 ಮಂದಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಪ್ರಧಾನಿ ಹುದ್ದೆಯಲ್ಲಿ ಕಾಣಲು ಬಯಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ಶೇ. 56ರಷ್ಟು ಜನರು ‘ಬಹಳಷ್ಟು’ ಅಥವಾ ‘ಸ್ವಲ್ಪ ಮಟ್ಟಿಗೆ’ ಮೋದಿ ಖಾತರಿಗಳನ್ನು ನಂಬುತ್ತಾರೆ. ರಾಹುಲ್ ಗಾಂಧಿ ವಿಚಾರದಲ್ಲಿ ಶೇ. 49 ರಷ್ಟು ಮಂದಿ ಇದೇ ರೀತಿಯ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ವೋದಿ ಖಾತರಿಗಳ ಬಗ್ಗೆ ಶ್ರೀಮಂತ ಕುಟುಂಬಗಳು ಹೆಚ್ಚಿನ ನಂಬಿಕೆ ಹೊಂದಿವೆ. ಆದರೆ ಮಧ್ಯಮ ವರ್ಗ ಎರಡರಲ್ಲೂ ಒಂದೇ ರೀತಿಯ ವಿಶ್ವಾಸವಿರಿಸಿವೆ.

    ಗೇಮರ್​ಗಳೊಂದಿಗೆ ಸಂವಾದ

    ನವದೆಹಲಿ: ತಮ್ಮ ಅಧಿಕಾರದುದ್ದಕ್ಕೂ ಡಿಜಿಟಲ್ ಇಂಡಿಯಾ ಪರವಾಗಿ ಬ್ಯಾಟ್ ಬೀಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಆನ್​ಲೈನ್ ಆಟಗಳ ಕ್ಷೇತ್ರದ ಪ್ರಮುಖ ಗೇಮರ್​ಗಳೊಂದಿಗೆ ಸಂವಾದ ನಡೆಸಿದ್ದು ಮಾತ್ರವಲ್ಲದೆ ಕೆಲವು ವರ್ಚುವಲ್ ರಿಯಾಲಿಟಿ (ವಿಆರ್) ಆಟಗಳನ್ನೂ ಆಡಿದರು. ಚುನಾವಣೆಗಳ ಸಂದರ್ಭದಲ್ಲಿ ತಾವು ‘ನೂಬ್’ ಬಳಸದೆ ಅದರಿಂದ ದೂರವುಳಿಯುವುದಾಗಿ ಮೋದಿ ಈ ಸಂದರ್ಭ ಘೋಷಿಸಿದರು. ಗೇಮಿಂಗ್ ಉದ್ಯಮದ ಕೆಲವು ಸಮಸ್ಯೆಗಳನ್ನು ಅವರು ಆಟಗಾರರೊಂದಿಗೆ ರ್ಚಚಿಸಿದರು. ಭಾರತದಲ್ಲಿ ಗೇಮಿಂಗ್ ಉದ್ಯಮಕ್ಕೆ ಉತ್ತೇಜನ ನೀಡುವುದಾಗಿ ಮೋದಿ ಘೋಷಿಸಿದರು. ಈ ಆಟಗಳ ಸೃಷ್ಟಿಕರ್ತರ ಕ್ರಿಯಾಶೀಲತೆಗೂ ಪ್ರೋತ್ಸಾಹ ಒದಗಿಸಲಾಗುತ್ತದೆಂದು ಅವರು ಹೇಳಿದರು. ಸಂವಾದದ ಬಗ್ಗೆ ಚಿಕ್ಕ ವಿಡಿಯೋವನ್ನು ಎಕ್ಸ್​ನಲ್ಲಿ ಬಿಜೆಪಿ ಹಂಚಿಕೊಂಡಿದೆ.

    ಬಿಜೆಪಿಯಿಂದ ಇಂದು ಸಂಕಲ್ಪ ಪತ್ರ ಬಿಡುಗಡೆ

    ನವದೆಹಲಿ: ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆ ‘ಸಂಕಲ್ಪಪತ್ರ’ವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ತನ್ನ ‘ಸಬ್​ಕಾ ಸಾಥ್, ಸಬ್​ಕಾ ವಿಕಾಸ್, ಸಬ್​ಕಾ ವಿಶ್ವಾಸ್ ಮತ್ತು ಸಬ್​ಕಾ ಪ್ರಯಾಸ್’ ಮಂತ್ರವು ಇಡೀ ದೇಶದ ದೃಷ್ಟಿಕೋನವಾದ ಸಂಕಲ್ಪ ಪತ್ರದಲ್ಲಿ ಪ್ರತಿಫಲನಗೊಳ್ಳಲಿದೆ ಎಂದು ಬಿಜೆಪಿ ಹೇಳಿದೆ. ‘ಅಬ್ಕೀ ಬಾರ್ 400 ಪಾರ್’ (ಈ ಸಲ 400ಕ್ಕಿಂತ ಹೆಚ್ಚು ಸ್ಥಾನ) ಕರೆಯೊಂದಿಗೆ ಬಿಜೆಪಿ ಚುನಾವಣಾ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಬಡವರು, ಮಹಿಳೆಯರು, ಯುವಜನರು ಮತ್ತು ರೈತರು -ಈ ನಾಲ್ಕು ವಿಭಾಗಗಳ ಮೇಲೆ ಪ್ರಧಾನಿ ಮೋದಿ ಪ್ರಣಾಳಿಕೆಯಲ್ಲಿ ಹೆಚ್ಚಿನ ಒತ್ತು ನೀಡಲಿದ್ದಾರೆ ಎನ್ನಲಾಗಿದೆ. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹಿತ ಪಕ್ಷದ ಇತರ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    Modi CAA

    ಪ್ರಣಾಳಿಕೆ ಸಮಿತಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚಿಸಿದ್ದು ಎರಡು ಸಭೆಗಳನ್ನು ನಡೆಸಿ ಸಂಕಲ್ಪ ಪತ್ರವನ್ನು ರೂಪಿಸಿದೆ. ಸಚಿವರಾದ ನಿರ್ಮಲಾ ಸೀತಾರಾಮನ್ ಸಮಿತಿಯ ಸಂಚಾಲಕಿ ಹಾಗೂ ಪಿಯೂಷ್ ಗೋಯಲ್ ಸಹ- ಸಂಚಾಲಕರಾಗಿದ್ದಾರೆ.

    15 ಲಕ್ಷಕ್ಕೂ ಅಧಿಕ ಸಲಹೆ: ಪ್ರಣಾಳಿಕೆ ಸಂಬಂಧ ದೇಶದಾದ್ಯಂತದಿಂದ ಬಿಜೆಪಿ 15 ಲಕ್ಷಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಿದೆ. ಆ ಪೈಕಿ 4 ಲಕ್ಷಕ್ಕೂ ಹೆಚ್ಚು ಸಲಹೆಗಳು ನಮೋ ಆಪ್ ಹಾಗೂ 11 ಲಕ್ಷ ಸೂಚನೆಗಳು ವಿಡಿಯೋಗಳ ಮೂಲಕ ಬಂದಿವೆ.

    ಆಂಧ್ರಪ್ರದೇಶ: ಚುನಾವಣಾ ಪ್ರಚಾರ ಸಭೆಯಲ್ಲಿ ಕಲ್ಲು ತೂರಾಟ, ಸಿಎಂ ಜಗನ್​ಗೆ ಗಂಭೀರ ಗಾಯ

    ಕೋಟ್ಯಂತರ ಮೌಲ್ಯದ ಕಳವು ಪ್ರಕರಣ ಬಯಲಿಗೆ; 1.2 ಕೋಟಿ ಮೌಲ್ಯದ ಗೋಡಂಬಿ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts