More

    ಅತಂತ್ರ ಪುರಸಭೆಗೆ ಪಕ್ಷೇತರರೇ ನಿರ್ಣಾಯಕರು!

    ಶಿಗ್ಗಾಂವಿ: ಸ್ಥಳೀಯ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ.

    ಪುರಸಭೆಯಲ್ಲಿ ಬಿಜೆಪಿ 9, ಕಾಂಗ್ರೆಸ್ 6, ಪಕ್ಷೇತರ 8 ಸೇರಿ 23 ಸದಸ್ಯರಿದ್ದಾರೆ. ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ಆಡಳಿತ ಚುಕ್ಕಾಣಿ ಹಿಡಿಯಲು ಇನ್ನೂ ನಾಲ್ಕು ಸದಸ್ಯರ ಬೆಂಬಲ ಬೇಕಿದೆ. ಸ್ಪಷ್ಟ ಬಹುಮತ ಇಲ್ಲದ ಕಾರಣ ಅತಂತ್ರ ಪುರಸಭೆಗೆ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ.

    ಪಕ್ಷೇತರ 8 ಸದಸ್ಯರಲ್ಲಿ ಬಹುತೇಕರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಅವರೆಲ್ಲರೂ ಮರಳಿ ಬಿಜೆಪಿಯತ್ತ ಮುಖ ಮಾಡಲು ನಿರ್ಧರಿಸಿದರೆ ಮಾತ್ರ ಬಿಜೆಪಿ ಅಧಿಕಾರಕ್ಕೇರುವುದು ಸುಲಭ. ಜೊತೆಗೆ ಶಾಸಕರು, ಸಂಸದರು ಬಿಜೆಪಿಯವರೇ ಇರುವುದರಿಂದ ಅಧಿಕಾರ ಸುಲಭವಾಗಿ ಕಮಲ ತೆಕ್ಕೆಗೆ ಸಿಗಲಿದೆ.

    ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ 1ನೇ ವಾರ್ಡ್​ನಿಂದ ಎರಡನೇ ಬಾರಿ ಗೆಲುವು ಸಾಧಿಸಿದ ರೂಪಾ ಬನ್ನಿಕೊಪ್ಪ, 10ನೇ ವಾರ್ಡ್​ನಿಂದ ಮೊದಲು ಬಾರಿಗೆ ಪುರಸಭೆ ಪ್ರವೇಶ ಪಡೆದಿರುವ ಶಾಂತಾಬಾಯಿ ಸುಭೇದಾರ, 3ನೇ ವಾರ್ಡ್ ಸದಸ್ಯೆ ಜ್ಯೋತಿ ನಡೂರು, 23ನೇ ವಾರ್ಡ್ ಸದಸ್ಯೆ ಸಂಗೀತಾ ವಾಲ್ಮೀಕಿ ನಡುವೆ ಪೈಪೋಟಿಯಿದೆ.

    ಉಪಾಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡ್ ಸದಸ್ಯ ದಯಾನಂದ ಅಕ್ಕಿ, 9ನೇ ವಾರ್ಡ್​ನ ಪಕ್ಷೇತರ ಸದಸ್ಯ ರಮೇಶ ವನಹಳ್ಳಿ, 12ನೇ ವಾರ್ಡ್ ಸದಸ್ಯ ಮಂಜುನಾಥ ಬ್ಯಾಹಟ್ಟಿ ನಡುವೆ ಪೈಪೋಟಿ ಶುರುವಾಗಿದ್ದು, ಅದೃಷ್ಟ ಯಾರಿಗೊಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಅಧಿಕಾರದ ಚುಕ್ಕಾಣಿ ಹಿಡಿಯಲು ಈಗಾಗಲೇ ಬಿಜೆಪಿ ಮುಖಂಡರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮೇಲೆ ಅಪ್ತ ವಲಯ, ವಿವಿಧ ಸಮಾಜದ ಮುಖಂಡರ ಮೂಲಕ ಗೌಪ್ಯವಾಗಿ ಒತ್ತಡ ಹೇರುತ್ತಿರುವುದು ತಿಳಿದು ಬಂದಿದೆ.

    3ನೇ ಬಾರಿ ಪುರಸಭೆ ಸದಸ್ಯನಾಗಿ ಆಯ್ಕೆಯಾಗಿದ್ದು. ಈಗಾಗಲೇ ಒಂದು ಬಾರಿ ಅಧ್ಯಕ್ಷನಾಗಿ ಅಧಿಕಾರ ನಡೆಸಿದ್ದೇನೆ. ಈಗ ಉಪಾಧ್ಯಕ್ಷನಾಗುವ ಕುರಿತು ವಿಚಾರ ಮಾಡಿಲ್ಲ. ಇನ್ನೆರಡು ದಿನದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಯಾರೆಂದು ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

    | ಸುಭಾಸ ಚವ್ಹಾಣ, ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts