More

    ಬಿಜೆಪಿ-ಕಾಂಗ್ರೆಸ್ ಪ್ರತಿಷ್ಠೆ ಪಣಕ್ಕೆ

    ಸವಣೂರ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಆರಂಭಗೊಂಡ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ರಾಜಕೀಯ ಪಕ್ಷಗಳ ಬೆಂಬಲಿಗರಿಂದ ಚಟುವಟಿಕೆಗಳು ಗರಿಗೆದರಿವೆ.

    21 ಗ್ರಾಮ ಪಂಚಾಯಿತಿ ಒಳಗೊಂಡ ತಾಲೂಕಿನಲ್ಲಿ ಹತ್ತಿಮತ್ತೂರ ಹೋಬಳಿಯು ಹಾವೇರಿ ವಿಧಾನಸಭೆ ಹಾಗೂ ಸವಣೂರ ಹೋಬಳಿಯು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳಿವೆ ಸೇರ್ಪಡೆಗೊಂಡಿವೆ. ಕಳೆದ ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸಾಧನೆ ತೋರಿರಲಿಲ್ಲ. ಹೀಗಾಗಿ, ಗ್ರಾಪಂ ಚುನಾವಣೆಯನ್ನು ಉಭಯ ಪಕ್ಷಗಳ ನಾಯಕರು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.

    ಹಿಂದಿನ ಅವಧಿಯಲ್ಲಿ ಸವಣೂರ ಹೋಬಳಿಯ 9 ಗ್ರಾಮ ಪಂಚಾಯಿತಿಗಳ ಪೈಕಿ 5ರಲ್ಲಿ ಬಿಜೆಪಿ ಹಾಗೂ 4ರಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹೊಂದಿದ್ದರು. ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ 12 ಗ್ರಾಪಂಗಳ ಪೈಕಿ 7ರಲ್ಲಿ ಕಾಂಗ್ರೆಸ್ ಹಾಗೂ 4ರಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ತಾಲೂಕಿನಲ್ಲಿರುವ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಿತ್ತು. ಅಲ್ಲದೆ, 13 ತಾಪಂ ಪೈಕಿ 7 ಕ್ಷೇತ್ರಗಳಲ್ಲಿಯೂ ಜಯಭೇರಿ ಬಾರಿಸಿತ್ತು.

    ಸವಣೂರ ಹೋಬಳಿಯ 9 ಗ್ರಾ.ಪಂ.ಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದ್ದು, ಅವಿರೋಧ ಆಯ್ಕೆಗೆ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಮಂತ್ರೋಡಿ ಗ್ರಾ.ಪಂ. ವ್ಯಾಪ್ತಿಯ ಹೊಸನೀರಲಗಿ ಗ್ರಾಮದ ಮೂರು ವಾರ್ಡ್​ಗಳಿಗೆ ಬಿಜೆಪಿ ಬೆಂಬಲಿತರ ಅವಿರೋಧ ಆಯ್ಕೆಗೆ ತೀರ್ಮಾನ ಮಾಡಿರುವುದು ಕಾಂಗ್ರೆಸ್ಸಿಗರ ನಿದ್ದೆಗೆಡಿಸಿದೆ. ಹೊಸ ನೀರಲಗಿ ಗ್ರಾಮದಲ್ಲಿ ಕಳೆದ ನಾಲ್ಕು ಅವಧಿಯಿಂದಲೂ ಅವಿರೋಧ ಆಯ್ಕೆ ನಡೆಯುತ್ತ ಬಂದಿದ್ದು, ಈ ಬಾರಿಯೂ ಇದನ್ನೇ ಮುಂದುವರಿಸಲು ತೀರ್ವನಿಸಲಾಗಿದೆ. ಆದರೆ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಅವರ ಬೆಂಬಲಿಗರಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಇದು ಬಿಜೆಪಿ ನಾಯಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

    ಸೋಮಣ್ಣ ಬೇವಿನಮರದ ಹಾಗೂ ಶ್ರೀಕಾಂತ ದುಂಡಿಗೌಡ್ರ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಕೈ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ. ಇನ್ನೊಂದೆಡೆ ಕೆಪಿಸಿಸಿ ಸದಸ್ಯ ಷಣ್ಮುಖಪ್ಪ ಶಿವಳ್ಳಿ ಅವರು ಶಿಗ್ಗಾಂವಿ-ಸವಣೂರ ವಿಧಾನಸಭೆ ಕ್ಷೇತ್ರದ ಗ್ರಾಮ ಪಂಚಾಯಿತಿ ಚುನಾವಣೆ ನೇತೃತ್ವ ವಹಿಸುತ್ತಿರುವುದು ಸಂಚಲನ ಮೂಡಿಸಿದೆ. ಹುರಳೀಕುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ತನ್ನ ಬೆಂಬಲಿಗರ ಅವಿರೋಧ ಆಯ್ಕೆಗೆ ಕಸರತ್ತು ಮುಂದುವರಿಸಿದೆ.

    ನಾಮಪತ್ರ ಸಲ್ಲಿಕೆಗೆ ಡಿ. 16 ಕೊನೆ ದಿನವಾಗಿದೆ. ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಅವಿರೋಧವಾಗಿ ಆಯ್ಕೆಗೊಳ್ಳಲಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿ ಜಯ ಸಾಧಿಸುವ ಮೂಲಕ ಮುಂದಿನ ಜಿಪಂ, ತಾಪಂ ಹಾಗೂ ವಿಧಾನಸಭೆ ಚುನಾವಣೆಗಳ ಗೆಲುವಿಗೆ ಮುನ್ನುಡಿ ಬರೆಯಲಿದ್ದಾರೆ.
    | ಗಂಗಾಧರ ಬಾಣದ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ

    ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಬಿಜೆಪಿ ಪ್ರಮುಖರಾಗಿದ್ದ ಸೋಮಣ್ಣ ಬೇವಿನಮರದ, ಶ್ರೀಕಾಂತ ದುಂಡಿಗೌಡ್ರ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಮತ್ತಷ್ಟು ಬಲ ಬಂದಿದೆ. ಮಾಜಿ ಸಚಿವ ಬಸವರಾಜ ಶಿವಣ್ಣನವರ ಅವರು ಗ್ರಾಮ ಪಂಚಾಯಿತಿ ಚುನಾವಣೆ ನೇತೃತ್ವ ವಹಿಸಿರುವುದರಿಂದ ಪಕ್ಷದ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ವಿಶ್ವಾಸವಿದೆ.
    | ನಾಗಪ್ಪ ತಿಪ್ಪಕ್ಕನವರ, ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts