More

    ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ

    ತುರುವೇಕೆರೆ: ಎನ್‌ಡಿಎ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಬಿಜೆಪಿ ಮಾಜಿ ಶಾಸಕ ಮಸಾಲ ಜಯರಾಂ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರಲ್ಲದೆ, ದೊಡ್ಡ ಮಟ್ಟದ ಮುನ್ನಡೆ ಕೊಡಿಸುವ ಭರವಸೆಯಿತ್ತರು. ಈ ಸಂದರ್ಭದಲ್ಲಿ ಮಾತನಾಡಿದ ವಿ.ಸೋಮಣ್ಣ , ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ . ಮೊನ್ನೆೆ ಹುಬ್ಬಳ್ಳಿಯಲ್ಲಿ ಹಾಡುಹಗಲೇ ಹೆಣ್ಣುಮಗಳ ಮೇಲೆ ನಡೆದ ದಾಳಿಯೇ ಸಾಕ್ಷಿಯಾಗಿದ್ದು ಇದಕ್ಕೆ ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣ ಎಂದು ಹರಿಹಾಯ್ದರು.

    ತಾಲೂಕಿನ ಕಣತೂರು, ಅರೆಮಲ್ಲೆನಹಳ್ಳಿ, ತಂಡಗ, ಗೋಣಿತುಮಕೂರು, ಮುತ್ತುಗ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ರೋಡ್ ಶೋ ಮೂಲಕ ಮತಯಾಚಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ. ಇಂತಹ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ನಾವೆಲ್ಲಾ ಮೋದಿ ಕೈ ಬಲಪಡಿಸಬೇಕಿದೆ. ಹಾಗಾಗಿ, ಎಲ್ಲ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಹೋರಾಡಬೇಕು. ಪ್ರತಿ ಮನೆ ಮನಗೆ ತೆರಳಿ ಯಾವುದೇ ಗೊಂದಲ ಮಾಡಿಕೊಳ್ಳದೆ ಬಿಜೆಪಿಗೆ ಮತ ಹಾಕಿಸಿ. ಮೋದಿ ಕೈ ಬಲಪಡಿಸಲು ನನ್ನ ಗೆಲುವಿಗೆ ಸಂಕಲ್ಪ ತೊಡಿ ಎಂದರು.

    ನಾವು ಯಾವುದೇ ಜಾತಿ, ಮತ, ಪಂಥ ಮಾಡುವುದು ಬೇಡ. ಕಳೆದ ಬಾರಿ ದೇವೇಗೌಡರ ಸೋಲಿಗೆ ಕಾರಣರಾದವರಿಗೆ ತಕ್ಕ ಪಾಠ ಕಲಿಸುವ ಸಮಯ ಒದಗಿಬಂದಿದೆ. ಬಲಿಷ್ಟ ದೇಶಕ್ಕಾಗಿ ಪ್ರಧಾನಿ ಮೋದಿಜಿ ಜತೆ ಮಾಜಿ ಪ್ರಧಾನಿ ದೇವೇಗೌಡರು ಈ ಚುನಾವಣೆಯಲ್ಲಿ ಒಮ್ಮತದ ತೀರ್ಮಾನಕೈಗೊಂಡು ವಿ.ಸೋಮಣ್ಣರನ್ನು ಕಣಕ್ಕಿಳಿಸಿದ್ದಾರೆ. ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗಬಲ್ಲ ಸಮರ್ಥ ನಾಯಕ ಸೋಮಣ್ಣಗೆ ಕ್ಷೇತ್ರದ ಜನರು ಹೆಚ್ಚಿನ ಮುನ್ನಡೆ ಕೊಡಬೇಕು ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿದರು.

    ದೇಶದ ಪ್ರತಿಯೊಬ್ಬರಿಗೂ ಸೋಲಾರ್ ಫ್ರೀ ಕರೆಂಟ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಣೆ ಮಾಡಿದ್ದು ಈ ಬಾರಿ ತಾವೆಲ್ಲಾ ಮೈತ್ರಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಮೂಲಕ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು. ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಲು ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ಯೊಂದಿಗೆ ಕೈಜೋಡಿಸಿದ್ದು ತಾಲೂಕಿನ ಜನತೆ ಮೈತ್ರಿ ಅಭ್ಯರ್ಥಿ ಬಿಜೆಪಿಯ ವಿ.ಸೋಮಣ್ಣರನ್ನು ಆಶೀರ್ವದಿಸುವ ಮೂಲಕ ದೇಶಕ್ಕಾಗಿ ನಾವೆಲ್ಲ ಒಂದಾಗಿ ಹೋರಾಟ ಮಾಡಬೇಕಿದೆ. ವಿ.ಸೋಮಣ್ಣರನ್ನು ಸುಮಾರು 70ರಿಂದ 80ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನಮಗಿದೆ. ಆ ನಿಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಬಿಜೆಪಿ ಪರವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

    ಮನೆಯಲ್ಲಿ ಮಲಗುವುದು ಬೇಡ: ನಮ್ಮ ಅಭ್ಯರ್ಥಿ ವಿ.ಸೋಮಣ್ಣ ಅತ್ಯಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ನಮ್ಮಲ್ಲಿ ಮೂಡಿದೆ. ಹಾಗಂತ ಮನೆಯಲ್ಲಿ ಮಲಗದೆ ಪ್ರತಿ ಮನೆ ಮನೆಗೆ ಕರಪತ್ರ ಹಂಚುವ ಮೂಲಕ ಕಾರ್ಯಕರ್ತರು ಹೋರಾಟ ಮಾಡಬೇಕಿದೆ. ಈ ಚುನಾವಣೆಯಲ್ಲಿ ಎಲ್ಲರೂ ಮತದಾನದಿಂದ ದೂರ ಉಳಿಯದೆ ಬಿಜೆಪಿಗೆ ಮತ ಹಾಕಿ ಸೋಮಣ್ಣರನ್ನು ಗೆಲ್ಲಿಸಿ ಎಂದ ಬಿಜೆಪಿ ಮಾಜಿ ಶಾಸಕ ಮಸಾಲ ಜಯರಾಂ ಹೇಳಿದರು.

    ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ಡಿ ಲಕ್ಷ್ಮೀನಾರಾಯಣ್, ಎಚ್.ಬಿ.ನಂಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಚೌದ್ರಿ ಟಿ.ರಂಗಪ್ಪ, ಬಿಜೆಪಿ ಅಧ್ಯಕ್ಷ ಮುತ್ತಣ್ಣ, ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಕೊಂಡಜ್ಜಿವಿಶ್ವನಾಥ್, ದೊಡ್ಡಾಘಟ್ಟ ಚಂದ್ರೇಶ್, ಮುಖಂಡರಾದ ರಮೇಶ್‌ಗೌಡ, ದುಂಡಾ ರೇಣುಕಯ್ಯ, ಮಾವಿನಕೆರೆ ವಿಜಿ, ಹೇಮಚಂದ್ರು, ಡಿ.ಆರ್.ಬಸವರಾಜು, ಎ.ಬಿ.ಜಗದೀಶ್, ಸ್ವಾಮಿ, ತ್ಯಾಗಣ್ಣ, ಫರ್ಟಿಲೈಸರ್‌ರಂಗನಾಥ್, ಕಣತೂರು ಪ್ರಸನ್ನ, ಬಾಬು, ಜಗದೀಶ್ ಸೇರಿದಂತೆ ಬಿಜೆಪಿ, ಜೆಡಿಎಸ್ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಕಾಂಗ್ರೆಸ್ ಕೊಡುಗೆ ಶೂನ್ಯ
    ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯ. ಎಂ.ಟಿ.ಕೃಷ್ಣಪ್ಪಣ್ಣ ಮತ್ತು ನಾನು ಶಾಸಕರಾಗಿ ಈ ಭಾಗದ ಗ್ರಾಮೀಣ ರಸ್ತೆಗಳು, ಏತನೀರಾವರಿ, ಕೆರೆ ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ. ಹಾಗಾಗಿ, ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷಗಳು ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣರನ್ನು ಗೆಲ್ಲಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸೋಣ ಎಂದು ಮಸಾಲ ಜಯರಾಂ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts