More

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸೀಟು ಗೆಲ್ಲಬಹುದು: ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಹೀಗೇಕೆ ಹೇಳಿದ್ದು?

    ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು…

    ಸದ್ಯ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೀಗೆಂದು ಹೇಳಿದ್ದಾರೆ.

    ಸ್ಯಾಮ್ ಪಿತ್ರೋಡಾ ಎಂದೇ ಕರೆಯಲ್ಪಡುವ ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ ಅವರು ಸಂಶೋಧಕ, ದೂರಸಂಪರ್ಕ ಇಂಜಿನಿಯರ್ ಮತ್ತು ಉದ್ಯಮಿ. ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರಿಗೆ ಸಲಹೆಗಾರರಾಗಿದ್ದರು. ಭಾರತ ದೂರಸಂಪರ್ಕ ಕ್ರಾಂತಿಯ ಪಿತಾಮಹ ಎಂದೂ ಅವರನ್ನು ಗುರುತಿಸಲಾಗುತ್ತದೆ.

    ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮತದಾನಕ್ಕೆ ಬಳಸುವ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇವಿಎಂಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸದಿದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಅವರು ಹೇಳಿದ್ದಾರೆ.

    ಈ ಚುನಾವಣೆಯು ಭಾರತದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದೂ ಅವರು ಹೇಳಿದ್ದಾರೆ.

    ಚುನಾವಣಾ ಆಯೋಗವು ಯಾವಾಗಲೂ ಇವಿಎಂಗಳ ಕುರಿತ ಭೀತಿಯನ್ನು ತಳ್ಳಿಹಾಕುತ್ತದೆ. ಯಾವುದೇ ಅನುಮಾನಗಳನ್ನು ನಿವಾರಿಸಲು ಹ್ಯಾಕಥಾನ್‌ಗಳನ್ನು ಸಹ ನಡೆಸುತ್ತಿದೆ, ಆದರೆ, ಕಾಂಗ್ರೆಸ್ ಸೇರಿದಂತೆ ಕೆಲವು ವಿರೋಧ ಪಕ್ಷದ ನಾಯಕರು ಇವಿಎಂಗಳನ್ನು ತಿರುಚಬಹುದಾಗಿದೆ ಎಂಬ ವಿಷಯವನ್ನು ಪದೇಪದೆ ಎತ್ತಿವೆ..

    ಇತ್ತೀಚಿನ ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್​ ಪಕ್ಷವು ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ನಂತರವೂ ಕಾಂಗ್ರೆಸ್​ನ ಕೆಲವರು ಈ ಯಂತ್ರಗಳನ್ನು ತಾವು ನಂಬುತ್ತೇವೆ ಎಂದು ಪ್ರತಿಪಾದಿಸಿದ್ದಾರೆ. ಆದರೂ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು 100 ಪರ್ಸೆಂಟ್ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ- ವಿವಿಪ್ಯಾಟ್) ಮತ್ತು ಸ್ಲಿಪ್‌ಗಳನ್ನು ಬಾಕ್ಸ್‌ಗಳಲ್ಲಿ ಬೀಳುವಂತೆ ಮಾಡುವ ಬದಲು ಮತದಾರರಿಗೆ ನೀಡಬೇಕು ಎಂದು ಒತ್ತಾಯಿಸುತ್ತಿವೆ.

    ಅಯೋಧ್ಯೆಯಲ್ಲಿನ ರಾಮ ಮಂದಿರದ ಕುರಿತು ತಮ್ಮ ಇತ್ತೀಚಿನ ಹೇಳಿಕೆಗಳನ್ನು “ತಿರುಚಲಾಗಿದೆ” ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಧರ್ಮವು ವೈಯಕ್ತಿಕ ವಿಷಯವಾಗಿದ್ದು, ಇದನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ, ಇಡೀ ದೇಶವೇ ರಾಮ ಮಂದಿರದ ಮೇಲೆ ನೇತಾಡುತ್ತಿರುವುದು ತಮಗೆ ಬೇಸರ ತಂದಿದೆ ಎಂದು ಅವರು ಹೇಳಿದ್ದರೆಂದು ವರದಿಯಾಗಿತ್ತು.

    ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ಕಳವಳ ವ್ಯಕ್ತಪಡಿಸಿದ ಪಿತ್ರೋಡಾ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರ ಅಧ್ಯಕ್ಷತೆಯಲ್ಲಿ ‘ದಿ ಸಿಟಿಜನ್ಸ್ ಕಮಿಷನ್ ಆನ್ ಎಲೆಕ್ಷನ್ಸ್’ ಎಂಬ ಎನ್‌ಜಿಒ ವರದಿಯನ್ನು ಉಲ್ಲೇಖಿಸಿದರು. ಇವಿಎಂನ ಪ್ರಸ್ತುತ ವಿನ್ಯಾಸವನ್ನು ಮಾರ್ಪಡಿಸುವುದು ವರದಿಯ ಮುಖ್ಯ ಶಿಫಾರಸಾಗಿದೆ ಎಂದು ಅವರು ಹೇಳಿದರು. ವಿವಿ ಪ್ಯಾಟ್​ ವ್ಯವಸ್ಥೆಯನ್ನು ನಿಜವಾಗಿಯೂ ಮತದಾರರು ಪರಿಶೀಲಿಸುವಂತೆ ಮಾಡಬೇಕು ಎಂದರು.

    “ಈ ವರದಿಯ ಆಧಾರದ ಮೇಲೆ ನಂಬಿಕೆಯ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಈ ನಂಬಿಕೆಯನ್ನು ಮರುನಿರ್ಮಾಣ ಮಾಡಲು ಚುನಾವಣಾ ಆಯೋಗವು ಪ್ರತಿಕ್ರಿಯಿಸಬೇಕು” ಎಂದು ಅವರು ಹೇಳಿದರು.

    ಪ್ರಜಾಪ್ರಭುತ್ವ ಹಳಿತಪ್ಪಿದೆ. ನಾವು ತುಂಬಾ ಸರ್ವಾಧಿಕಾರಿಗಳಾಗುತ್ತಿದ್ದೇವೆ. ಇದೆಲ್ಲವೂ ಒನ್ ಮ್ಯಾನ್ ಶೋ ಎಂದು ಅವರು ಹೇಳಿದರು.

    ಸಾರ್ವತ್ರಿಕ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಅವರು ಅದನ್ನು ಮಾಡಬಹುದು ಎಂದು ಅವರು ಭಾವಿಸಿದರೆ ಅವರಿಗೆ ಹೆಚ್ಚಿನ ಶಕ್ತಿ ಇರಬಹುದು. ಇದನ್ನು ದೇಶವೇ ನಿರ್ಧರಿಸುತ್ತದೆ. ಮೊದಲು ಇವಿಎಂ ಸರಿಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ಇವಿಎಂ ಸರಿಪಡಿಸದಿದ್ದರೆ 400 ನಿಜವಾಗಬಹುದು. ಇವಿಎಂ ಸರಿಪಡಿಸದಿದ್ದರೆ 400 ನಿಜವಾಗದಿರಬಹುದು” ಎಂದರು.

    ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೈಗೊಳ್ಳುತ್ತಿರುವ ಮಣಿಪುರದಿಂದ ಮುಂಬೈಗೆ ಭಾರತ್ ನ್ಯಾಯ್ ಯಾತ್ರೆ ಕುರಿತು ಮಾತನಾಡಿದ ಪಿತ್ರೋಡಾ ಅವರು, “ಮುಂದಿನ ಚುನಾವಣೆಯು ಭಾರತದ ಭವಿಷ್ಯದ ಬಗ್ಗೆ ಹಾಗೂ ನಾವು ಯಾವ ರೀತಿಯ ರಾಷ್ಟ್ರವನ್ನು ನಿರ್ಮಿಸಲು ಬಯಸುತ್ತೇವೆ” ಎಂಬುದನ್ನು ನಿರ್ಧರಿಸಲಿದೆ ಎಂದರು.

    “ಎಲ್ಲಾ ಧರ್ಮಗಳನ್ನು ಗೌರವಿಸುವ, ನಮ್ಮ ಸಂಸ್ಥೆಗಳ ಸ್ವಾಯತ್ತತೆ, ನಮ್ಮ ನಾಗರಿಕ ಸಮಾಜವು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ರಾಷ್ಟ್ರವನ್ನು ನಿರ್ಮಿಸಲು ನೀವು ಬಯಸುತ್ತೀರಾ ಅಥವಾ ಒಂದು ಧರ್ಮದ ಪ್ರಾಬಲ್ಯದ ಆಧಾರದ ಮೇಲೆ ರಾಷ್ಟ್ರವನ್ನು ನಿರ್ಮಿಸಲು ಬಯಸುವಿರಾ?” ಎಂದು ಅವರು ಪ್ರಶ್ನಿಸಿದರು.

    “ಒಟ್ಟಾರೆಯಾಗಿ, ಯಾರನ್ನೂ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ ಎಂದು ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ. ಇಂತಹ ಒಕ್ಕೂಟದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇರುತ್ತವೆ. ಇದೇ ಒಕ್ಕೂಟದ ಸೌಂದರ್ಯ” ಎಂದು ಪಿತ್ರೋಡಾ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts