More

    ರಾಣೆಬೆನ್ನೂರ ನಗರಸಭೆಯಲ್ಲಿ ಬಿಜೆಪಿ ಆಡಳಿತ

    ರಾಣೆಬೆನ್ನೂರ: ಇಲ್ಲಿಯ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯೆ ರೂಪಾ ಚಿನ್ನಿಕಟ್ಟಿ ಅಧ್ಯಕ್ಷೆಯಾಗಿ ಹಾಗೂ ಕಸ್ತೂರಿ ಚಿಕ್ಕಬಿದರಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ನಗರಸಭೆಯಲ್ಲಿ ಕಮಲ ಅರಳಿಸಿದರು.

    ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ರೂಪಾ ಚಿನ್ನಿಕಟ್ಟಿ ಹಾಗೂ ಕಾಂಗ್ರೆಸ್​ನಿಂದ ಚಂಪಕ ಬಿಸಲಹಳ್ಳಿ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕಸ್ತೂರಿ ಚಿಕ್ಕಬಿದರಿ ಹಾಗೂ ಕಾಂಗ್ರೆಸ್​ನಿಂದ ನೀಲಮ್ಮ ಮಾಕನೂರ ಸ್ಪರ್ಧಿಸಿದ್ದರು.

    ಚುನಾವಣೆ ಪ್ರಕ್ರಿಯೆಯಲ್ಲಿ ಸಂಸದ, ವಿಪ ಸದಸ್ಯ ಹಾಗೂ ಶಾಸಕರ ಮೂರು ಮತ ಸೇರಿ ಬಿಜೆಪಿಗೆ 28 ಮತಗಳು ಹಾಗೂ 9 ಸದಸ್ಯರ ಬಲ ಹೊಂದಿದ ಕಾಂಗ್ರೆಸ್​ಗೆ ಕೆಪಿಜೆಪಿಯ ಒಂದು ಮತ ಸೇರಿ 10 ಮತಗಳು ಬಂದವು.

    ಹೀಗಾಗಿ ನಗರಸಭೆ ಅಧಿಕಾರದ ಗದ್ದುಗೆ ಸಲೀಸಾಗಿ ಬಿಜೆಪಿ ಪಾಲಾಯಿತು.

    ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ದೀಲಿಪ್ ಶಶಿ ಹಾಗೂ ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ನಗರಸಭೆಯಲ್ಲಿ ಬಿಜೆಪಿ ಆಡಳಿತ ಬಂದಿದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಜಾರಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

    ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕೆಲವರು ಬಿಜೆಪಿ ಒಡೆದ ಮನೆಯಾಗಿದೆ ಎನ್ನುತ್ತಿದ್ದರು. ಆದರೆ, ನಗರಸಭೆಯಲ್ಲಿ ಕೆಪಿಜೆಪಿ ಹಾಗೂ ಬಿಜೆಪಿಯ ಎಲ್ಲ ಸದಸ್ಯರು ಒಂದುಗೂಡಿ ಅಧಿಕಾರಕ್ಕೆ ಬಂದಿದ್ದಾರೆ. ಮುಂದಿನ ದಿನದಲ್ಲಿ ನಗರಸಭೆಯನ್ನು ರಾಜ್ಯದಲ್ಲಿಯೇ ಮಾದರಿ ಮಾಡಲಾಗುವುದು ಎಂದರು.

    ವಿಪ ಸದಸ್ಯ ಆರ್. ಶಂಕರ, ಪ್ರಮುಖರಾದ ಪ್ರಕಾಶ ಬುರಡಿಕಟ್ಟಿ, ಬಸವರಾಜ ಕೇಲಗಾರ, ಚೋಳಪ್ಪ ಕಸವಾಳ, ದೀಪಕ ಹರಪನಹಳ್ಳಿ, ಪ್ರಕಾಶ ಪೂಜಾರ, ಮಲ್ಲಣ್ಣ ಅಂಗಡಿ, ಪಾಂಡುರಂಗ ಗಂಗಾವತಿ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ಪ್ರಭಾವತಿ ತಿಳವಳ್ಳಿ, ಮಂಜುನಾಥ ಓಲೇಕಾರ ಮತ್ತಿತರರು ಪಾಲ್ಗೊಂಡಿದ್ದರು.

    ಪಟಾಕಿ ಸಿಡಿಸಿ ಸಂಭ್ರಮ: ನಗರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನಗರಸಭೆ ಎದುರಿನ ಮುಖ್ಯರಸ್ತೆಯಲ್ಲಿ ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪರ ಘೊಷಣೆ ಕೂಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts