ಬಿಟ್ ಕಾಯಿನ್ ಪ್ರಕರಣ: ಎಸ್ಐಟಿ ಮುಖ್ಯಸ್ಥರು, ಎಸ್​​ಪಿಗಳ ಜೊತೆ ಸಿಐಡಿ ಡಿಜಿಪಿ ಸಲೀಂ ಸಭೆ

bitcoin fraud
Published on


ಬೆಂಗಳೂರು: ಬಿಟ್ ಕಾಯಿನ್ (ಬಿಟಿಸಿ) ಪ್ರಕರಣಕ್ಕೆ ಮತ್ತೆ ಜೀವ ನೀಡಿರುವ ಕಾಂಗ್ರೆಸ್‌ ಸರ್ಕಾರ, ಬಹುಕೋಟಿ ಹಗರಣದ ತನಿಖೆಗೆ ಎಡಿಜಿಪಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ. ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಇತರರ ವಿರುದ್ಧ ಕಾಟನ್‌ ಪೇಟೆ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್‌ ಆಕ್ರಮ ಪ್ರಕರಣವನ್ನು ಎಸ್‌ಐಟಿ ಮತ್ತೆ ಭೇದಿಸಲಿದೆ. ಈ ಹಿಂದೆ ಹಗರಣದ ಕುರಿತು ಸಿಸಿಬಿ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಆದರೆ ಶ್ರೀಕಿ ಸ್ನೇಹಿತರು, ಉದ್ಯಮಿಗಳು, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇತರರು ಬಿಟ್ ಕಾಯಿನ್ ಹಣವನ್ನು ತಮ್ಮದಾಗಿಸಿಕೊಂಡಿರುವ ಅನುಮಾನ ಹೆಚ್ಚಿದೆ. ಇದೇ ಕಾರಣಕ್ಕೆ ಇದೀಗ ಎಸ್‌ಐಟಿ ರಚನೆ ಮಾಡಲಾಗಿದೆ.

ಇಂದು ಸಂಜೆ ಸಭೆ
ಸಿಐಡಿ ಎಡಿಜಿಪಿ ಮನೀಶ್ ಬರ್ಡೀಕರ್ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಡಿಐಜಿ ಡಾ.ಕೆ.ವಂಶಿಕೃಷ್ಣ, ಡಿಸಿಪಿ ಡಾ.ಅನೂಪ್‌ ಎ. ಶೆಟ್ಟಿ ಹಾಗೂ ಸಿಐಡಿ ಎಸ್ಪಿ ಶರತ್‌ ತಂಡದಲ್ಲಿ ಸದಸ್ಯರಾಗಿದ್ದಾರೆ. ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ಎಸ್ಐಟಿ ರಚನೆಯಾದ ಹಿನ್ನೆಲೆಯಲ್ಲಿ ಎಸ್ಐಟಿ ತಂಡದ ಅಧಿಕಾರಿಗಳ ಜೊತೆ ಸಿಐಡಿ ಡಿಜಿಪಿ ಸಲೀಂ ಇಂದು ಸಂಜೆ ಸಭೆ ನಡೆಸಲಿದ್ದಾರೆ. ಎಸ್ಐಟಿ ಮುಖ್ಯಸ್ಥ ಮನೀಶ್ ಖರ್ಬೀಕರ್ ಹಾಗೂ ಎಸ್ಪಿಗಳ ಜೊತೆ ಸಭೆ ನಡೆಯಲಿದ್ದು, ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. ಸಭೆ ನಡೆಸಿದ ನಂತರ ತನಿಖೆ ವಿಧಾನ, ಆಯಾಮಗಳ ಬಗ್ಗೆ ಚರ್ಚೆಯಾಗಲಿದೆ. ಜೊತೆಗೆ ಎಸ್ಐಟಿಯಲ್ಲಿ ಯಾವೆಲ್ಲಾ ಇನ್ಸ್‌ಪೆಕ್ಟರ್, ಸಿಬ್ಬಂದಿ ಇರಬೇಕು ಎಂಬ ಬಗ್ಗೆ ಚರ್ಚೆಯಾಗಲಿದೆ. ಜೊತೆಗೆ ಸೈಬರ್ ಕ್ರೈಂ ತಜ್ಞ ಪೊಲೀಸರು, ಎಫ್ಎಸ್ಎಲ್ ತಜ್ಞರು, ಟೆಕ್ನಿಕಲ್ ನಾಲ್ಡೆಜ್ ಸಿಬ್ಬಂದಿ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.

ನ್ಯಾಯಾಲಯದ ಅನುಮತಿ ನಂತರ ತನಿಖೆ
ಬಿಟ್ ಕಾಯಿನ್ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮರು ತನಿಖೆ ನಡೆಸಲು ನಿರ್ಧಾರ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಬಳಿಕ ಸಿಸಿಬಿಯಿಂದ ಕೇಸ್ ಫೈಲ್ ಅನ್ನು ಎಸ್ಐಟಿ ಪಡೆಯಲಿದೆ. ಸಿಸಿಬಿ ತನಿಖಾ ವರದಿ, ಎವಿಡೆನ್ಸ್, ಆರೋಪಿ ಮತ್ತು ಸಾಕ್ಷಿಗಳ ಹೇಳಿಕೆ ಪಡೆದು ಪರಿಶೀಲನೆ ನಡೆಸಲಾಗುತ್ತದೆ. ನಂತರ ಬಿಟ್ ಕಾಯಿನ್ ಪ್ರಕರಣದ ಮರು ತನಿಖೆಯನ್ನು ಎಸ್ಐಟಿ ನಡೆಸಲಿದ್ದು, ಶೀಘ್ರದಲ್ಲೇ ಸಿಸಿಬಿ ತನಿಖಾ ವರದಿ ಪಡೆದು ಪರಿಶೀಲನೆ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net