More

    ಗೌರವಧನ ಹೆಚ್ಚಳಕ್ಕೆ ಬಿಸಿಯೂಟ ಕಾರ್ಯಕರ್ತೆಯರ ಒತ್ತಾಯ

    ಬಳ್ಳಾರಿ : ಬಿಸಿಯೂಟ ನೌಕರರಿಗೆ ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಸಂಘದ ವತಿಯಿಂದ ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

    ಸಂಘದ ರಾಜ್ಯಾಧ್ಯಕ್ಷೆ ಎ.ಶಾಂತಾ ಮಾತನಾಡಿ, ಬಿಸಿಯೂಟ ನೌಕರರು ಬಹುತೇಕ ಬಡ ಕುಟುಂಬಗಳಿಂದ ಬಂದವರು, ಒಂಟಿ ಮಹಿಳೆಯರು, ವಿಧವೆಯರು ಕೆಲಸ ಮಾಡುತ್ತಿದ್ದಾರೆ. ಗೌರವ ಧನವನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಅವರಿಗೆ ದೊರೆಯುತ್ತಿರುವ ಗೌರವ ಧನ ಕೇವಲ 3600 ರೂ. ಇಂದಿನ ದುಬಾರಿ ದಿನಗಳಲ್ಲಿ ಪ್ರಸಕ್ತ ನೀಡುತ್ತಿರುವ ಗೌರವಧನದಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದರು.

    ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಒಂದು ಸಾವಿರ ರೂ. ಹೆಚ್ಚಿಸುವ ಭರವಸೆ ನೀಡಿದ್ದರೂ, ಅದನ್ನು ಕಾರ್ಯಗತಗೊಳಿಸಲಿಲ್ಲ. ಬಿಸಿಯೂಟ ನೌಕರರಿಗೆ ಮೋಸ ಮಾಡಿತು. ಈಗಿನ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಬಿಸಿಯೂಟ ನೌಕರರಿಗೆ 6 ಸಾವಿರ ರೂ.ಹೆಚ್ಚಿಸುವ ಭರವಸೆ ನೀಡಿದೆ. ಈ ಭರವಸೆ ಕೇವಲ ಭರವಸೆ ಆಗಿ ಉಳಿಸದೆ, ಬರುವ ಬಜೆಟ್‌ನಲ್ಲಿ ಹೆಚ್ಚಿಸಬೇಕೆಂದು ಆಗ್ರಹಿಸಿದರು.

    ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್.ಎನ್ ಮಾತನಾಡಿ, ಅಪೌಷ್ಟಿಕತೆಯನ್ನು ನೀಗಿಸಿ ಭವಿಷ್ಯದ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಬಿಸಿಯೂಟ ನೌಕರರ ಮಕ್ಕಳಿಗೆ ಮಾತ್ರ ಶಿಕ್ಷಣ, ಆರೋಗ್ಯ, ಭವಿಷ್ಯಗಳು ಮಂಕಾಗಿವೆ. ಕಾನೂನಾತ್ಮಕವಾಗಿ ಮಧ್ಯಾಹ್ನದ ಬಿಸಿಯೂಟ ಜಾರಿಯಲ್ಲಿದ್ದು ಇದು ನಿರಂತರವಾಗಿ ಇರುವಂತದ್ದಾದ್ದರಿಂದ ಅವರನ್ನು ಸರ್ಕಾರಿ ನೌಕರರನ್ನಾಗಿ ನೇಮಿಸಿಕೊಳ್ಳಬೇಕು, ಅವರ ಹುದ್ದೆಯನ್ನು ಕಾಯಂಗೊಳಿಸಬೇಕು, ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ,ಆರೋಗ್ಯ ರಕ್ಷಣೆ, ಇಪಿಎಫ್, ಇಎಸ್‌ಐ, ನಿವೃತ್ತಿಯ ಪಿಂಚಣಿ, ಹೆರಿಗೆ ರಜೆ, ಗುರುತಿನ ಚೀಟಿ ಇತ್ಯಾದಿ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

    ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಈ ಬಾರಿಯ ಬಜೆಟ್‌ನಲ್ಲಿ ಮಾಸಿಕ ಗೌರವಧನವನ್ನು 6 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಬಿಸಿಯೂಟ ಕಾರ್ಯಕರ್ತೆಯರಿಗೆ ವರ್ಷದಲ್ಲಿ 12 ತಿಂಗಳು ಗೌರವಧನ ನೀಡಬೇಕು. ಬಾಕಿ ಉಳಿದಿರುವ ಗೌರವಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಮಧ್ಯಾಹ್ನದ ಬಿಸಿ ಊಟದ ಅಡುಗೆ ತಯಾರು ಮಾಡುವ ಮುಖ್ಯ ಅಡುಗೆಯವರು, ಅಡುಗೆ ಸಹಾಯಕರನ್ನು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕನಿಷ್ಟ ವೇತನ ಕಾಯ್ದೆಯ ಅನ್ವಯ ಶೆಡ್ಯೂಲ್ ನಲ್ಲಿ ತಂದು ಆ ಹುದ್ದೆಗೆ ನಿಗದಿಪಡಿಸಿರುವಷ್ಟು ಮಾಸಿಕ ವೇತನ ,ಇಪಿಎಫ್ ,ಇಎಸ್‌ಐ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

    ಶಾಸನಬದ್ಧ ಸೌಕರ್ಯಗಳಾದ ವಾರದ ರಜೆ, ರಾಷ್ಟ್ರೀಯ ಹಬ್ಬದ ರಜೆ, ಹೆರಿಗೆ ರಜೆಗಳನ್ನು ನೀಡಬೇಕು. ರಜಾ ದಿನಗಳಲ್ಲಿ ಕೆಲಸ ಮಾಡಿದವರಿಗೆ ದುಪ್ಪಟ್ಟು ವೇತನ ನೀಡಬೇಕು. ಮಾಸಿಕ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಬ್ಯಾಂಕ್ ಖಾತೆಗೆ ಪಾವತಿ ಮಾಡಬೇಕು. ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು. ಸುರಕ್ಷಿತ ನಿವೃತ್ತಿ ಬದುಕು ಖಾತ್ರಿಪಡಿಸುವುದಕ್ಕಾಗಿ ನಿವೃತ್ತಿ ವೇತನಕ್ಕೆ ಒಳಪಡಿಸಿ, ಅಲ್ಲಿಯವರೆಗೆ 5 ಲಕ್ಷ ರೂ. ಇಡುಗಂಟು ನೀಡಬೇಕು ಮತ್ತು ಜೀವ ವಿಮೆಗೆ ಒಳಪಡಿಸಿ ಇಲಾಖೆಯಿಂದ ಪ್ರೀಮಿಯಂ ಪಾವತಿಸಬೇಕು ಎಂದು ಒತ್ತಾಯಿಸಿದರು.

    ಅಕ್ಷರದಾಸೋಹ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಸಂಧ್ಯಾ ಪಿ.ಎಸ್, ನಾಗರತ್ನಾ ಬ್ಯಾಲಿಚಿಂತೆ ಹಾಗೂ ಬಿಸಿಯೂಟ ಕಾರ್ಯಕರ್ತೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts