More

    ವಿಜೃಂಭಣೆಯ ಗುಳ್ಳಮ್ಮ ದೇವಿರಥೋತ್ಸವ

    ಬೀರೂರು: ದೊಡ್ಡಘಟ್ಟ ಗ್ರಾಮದ ಶ್ರೀ ಗುಳ್ಳಮ್ಮ ದೇವಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಮಂಗಳವಾರ ಆರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿ ಮನೆಗೆ ಗುಳ್ಳಮ್ಮ ದೇವಿಯನ್ನು ಉತ್ಸವದಲ್ಲಿ ಕರೆದೊಯ್ದು ಮಡಿಲುಅಕ್ಕಿ ಹಾಗೂ ಹಣ್ಣುಕಾಯಿ ಪೂಜೆ ನಂತರ ವಾದ್ಯಗೋಷ್ಠಿಗಳೊಂದಿಗೆ ಮೂಲಸ್ಥಾನಕ್ಕೆ ಕರೆತರಲಾಯಿತು.
    ಮಧ್ಯಾಹ್ನ ಮಹಿಳೆಯರು ಮತ್ತು ಯುವತಿಯರು ಗುಗ್ಗಳ ಸೇವೆ ಸಲ್ಲಿಸಿ ಹರಕೆ ತೀರಿಸಿದರು. ಸಂಜೆ ಪುಂಡನಹಳ್ಳಿ ಮತ್ತು ಬಿ.ಕಾರೇಹಳ್ಳಿ ಅಂತರಘಟ್ಟಮ್ಮದೇವಿ ಅಮ್ಮನವರನ್ನು ಆಹ್ವಾನಿಸಲಾಯಿತು. ರಾತ್ರಿ ಮೂವರೂ ದೇವತೆಗಳನ್ನು ವಾದ್ಯಗೋಷ್ಠಿಗಳೊಂದಿಗೆ ಗ್ರಾಮದಲ್ಲಿ ಉತ್ಸವ ನಡೆಸಲಾಯಿತು. ದೇವಿಗೆ ಹರಕೆ ಹೊತ್ತ ಗ್ರಾಮದ ಬಹಳಷ್ಟು ಕುಟುಂಬಗಳು ಕುರಿ, ಟಗರು, ಮೇಕೆ, ಕೋಳಿಗಳನ್ನು ಅಮ್ಮನಿಗೆ ಬಲಿ ನೀಡಿ ವಿವಿಧ ಖಾದ್ಯಗಳನ್ನು ತಯಾರಿಸಿ ಬಂದಂತಹ ನೆಂಟರು, ಬಂಧುಗಳಿಗೆ ಉಣಬಡಿಸಿದರು.
    ಬುಧವಾರ ಬೆಳಗ್ಗೆ ಪುಷ್ಪಾಲಂಕಾರ ಹಾಗೂ ತಳಿರುತೋರಣಗಳಿಂದ ಕೂಡಿದ ರಥದಲ್ಲಿ ಶ್ರೀ ಅಮ್ಮನವರನ್ನು ಪ್ರತಿಷ್ಠಾಪಿಸಿ ತೆಂಗಿನ ಕಾಯಿಯನ್ನು ರಥದ ಚಕ್ರಕ್ಕೆ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಜನ, ಜಾನುವಾರುಗಳಿಗೆ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದ ಅಮ್ಮನ ಹೆಸರಲ್ಲಿ ಪಾನಕದ ಬಂಡಿಗಳನ್ನು ಓಡಿಸಲಾಯಿತು. ಸಂಜೆ ಹೊಳೆಪೂಜೆ ಹಾಗೂ ಓಕುಳಿಯೊಂದಿಗೆ ರಥೋತ್ಸವ ಸಂಪನ್ನಗೊಂಡಿತು. ಸುತ್ತಮುತ್ತಲ ಗ್ರಾಮಗಳಾದ ಜೋಡಿತಿಮ್ಮಾಪುರ, ಹೋರಿತಿಮ್ಮನಹಳ್ಳಿ, ಬಿ.ಕಾರೇಹಳ್ಳಿ, ಪುಂಡನಹಳ್ಳಿ, ಕುಡ್ಲೂರು ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts