More

    ಪುತ್ತೂರಿನಲ್ಲಿ ಬಯೋಗ್ಯಾಸ್ ಉತ್ಪಾದನೆ

    ಶ್ರವಣ್‌ಕುಮಾರ್ ನಾಳ ಪುತ್ತೂರು

    ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ಸಂಸ್ಕರಣೆಗೈದು ಪೆಟ್ರೋಲಿಯಂ ಅನಿಲಕ್ಕೆ ಪರ್ಯಾಯವಾಗಿ ಬಯೋಗ್ಯಾಸ್ ಉತ್ಪಾದಿಸುವ ಯೋಜನೆ ಪುತ್ತೂರಿನಲ್ಲಿ ಅನುಷ್ಠಾನಿಸಲು ಸಿದ್ಧತೆ ನಡೆದಿದೆ.

    ನಗರದ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ರೋಟರಿ ಕ್ಲಬ್ ಪುತ್ತೂರು ಪೂರ್ವ ನೇತೃತ್ವದಲ್ಲಿ ಬೆಂಗಳೂರಿನ ಸೈನೋಡ್ ಬಯೋ ಸೈನ್ಸ್ ಕಂಪನಿ ಸಲಹೆಯಡಿ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಕಾರ್ಯಗತಗೊಳಿಸುವ ಪ್ರಸ್ತಾವಕ್ಕೆ ನಗರಸಭೆ ಕೌನ್ಸಿಲ್ ಒಪ್ಪಿಗೆ ನೀಡಿದ್ದು, ಅನುಮೋದನೆಗಾಗಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗಿದೆ.

    ರಾಜ್ಯದಲ್ಲಿ ದೊಡ್ಡಬಳ್ಳಾಪುರದಲ್ಲಿ ಬಯೋಗ್ಯಾಸ್ ಉತ್ಪಾದನಾ ಘಟಕವಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ರಾಜ್ಯದ ಎರಡನೇ ಘಟಕ ಪುತ್ತೂರಿನಲ್ಲಿ ತಲೆಯೆತ್ತಲಿದೆ. ಮೊದಲಿಗೆ ಘನತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಿ ಅದನ್ನು ಇಂಧನವಾಗಿ ಬಳಸುವುದು, ಕ್ರಮೇಣ ಹಲವು ರೀತಿ ತ್ಯಾಜ್ಯ ಸಂಸ್ಕರಿಸಿ ಉತ್ಪಾದಿಸುವುದು ಇಲ್ಲಿನ ಉದ್ದೇಶ.

    4.15 ಕೋಟಿ ರೂ. ವೆಚ್ಚದ ಯೋಜನೆ: ಇದು ಸುಮಾರು 4.15 ಕೋಟಿ ರೂ. ವೆಚ್ಚದ ಯೋಜನೆ. ರೋಟರಿ ಸಂಸ್ಥೆ ಪೂರ್ಣ ಬಂಡವಾಳ ಹೂಡಲಿದೆ. ನಗರಸಭೆ ಡಂಪಿಂಗ್ ಯಾರ್ಡ್‌ನಲ್ಲಿ 2 ಎಕರೆ ಜಾಗ, ದಿನಂಪ್ರತಿ 20 ಟನ್‌ನಷ್ಟು ಹಸಿ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ವಹಿಸಬೇಕಿದೆ. ಮುಂದಿನ 15 ವರ್ಷ ಯೋಜನೆಗೆ ಜಾಗ ಬಳಸಿಕೊಳ್ಳುವ ಬಗ್ಗೆ ರೋಟರಿ ಸಂಸ್ಥೆಯೊಂದಿಗೆ ನಗರಸಭೆ ಕರಾರು ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಅವಧಿ ಮುಗಿದ ಬಳಿಕ ಒಪ್ಪಂದ ನವೀಕರಣವಾಗಲಿದೆ. ಇದಕ್ಕೆ ಪ್ರತಿಲವಾಗಿ ನಿರ್ವಹಣೆ ಸಂಸ್ಥೆ ಜೈವಿಕ ಅನಿಲದ ಪ್ರಮಾಣ ಆಧರಿಸಿ ರಾಜಧನವನ್ನು ನಗರಸಭೆಗೆ ಪಾವತಿಸಲಿದೆ.

    ತ್ಯಾಜ್ಯ ಸಂಸ್ಕರಿಸಿ ಗ್ಯಾಸ್ ಉತ್ಪಾದನೆ: ಪುತ್ತೂರಿನಲ್ಲಿ ಸಂಗ್ರಹವಾಗುವ ಆಹಾರ ಮತ್ತು ತರಕಾರಿ, ಶೌಚಗೃಹ, ಕೋಳಿ ಮತ್ತು ಮಾಂಸ, ಹಸಿ ಹುಲ್ಲು ತ್ಯಾಜ್ಯ ಸಂಸ್ಕರಿಸಿ ಬಯೋಗ್ಯಾಸ್ ಉತ್ಪಾದಿಸಲಾಗುತ್ತದೆ. ಸಂಗ್ರಹಿತ ತ್ಯಾಜ್ಯದಲ್ಲಿ ಹಸಿ ಮತ್ತು ಕೊಳೆಯುವ ತ್ಯಾಜ್ಯ ಬಹುಪಾಲು ಇದ್ದು, ಇದನ್ನು ಸೂಕ್ತ ಪ್ರಮಾಣದಲ್ಲಿ ವ್ಯವಸ್ಥೆಗೊಳಿಸಿ ಸಂಕುಚಿತ ಜೈವಿಕ ಅನಿಲ ಉತ್ಪಾದಿಸಲಾಗುತ್ತದೆ.

    ಬಯೋಗ್ಯಾಸ್ ಉತ್ಪಾದನೆಯಿಂದ ಪರಿಸರಕ್ಕೆ ಸೇರುವ ಮಿಥೇನ್ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಿದೆ. ಬಯೋಗ್ಯಾಸ್ ಉತ್ಪಾದನೆ ಸಂದರ್ಭ ಪರಿಸರಕ್ಕೆ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಬಿಡುಗಡೆ ಆಗುವುದಿಲ್ಲ. ಎಲ್ಲ ರೀತಿಯಲ್ಲಿ ಸುರಕ್ಷತೆ ಕ್ರಮ ಅನುಸರಿಸಿ ಅನುಷ್ಠಾನಿಸಲಾಗುವುದು.
    ಡಾ.ರಾಜೇಶ್ ಬೆಜ್ಜಂಗಳ
    ಬಯೋಗ್ಯಾಸ್ ಉತ್ಪಾದನಾ ಯೋಜನೆಯ ಸಲಹೆಗಾರ

    ರೋಟರಿ ಕ್ಲಬ್ ಪುತ್ತೂರು ಪೂರ್ವ ವೈಜ್ಞಾನಿಕ ಮಾದರಿಯಲ್ಲಿ ಘನತ್ಯಾಜ್ಯ ವಿಲೇವಾರಿ ಯೋಜನೆ ರೂಪಿಸಿ ನಗರಸಭೆಗೆ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ಕೌನ್ಸಿಲ್ ಸಭೆ ಒಪ್ಪಿಗೆ ನೀಡಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಕಳುಹಿಸಲಿದೆ.
    ಜೀವಂಧರ್ ಜೈನ್
    ಪುತ್ತೂರು ನಗರಸಭಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts