More

    ಹನುಮ ದೇವರು ಇನ್ನಿಲ್ಲ; ಬಿಂದು ಮಾಧವ ಶರ್ಮ ಶ್ರೀ ದೈವಾಧೀನ

    ಹೊಸದುರ್ಗ (ಚಿತ್ರದುರ್ಗ): ‘ನಡೆದಾಡುವ ಹನುಮದೇವರು’ ಎಂದೇ ಹೆಸರಾಗಿದ್ದ ಹೊಸದುರ್ಗ ತಾಲೂಕು ಬೆಲಗೂರು ಮಾರುತಿ ಪೀಠದ ಪೀಠಾಧಿಪತಿ ಅವಧೂತ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿ (75) ಶುಕ್ರವಾರ ದೈವಾಧೀನರಾದರು.

    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಅವಧೂತ ಪರಂಪರೆಗೆ ಸೇರಿದ ಶ್ರೀಗಳು, ವಾಕ್​ಸಿದ್ಧಿಯಿಂದ ಅಪಾರ ಭಕ್ತರನ್ನು ಸಂಪಾದಿಸಿದ್ದರು. ಆಸ್ತಿಕರು ಇವರನ್ನು ಹನುಮ ದೇವರು ಎಂದೇ ಭಾವಿಸಿ ಆರಾಧಿಸುತ್ತಿದ್ದರು. ದೇಶ-ವಿದೇಶಗಳಲ್ಲಿ ಭಕ್ತರನ್ನು ಹೊಂದಿದ್ದ ಶ್ರೀಗಳು ಬೆಲಗೂರಿನ ಮಾರುತಿ ಪೀಠವನ್ನು ಜಾತ್ಯತೀತ ಪುಣ್ಯಕ್ಷೇತ್ರವಾಗಿ ರೂಪಿಸಿದ್ದರು. ಅಭಯ ಪ್ರಧಾನದ ಮೂಲಕ ಕ್ಷೇತ್ರದ ಹಿರಿಮೆ ಹೆಚ್ಚಲು ಕಾರಣವಾಗಿದ್ದರು. ಬೆಲಗೂರಿನ ಶ್ರೀ ಲಕ್ಷ್ಮೀನಾರಾಯಣ ದೇವಾಲಯದ ಪೂಜೆ ನೆರವೇರಿಸುತ್ತಿದ್ದ ಸೀತಾರಾಮ ಭಟ್ಟ ಹಾಗೂ ಲಕ್ಷ್ಮೀದೇವಮ್ಮ ದಂಪತಿ ಪುತ್ರರಾಗಿ ಜನಿಸಿದ್ದ ಶ್ರೀಗಳು, ಬಾಲ್ಯದಿಂದಲೇ ಧಾರ್ವಿುಕ ಕ್ಷೇತ್ರದತ್ತ ಆಕರ್ಷಿತರಾಗಿ ಮಾರುತಿ ಉಪಾಸಕರಾಗಿದ್ದರು. ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡು ಕಡುಬಡತನದ ನಡುವೆ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ವೀರಪ್ರತಾಪ ಆಂಜನೇಯಸ್ವಾಮಿ ಹಾಗೂ ಲಕ್ಷ್ಮೀನಾರಾಯಣಸ್ವಾಮಿ ದೇಗುಲದ ಅರ್ಚಕರಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮಾರುತಿಯ ಆರಾಧನೆಗೆ ಜೀವ ಮುಡುಪಿಟ್ಟಿದ್ದರು.

    ಮಾರುತಿ ಪೀಠ: ಬೆಲಗೂರಿನ ವೀರಪ್ರತಾಪ ಆಂಜನೇಯಸ್ವಾಮಿ ದೇವಾಲಯವನ್ನು ಮಾರುತಿ ಪೀಠವಾಗಿ ರೂಪಿಸಿದ್ದ ಶ್ರೀಗಳು ಪ್ರತಿದಿನ ವಿಶೇಷ ಆರಾಧನೆ, ಅನ್ನದಾನಕ್ಕೆ ಆದ್ಯತೆ ನೀಡಿದ್ದರು. ಬರುವ ಭಕ್ತರಿಗೆ ವಸತಿ, ದಾಸೋಹ ಕಲ್ಪಿಸಿದ್ದರು. ಪ್ರತಿ ಶನಿವಾರ ವಿಶೇಷ ಪೂಜೆ, ರಾಮನಾಮ ಜಪ ಮುಂತಾದ ಧಾರ್ವಿುಕ ಕಾರ್ಯಕ್ರಮ ನಡೆಯುತ್ತಿದ್ದವು.

    ಬೆಲಗೂರಲ್ಲಿ ಅಂತ್ಯಕ್ರಿಯೆ

    ಬೆಲಗೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀಗಳ ಅಂತ್ಯಕ್ರಿಯೆ ವಿಧಿ ವಿಧಾನಗಳ ಮೂಲಕ ಜರುಗಿತು. ಕಾಗಿನೆಲೆ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಭಗೀರಥ ಸ್ವಾಮೀಜಿ, ಶಾಸಕರಾದ ಗೂಳಿಹಟ್ಟಿ ಶೇಖರ್, ತಿಪಟೂರು ಡಿ.ಸಿ.ನಾಗೇಶ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿ ರಾಜ್ಯ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಗಣ್ಯರು ಅಂತ್ರಕ್ರಿಯೆ ವೇಳೆ ಇದ್ದರು.

    ದೇವಾಲಯಗಳ ನಿರ್ಮಾಣ

    ಬೆಲಗೂರಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಗ್ರಾಮದೇವತೆ ಹೊನ್ನತಮ್ಮದೇವಿ, ಲಕ್ಷ್ಮಿ ದೇವಾಲಯ ಹಾಗೂ ಬೃಹತ್ ಶನಿ ದೇವರ ಮೂರ್ತಿಯನ್ನು ಒಳಗೊಂಡ ಶನಿ ದೇವಾಲಯ ನಿರ್ವಿುಸಿರುವ ಶ್ರೀಗಳು, ರಾಜ್ಯದ ವಿವಿಧೆಡೆ ನಿರ್ವಣಗೊಂಡ ಆಂಜನೇಯ ಸ್ವಾಮಿ ದೇವಾಲಯಗಳಿಗೆ ಉದಾರವಾಗಿ ಧನ ಸಹಾಯ ಮಾಡಿದ್ದಾರೆ.

    3 ಕೋಟಿ ರೂ. ವೆಚ್ಚದಲ್ಲಿ ಭಾರತ ಮಾತಾ ರಥ

    ಮಾರುತಿ ಪೀಠದ ಆರಾಧ್ಯದೈವ ಲಕ್ಷ್ಮೀನಾರಾಯಣ ದೇವರಿಗೆ ನೂರು ಅಡಿ ಎತ್ತರದ ಭಾರತ ಮಾತಾ ವಿಶೇಷ ರಥ ನಿರ್ವಿುಸಿದ್ದರು. 3 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ ರಥದಲ್ಲಿ ದೇಶಭಕ್ತರು, ಸಾಹಿತಿಗಳು, ಜ್ಞಾನಪೀಠ ಪುರಸ್ಕೃತರು ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಭಾವಚಿತ್ರಗಳನ್ನು ಕೆತ್ತಿಸಿ ಅಳವಡಿಸಿದ್ದಾರೆ.

    ಶ್ರೀಗಳಿಂದ ಅಭಯ ಪ್ರದಾನ

    ಮಾರುತಿ ಪೀಠದಲ್ಲಿ ಶ್ರೀಗಳಿಂದ ದೊರೆಯುತ್ತಿದ್ದ ಅಭಯ ಪ್ರದಾನಕ್ಕೆ ವಿಶೇಷ ಶಕ್ತಿಯಿತ್ತು. ಸಮಸ್ಯೆಗಳನ್ನು ಹೊತ್ತು ಪೀಠಕ್ಕೆ ಬರುವ ಭಕ್ತರಿಗೆ ಶ್ರೀಗಳು ಮಾತಿನ ಮೂಲಕ ಅಭಯ ನೀಡುತ್ತಿದ್ದರು. ಶ್ರೀಗಳು ನುಡಿಯುತ್ತಿದ್ದ ಮಾತುಗಳು ಅಕ್ಷರಶಃ ನಿಜವಾಗುತ್ತಿದ್ದ ಹಿನ್ನೆಲೆಯಲ್ಲಿ ಅಭಯಪ್ರದಾನ ಮಹತ್ವ ಪಡೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts