More

    ಭೂಮಿಯಲ್ಲಿ ಭಾರಿ ಸದ್ದು, ಅಲುಗಾಡಿದ ಬೃಹತ್ ಕಟ್ಟಡಗಳು, ಭಯದಿಂದ ಮನೆಯಿಂದ ಹೊರ ಬಂದ ಜನ, ಗುಮ್ಮಟನಗರಿಯಲ್ಲಿ ಭೂಕಂಪನ !

    ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಭೂಕಂಪದ ಅನುಭವವಾಗಿದ್ದು ನಗರ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾದರು. ಶನಿವಾರ ರಾತ್ರಿ 11.30 ರಿಂದ 12 ರ ನಡುವಿನ ಅವಧಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ನಗರದ ಟಕ್ಕೆ ಪ್ರದೇಶ, ರಾಮದೇವ ನಗರ, ಟ್ರೆಜರಿ ಕಾಲನಿ, ಸಿದ್ದೇಶ್ವರ ದೇವಸ್ಥಾನ, ಕೀರ್ತಿ ನಗರ, ಜಲನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಭೂಮಿ ಕಂಪಿಸಿದೆ. ಇದರಿಂದ ಗಾಬರಿಗೊಂಡ ಜನ ಮನೆಯಿಂದ ಹೊರಗೋಡೋಡಿ ಬಂದರು.

    ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಭೂಮಿ ಕಂಪಿಸಿತು. ಎರಡನೇ ಬಾರಿ ಜೋರಾದ ಸದ್ದಿನೊಂದಿಗೆ ಭೂಮಿ ಕಂಪಿಸಿದಾಗ ಜನ ಮಕ್ಕಳು, ವೃದ್ದರೊಂದಿಗೆ ಮನೆಯಿಂದ ಹೊರ ಬಂದರು. ರಾತ್ರಿ 9 ಗಂಟೆಯಿಂದಲೇ‌ ನಗರದಲ್ಲಿ‌ ನಾಯಿಗಳ ಬೊಗಳುವಿಗೆ ಸದ್ದು ಜೋರಾಗಿತ್ತು. ನಾಯಿಗಳು ಒಂದೇ ಸಮ ಜೋರಾಗಿ ಕೂಗಿದ್ದರಿಂದ ಮಕ್ಕಳು ಭಯಭೀತರಾಗಿದ್ದರು. ಬಳಿಕ ಭೂಮಿ ಕಂಪಿಸುವ ಮುನ್ನ ನಾಯಿಗಳು ಜೋರಾಗಿ ಕಿರುಚಾಡಿದವು‌‌. ಅಲ್ಲದೇ ಮಳೆ ಜೋರಾಗಿದ್ದರಿಂದ ಮನೆಯಿಂದ ಹೊರಬರಲಾಗದೆ ಕೆಲವರು ಅಂಗಳದಲ್ಲಿಯೇ ಠಿಕಾಣಿ ಹೂಡಿದರು. ಪ್ರಮುಖ ದೇವಸ್ಥಾನಗಳು ಹಾಗೂ‌ ಮಸೀದಿಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಮನೆ ಬಿಟ್ಟು ಹೊರ ಬರುವಂತೆ ಸೂಚಿಸಲಾಯಿತು.

    ಜಿಲ್ಲೆಯಲ್ಲಿ ಇಂಥ ಘಟನೆಗಳು ಮರುಕಳಿಸುತ್ತಲೇ ಇದ್ದರೂ ಈವರೆಗೂ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಕೆಲ ದಿನಗಳ ಹಿಂದೆ ಮುದ್ದೇಬಿಹಾಳ, ಬ.ಬಾಗೇವಾಡಿ ಮತ್ತಿತರ ಭಾಗಗಳಲ್ಲಿ ಇಂಥದ್ದೇ ಸನ್ನಿವೇಶ ಕಂಡು ಬಂದಿತ್ತು. ಆಗಲ್ಲ ಇದೊಂದು ಭೂಮಿಯಲ್ಲಿ ನಡೆಯುವ ಸ್ವಾಭಾವಿಕ ಪ್ರಕ್ರಿಯೆ ಎಂದೇ ಅಧಿಕಾರಿಗಳು ಸಮಜಾಯಿಷಿ ನೀಡಿದರು. ಕಳೆದ ವರ್ಷ ಜಿಲ್ಲೆಗೆ ಆಗಮಿಸಿದ್ದ ಬೆಂಗಳೂರಿನ ವಿಜ್ಞಾನಿಗಳ ತಂಡ ಸಹ ಇಂಥದ್ದೇ ಸಬೂಬು ನೀಡಿ ನಿರ್ಗಮಿಸಿತ್ತು‌. ಎರಡು ವರ್ಷಗಳ ಹಿಂದೆ ಹುಬನೂರಿನಲ್ಲಿ ತಾತ್ಕಾಲಿಕವಾಗಿ ರಿಕ್ಟರ್ ಮಾಪಕ ಅಳವಡಿಸಲಾಗಿತ್ತಾದರೂ ಆ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ಇದೀಗ ಬೆಂಗಳೂರಿನ ವಿಜ್ಞಾನಿಗಳು ರಿಕ್ಟರ್ ಮಾಪಕ ಅಳವಡಿಸಲು ಮುಂದೆ ಬಂದಿದ್ದರಾದರೂ ಆ ಕಾರ್ಯ ಇನ್ನೂ ಕೈಗೂಡಿಲ್ಲ.
    ಒಟ್ಟಿನಲ್ಲಿ ಬಯಲು ಸೀಮೆಯ ಜನ ಭೂ ಕಂಪದ ಆತಂಕಕ್ಕೆ ಒಳಗಾಗಿದ್ದು ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದು ನೋಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts