More

    ಗರ್ಭಿಣಿ ಕರೊನಾ ಮುಕ್ತ, ಸಾಂಪ್ರದಾಯಿಕವಾಗಿ ಬೀಳ್ಕೊಟ್ಟ ಜಿಲ್ಲಾಡಳಿತ

    ಉಡುಪಿ: ಜಿಲ್ಲೆಯ ಕೊವಿಡ್-19 ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಟ್ಕಳ ಮೂಲದ ಗರ್ಭಿಣಿ ಸಂಪೂರ್ಣ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಈ ವೇಳೆ ಮಹಿಳೆಗೆ ಜಿಲ್ಲಾಡಳಿತ ವತಿಯಿಂದ ಸಾಂಪ್ರದಾಯಿಕವಾಗಿ ಮಲ್ಲಿಗೆ ಹೂ, ಹಣ್ಣು ಮತ್ತು ಸಿಹಿತಿಂಡಿ ನೀಡಿ ಭಾವನಾತ್ಮಕವಾಗಿ ಬೀಳ್ಕೊಡಲಾಯಿತು.

    ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಮಹಿಳೆಗೆ ಸಿಹಿತಿಂಡಿಯ ಪೊಟ್ಟಣ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಮಲ್ಲಿಗೆ ಹೂ ಮತ್ತು ಹಣ್ಣು ನೀಡಿ ಹಾರೈಸಿದರು.

    ಮಹಿಳೆ ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಕರೊನಾ ದೃಡಪಟ್ಟಿತ್ತು. ತೀವ್ರ ಉಸಿರಾಟ ಸಮಸ್ಯೆ ತಲೆದೋರಿದಾಗ ಏ.9ರಂದು ಉಡುಪಿಗೆ ಕರೆತರಲಾಗಿತ್ತು. ಏ.21ರಂದು ಹಾಗೂ 23ರಂದು ಪರೀಕ್ಷಾ ವರದಿಗಳು ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಳಿಕ ಆಂಬುಲೆನ್ಸ್‌ನಲ್ಲಿ ಭಟ್ಕಳಕ್ಕೆ ಕಳಿಸಿಕೊಡಲಾಯಿತು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಜಿಲ್ಲಾ ಕೊವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಡಾ.ಪ್ರೇಮಾನಂದ್, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೋವಿಡ್ ಆಸ್ಪತ್ರೆಯ ಡಾ.ಶಶಿಕಿರಣ್ ಹಾಗೂ ಕೊವಿಡ್ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
    ಗರ್ಭಿಣಿ ಭಟ್ಕಳದ ಕ್ವಾರಂಟೈನ್ ಕೇಂದ್ರ ತಲುಪಿದ್ದಾರೆ. ದುಬೈನಿಂದ ಆಗಮಿಸಿದ ಗರ್ಭಿಣಿಯ ಪತಿ ಕರೊನಾ ಸೋಂಕಿಗೆ ಕಾರವಾರದ ಪತಂಜಲಿ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೆರಡು ದಿನದಲ್ಲಿ ಗುಣಮುಖರಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಜಿಲ್ಲೆಗೆ ಹೆಮ್ಮೆ: ಶುಕ್ರವಾರ ಉಡುಪಿ ಜಿಲ್ಲೆಗೆ ಶುಭದಿನ. ಕರೊನಾ ಪೀಡಿತ ಗರ್ಭಿಣಿ ಸಂಪೂರ್ಣ ಗುಣಮುಖಳಾಗಿದ್ದು, ಉಡುಪಿಯ ಹಿರಿಮೆ ಹೆಚ್ಚಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೊನಾ ಪೀಡಿತ ಗರ್ಭಿಣಿಗೆ ಚಿಕಿತ್ಸೆ ನೀಡಲು ಅಸಾಧ್ಯ ಎಂದು ನಿರ್ಧರಿಸಿದ್ದ ರೋಗಿಗೆ, ಪ್ರಾರಂಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಚಿಕಿತ್ಸೆ ನಿರಾಕರಿಸಲಾಗಿತ್ತು. ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಈ ಪ್ರಕರಣವನ್ನು ಚಾಲೆಂಜ್ ಆಗಿ ತೆಗೆದುಕೊಳ್ಳಲಾಗಿತ್ತು. ಗರ್ಭಿಣಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಆಕೆ ಮತ್ತು ಹೊಟ್ಟೆಯಲ್ಲಿರುವ ಮಗುವನ್ನು ಕರೊನಾದಿಂದ ರಕ್ಷಿಸಲಾಗಿದೆ. ಈ ಕಾರ್ಯದಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಉತ್ತಮವಾಗಿ ಕೆಲಸ ಮಾಡಿದ್ದು, ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

    ಉಡುಪಿಗೆ ಬರುವ ಮುಂಚೆ ನನಗೆ ತುಂಬಾ ಭಯ ಆಗಿತ್ತು. ಇಲ್ಲಿನ ವೈದ್ಯರು ಮತ್ತು ನರ್ಸ್‌ಗಳು ಭಯ ದೂರ ಮಾಡಿ ಧೈರ್ಯ ತುಂಬಿದರು. ನನಗೆ ಎಲ್ಲ ರೀತಿಯ ಸಹಕಾರ ನೀಡಿದ್ದು, ಇಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆದಂತೆ ಅನಿಸಿತು. ಪ್ರಸ್ತುತ ಸಂಪೂರ್ಣ ಗುಣಮುಖಳಾಗಿದ್ದು, ದೇವರಿಚ್ಛೆ ಇದ್ದರೆ ಹೆರಿಗೆಗೂ ಉಡುಪಿಗೆ ಬರುತ್ತೇನೆ.
    – ಗುಣಮುಖಗೊಂಡ ಗರ್ಭಿಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts