More

    ಭರಮಸಾಗರಕ್ಕೆ ತರಳಬಾಳು ಹುಣ್ಣಿಮೆ ಭಾಗ್ಯ

    ನಾಡಿಗೇರ್ ಭರಮಸಾಗರ: ಸಿರಿಗೆರೆ ಮಠ ಪ್ರತಿ ವರ್ಷ ಆಯೋಜಿಸುವ ತರಳಬಾಳು ಹುಣ್ಣಿಮೆ ಮಹೋತ್ಸವ, ಆ ಪ್ರದೇಶದಲ್ಲಿ ನೀರಾವರಿ ಸೇರಿ ವಿವಿಧ ರೀತಿ ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆಯಲಿದೆ.

    ಈ ಹಿನ್ನೆಲೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆ ಮಾಡಲು ಪೈಪೋಟಿಗೆ ಬೀಳುತ್ತಾರೆ. ಇಂತಹ ಅವಕಾಶ ಸಿಗುವುದು ಭಾಗ್ಯವೆಂದೇ ಜನರು, ಭಕ್ತರು ಭಾವಿಸುತ್ತಾರೆ.

    ನಮ್ಮೂರು, ನಮ್ಮ ತಾಲೂಕು, ಜಿಲ್ಲೆಗೆ ಅವಕಾಶ ನೀಡುವಂತೆ ಶ್ರೀಗಳಲ್ಲಿ ನಿರಂತರ ಒತ್ತಾಸೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಲವು ವರ್ಷಗಳಿಂದ ಬೇಡಿಕೆ ಮಂಡಿಸುತ್ತಲೇ ಬಂದಿದ್ದ ಭರಮಸಾಗರಕ್ಕೆ ಈ ಬಾರಿ ಸಿಹಿ ಸುದ್ದಿ ಸಿಕ್ಕಿದೆ.

    ಕೊಟ್ಟೂರಲ್ಲಿ ಈಚೆಗೆ ಆಯೋಜಿಸಿದ್ದ ಹುಣ್ಣಿಮೆ ಸಮಾರಂಭದಲ್ಲಿ ಶ್ರೀಗಳು ಮುಂದಿನ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ ನಡೆಯಲಿದೆ ಎಂದು ಪ್ರಕಟಿಸಿದರು. ಇದಕ್ಕೆ ಕಾರಣ ಭರಮಸಾಗರದ ಜನರ ಒತ್ತಾಸೆ.

    ಇನ್ನೊಂದೆಡೆ ಈ ಭಾಗದಲ್ಲಿ ಸಾಸ್ವೇಹಳ್ಳಿ ಏತನೀರಾವರಿ ಯೋಜನೆ ಮೂಲಕ ಕೆರೆ-ಕಟ್ಟೆಗಳು ಮೈದುಂಬಿವೆ. ಇನ್ನಷ್ಟು ಕೆರೆ ಕಟ್ಟೆಗಳಿಗೆ ನೀರು ಹರಿಸಬೇಕಿದೆ. ಈ ಮೂಲಕ ಭರಮಸಾಗರ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಮಹೋತ್ಸವ ಸಹಕಾರಿ ಆಗಲಿದೆ ಎಂಬ ಆಶಯ ಮನೆ ಮಾಡಿದೆ.

    ಕೊಟ್ಟೂರು ಉತ್ಸವದ ಬಳಿಕ ಸಿರಿಗೆರೆಗೆ ತೆರಳುವ ಮಾರ್ಗಮಧ್ಯೆ ಭರಮಸಾಗರದ ದೊಡ್ಡಕೆರೆ ಏರಿ ದುರಸ್ತಿ ಕಾರ್ಯ ವೀಕ್ಷಿಸಿದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೆರೆ ಏರಿ ಸೇರಿ ನೀರಾವರಿಗೆ ಸೇರಿದ ಕೆಲಸಗಳನ್ನು ತ್ವರಿತ ಪೂರ್ಣಗೊಳಿಸಲು ಶಾಸಕ ಚಂದ್ರಪ್ಪ ಅವರಿಗೆ ಸಲಹೆ ನೀಡುವ ಜತೆಗೆ ನೆರೆದ ಜನಕ್ಕೆ ಮುಂದಿನ ವರ್ಷದ ಉತ್ಸವಕ್ಕೆ ಸಿದ್ಧರಾಗಿ ಎಂಬ ಸಂದೇಶ ರವಾನಿಸಿದರು.

    ಭರಮಸಾಗರಕ್ಕೆ ಸಿಕ್ಕ ಅವಕಾಶ ಬಳಸಿಕೊಂಡು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಉತ್ಸವ ಆಚರಿಸೋಣ ಎಂದು ಈ ಭಾಗದ ಭಕ್ತರು, ಗಣ್ಯರು, ಸಂಘಸಂಸ್ಥೆಗಳು ಆಶಯ ವ್ಯಕ್ತಪಡಿಸಿವೆ.

    ಬರಿದಾಗಿದ್ದ ಭರಮಣ್ಣನಾಯಕ ಕೆರೆ ಮೈದುಂಬಿ, ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೊಳ್ಳಲು ಸಿರಿಗೆರೆ ಶ್ರೀಗಳ ಇಚ್ಛಾಶಕ್ತಿಯೇ ಕಾರಣ. ಇಂತಹ ಸಂಭ್ರಮದ ಸಂದರ್ಭ ನಮ್ಮೂರಲ್ಲಿ ಹುಣ್ಣಿಮೆ ಮಹೋತ್ಸವ ಆಚರಣೆ ಮಾಡಲು ಘೋಷಿಸಿರುವುದು ಸಂತಸ ತಂದಿದೆ ಎಂದು ಸಮಾಜ ಸೇವಕಿ ಲೋಲಾಕ್ಷಮ್ಮ, ಸಾಹಿತಿ ನಿರ್ಮಲಾ ಮಂಜುನಾಥ್, ಶಾಂತಾ ಅಶೋಕ, ಮಹಿಳಾ ಸಂಘಗಳ ಗೀತಾ ರಾಜಶೇಖರ್, ರೇಖಾ ಪ್ರಭು, ಅಕ್ಕಮಹಾದೇವಿ, ಕಮಲಮ್ಮ ಹಂಪನೂರು, ನಂದಾ ಇತರರರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts